ಶುದ್ಧ ನೀರಿನ ಘಟಕ, ಬೀದಿದೀಪಗಳಿಗೆ ಮೀಟರ್‌: ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಧಾರ

7
ಚಿನಕುರಳಿ ಗ್ರಾ.ಪಂ.ನಿಂದ ಪ್ರಾಯೋಗಿಕ ಅಳವಡಿಕೆ

ಶುದ್ಧ ನೀರಿನ ಘಟಕ, ಬೀದಿದೀಪಗಳಿಗೆ ಮೀಟರ್‌: ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಧಾರ

Published:
Updated:
Deccan Herald

ಮಂಡ್ಯ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀದಿದೀಪಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ವಿದ್ಯುತ್‌ ಸಂಪರ್ಕಕ್ಕೆ ಪ್ರಾಯೋಗಿಕವಾಗಿ ಮೀಟರ್‌ ಅಳವಡಿಸುವ ನಿರ್ಧಾರವನ್ನು ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.

ಸದಸ್ಯ ಬಿ.ಎಲ್‌.ದೇವರಾಜು ವಿಷಯ ಪ್ರಸ್ತಾಪಿಸಿ ‘ಗ್ರಾಮ ಪಂಚಾಯಿತಿಗಳಲ್ಲಿ ಹಣದ ಕೊರತೆ ಇದೆ. ಶುದ್ಧ ಕುಡಿಯುವ ನೀರು ಹಾಗು ಬೀದಿದೀಪಗಳ ವಿದ್ಯುತ್‌ ದರ ಪಾವತಿಸಲು ಗ್ರಾಮ ಪಂಚಾಯಿತಿಯ ಬಹುತೇಕ ಹಣ ಖರ್ಚಾಗುತ್ತಿದೆ. ಗ್ರಾಮೀಣ ಭಾಗದ ಹಲವೆಡೆ ನೀರಿನ ಘಟಕಗಳು ಹಾಳಾಗಿವೆ. ಬೀದಿ ದೀಪಗಳೂ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಆದರೆ ಸೆಸ್ಕ್‌ ಅಧಿಕಾರಿಗಳು ಸರಾಸರಿ ವಿದ್ಯುತ್‌ ದರ ವಸೂಲಿ ಮಾಡುತ್ತಿದ್ದಾರೆ. ಬಳಕೆಗಿಂತಲೂ ಹೆಚ್ಚಾಗಿ ಹಣ ಕೊಡಬೇಕಾಗಿದೆ. ಅನಾವಶ್ಯಕ ಹಣ ಪಾವತಿ ತಡೆಯಲು ಕೂಡಲೇ ಮೀಟರ್‌ ಅಳವಡಿಸಬೇಕು’ ಎಂದು ಒತ್ತಾಯಿಸಿದರು.

‘ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ, ಸೆಸ್ಕ್‌ ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳ ನಡುವೆ ಸಮನ್ವಯತೆಯ ಕೊರತೆ ಇದೆ. ಪರಿವರ್ತಕ ಬದಲಾವಣೆಗೂ ಸೆಸ್ಕ್‌ ಸಿಬ್ಬಂದಿ ಹಣ ಪಾವತಿಸುವಂತೆ ಕೇಳುತ್ತಿದ್ದಾರೆ. ಕುಡಿಯುವ ನೀರು ಒದಗಿಸುವ ಕೊಳವೆಬಾವಿಗಳಿಗೆ ಮುಂಗಡವಾಗಿ ಹಣ ಕಟ್ಟುವ ಅವಶ್ಯಕತೆ ಇಲ್ಲ. ಆದರೂ ಸೆಸ್ಕ್‌ ಸಿಬ್ಬಂದಿ ಹಣ ಪಾವತಿಸದೇ ವಿದ್ಯುತ್‌ ಸಂಪರ್ಕ ಕೊಡುತ್ತಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಹಣದ ಕೊರತೆ ಇದ್ದು ನೀರಿನ ಉದ್ದೇಶಕ್ಕಾಗಿ ಅಪಾರ ಹಣ ಖರ್ಚು ಮಾಡಬೇಕಾಗಿದೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಸಿಇಒ ಅವರು ಈ ಮೂರು ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು.

ಸದಸ್ಯರಾದ ಎನ್‌.ಶಿವಣ್ಣ, ಎಚ್‌.ಎನ್‌.ಯೋಗೇಶ್‌, ಸಿ.ಅಶೋಕ್‌ ಮುಂತಾದದವರು, ಗ್ರಾಮ ಪಂಚಾಯಿತಿಯಲ್ಲಿ ಹಣ ಪೋಲಾಗುವುದನ್ನು ತಡೆಯಲು ಕೂಡಲೇ ಬೀದಿದೀಪ ಹಾಗೂ ಶುದ್ಧ ನೀರಿನ ಘಟಕಗಳಿಗೆ ಮೀಟರ್‌ ಅಳವಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್‌ ಅಧೀಕ್ಷಕ ಎಂಜಿನಿಯರ್‌ ಉಮೇಶ್‌ ‘ಚಿನಕುರಳಿ ಗ್ರಾಮ ಪಂಚಾಯಿತಿಯಿಂದ ಪ್ರಾಯೋಗಿಕವಾಗಿ ಮೀಟರ್‌ ಅಳವಡಿಸುವ ಪ್ರಕ್ರಿಯೆ ಆರಂಭಿಸಲಾಗುವುದು. ಅಲ್ಲಿ ಯಶಸ್ವಿಯಾದರೆ ನಂತರ ಜಿಲ್ಲೆಯಾದ್ಯಂತ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗೆ ವಿಸ್ತರಿಸಲಾಗುವುದು’ ಎಂದು ಹೇಳಿದರು.

ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲ
ವಿದ್ಯಾರ್ಥಿನಿಲಯಗಳ ಅವ್ಯವಸ್ಥೆಯ ಬಗ್ಗೆ ಮಾತನಾಡಿದ ಸದಸ್ಯೆ ಸುಜಾತಾ ಪುಟ್ಟು ‘ಮಳವಳ್ಳಿ ತಾಲ್ಲೂಕುಗಳ ಮಹಿಳಾ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲ. ಹಾಸ್ಟೆಲ್‌ಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ಪಡೆಯುತ್ತಿಲ್ಲ. ಹೀಗಾಗಿ ಹೆಣ್ಣುಮಕ್ಕಳು ಎಲ್ಲಿಗೆ ಹೋಗುತ್ತಾರೆ ಎಂಬ ಬಗ್ಗೆ ಪೋಷಕರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ರಾತ್ರಿ ಕಾವಲುಗಾರರೂ ಇಲ್ಲದ ಕಾರಣ ಹೆಣ್ಣುಮಕ್ಕಳಿಗೆ ಸಮಸ್ಯೆಯಾಗಿದೆ. ವಾರ್ಡನ್‌ಗಳ ನಿರ್ಲಕ್ಷದಿಂದ ಹೆಣ್ಣುಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ’ ಎಂದರು. ಸಭೆಯಲ್ಲಿ ಈ ವಿಷಯ ಸದಸ್ಯರ ಕೋಪಕ್ಕೆ ಕೋಪಕ್ಕೆ ಕಾರಣವಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ ‘ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಮಹಿಳಾ ಹಾಸ್ಟೆಲ್‌ಗಳಲ್ಲಿ ಕೂಡಲೇ ಕಾವಲುಗಾರರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು. ಅಲ್ಲಿಯವರೆಗೂ ಅಡುಗೆ ಸಿಬ್ಬಂದಿಯನ್ನು ಪಾಳಿಯ ಮೇಲೆ ಕಾವಲುಗಾರರನ್ನಾಗಿ ನೇಮಕ ಮಾಡಬೇಕು. ರಾತ್ರಿಯ ಹೊತ್ತಿನಲ್ಲಿ ಕಾವಲುಗಾರರು ಹಾಸ್ಟೆಲ್‌ನಲ್ಲೇ ತಂಗಬೇಕು. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ನಾಗರತ್ನಾ ಸ್ವಾಮಿ, ಉಪಾಧ್ಯಕ್ಷ ಗಾಯತ್ರಿ ರೇವಣ್ಣ, ಕೃಷಿ ಮತ್ತು ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಕೆ.ಮಂಜು, ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಶಿವಪ್ರಕಾಶ್‌, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಾಜರಿದ್ದರು.

ಸಭೆಯಲ್ಲಿ ಕಣ್ಣೀರಿಟ್ಟ ಸುನಂದಮ್ಮ

ಸಭೆ ಆರಂಭವಾದೊಡನೆ ಮಾಯಗೋನಹಳ್ಳಿ ಕ್ಷೇತ್ರದ ಸದಸ್ಯೆ ಸುನಂದಮ್ಮ ಮಾತನಾಡಿ ‘ನಮ್ಮ ಕ್ಷೇತ್ರದ ವಿದ್ಯಾರ್ಥಿನಿಲಯಗಳಲ್ಲಿ ಅವ್ಯವಸ್ಥೆ ತುಂಬಿ ತುಳುಕುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಇಬ್ಬರು ವಾರ್ಡನ್‌ಗಳು ನನ್ನ ವಿರುದ್ಧ ಅಸಂವಿಧಾನಿಕ ಪದ ಬಳಸಿ ನಿಂದನೆ ಮಾಡಿದ್ದಾರೆ. ಪುಡಿರೌಡಿಗಳನ್ನು ಕಟ್ಟಿಕೊಂಡು ಬೆದರಿಕೆ ಹಾಕಿದ್ದಾರೆ. ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಭೆ ನಡೆಯಲು ಬಿಡುವುದಿಲ್ಲ’ ಎಂದು ಕಣ್ಣೀರು ಹಾಕಿದರು.

ಸಿಇಒ ಯಾಲಕ್ಕಿಗೌಡ ಮಾತನಾಡಿ ‘ಸಂಜೆಯೊಳಗೆ ಆ ಇಬ್ಬರು ವಾರ್ಡನ್‌ಗಳನ್ನು ಸಭೆಗೆ ಕರೆಸಲಾಗುವುದು. ತಪ್ಪೆಸಗಿದ್ದರೆ ಅವರು ವಿರುದ್ಧ ಕ್ರಮ ಜರುಗಿಸಲಾಗುವುದು. ಈಗ ಸಭೆಗೆ ಅಡ್ಡಿಪಡಿಸುವುದು ಬೇಡ’ ಎಂದು ಮನವಿ ಮಾಡಿದರು. ನಂತರ ಸಭೆ ಮುಂದುವರಿಯಿತು.

ಕೊಡಗು ಸಂತ್ರಸ್ತರಿಗೆ ₹ 38 ಲಕ್ಷ

‘ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು ಧನ ಸಹಾಯ ಮಾಡಿವೆ. ಒಟ್ಟು ₹ 38 ಲಕ್ಷ ಹಣ ಸಂಗ್ರಹವಾಗಿದ್ದು ಕೂಡಲೇ ಸಂತ್ರಸ್ತರ ಪರಿಹಾರ ನಿಧಿಗೆ ಹಣವನ್ನು ಜಮಾ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ನಾಗರತ್ನಾ ಸ್ವಾಮಿ ಸಭೆಯಲ್ಲಿ ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಎಲ್ಲಾ ಸದಸ್ಯರು ತಮ್ಮ ಎರಡು ತಿಂಗಳ ಗೌರವಧನವನ್ನು ಕೊಡಗು ಸಂತ್ರಸ್ತರ ನಿಧಿಗೆ ಸಲ್ಲಿಸುವ ಕುರಿತು ಒಪ್ಪಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !