ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವೋರ್ಸ್‌ಗೆ ಒತ್ತಾಯಿಸುತ್ತಿದ್ದ ಪುಷ್ಪಾರ್ಚನಾ

ಕಾನೂನು ವಿದ್ಯಾರ್ಥಿನಿಯ ಅಸ್ವಾಭಾವಿಕ ಸಾವಿನ ಪ್ರಕರಣ
Last Updated 25 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ವಕೀಲ ಚಂದ್ರಾನಾಯಕ್‌ ತಮ್ಮ ಪತ್ನಿಗೆ ಡಿವೋರ್ಸ್ ನೀಡುವಂತೆ, ಮಲ್ಲೇಶ್ವರದ ಪೇಯಿಂಗ್‌ ಗೆಸ್ಟ್‌ ಕಟ್ಟಡದಲ್ಲಿ ಶನಿವಾರ (ನ.24) ಅಸ್ವಾಭಾವಿಕ ರೀತಿಯಲ್ಲಿ ಸಾವನ್ನಪ್ಪಿರುವ ಅಂಡಮಾನ್‌–ನಿಕೋಬಾರ್‌ನ ಕಾನೂನು ವಿದ್ಯಾರ್ಥಿನಿ ಪುಷ್ಪಾರ್ಚನಾಲಾಲ್‌ ಪದೇ ಪದೇ ಒತ್ತಾಯಿಸುತ್ತಿದ್ದರು’ ಎಂಬ ಅಂಶವನ್ನು ಪ್ರಕರಣದ ಎರಡನೇ ಆರೋಪಿಯೂ ಆಗಿರುವ ಹೈಕೋರ್ಟ್‌ ಪ್ರಾಸಿಕ್ಯೂಟರ್‌ ಚೇತನ್‌ ದೇಸಾಯಿ ಬಹಿರಂಗಪಡಿಸಿದ್ದಾರೆ.

ಈ ಕುರಿತಂತೆ ಭಾನುವಾರ, ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಚಂದ್ರಾನಾಯಕ್‌ ಜೊತೆ ಇಂಟರ್ನಿಯಾಗಿ ಕೆಲಸ ಮಾಡುತ್ತಿದ್ದ ಆಕೆ ಪುರುಷ ವ್ಯಾಮೋಹದ ಗುಂಗಿನಲ್ಲಿದ್ದಳು. ಇದು ಗೊತ್ತಾಗುತ್ತಲೇ ಚಂದ್ರಾನಾಯಕ್‌ ಆಕೆಯೊಟ್ಟಿಗಿನ ಬಾಂಧವ್ಯವನ್ನು ಹಠಾತ್ತನೆ ಕಡಿದುಕೊಂಡಿದ್ದರು. ಈ ವಿಷಯ ನನಗೆ ಗೊತ್ತಾಗುತ್ತಲೇ ಆಕೆಗೆ ಬುದ್ಧಿ ಹೇಳಲು ಹೋಗಿ ಸಂಕಟಕ್ಕೆ ಈಡಾಗಿದ್ದೇನೆ’ ಎಂದು ಅಲವತ್ತುಕೊಂಡರು.

‘ಆಕೆಯನ್ನು ನಾನು ತಂಗಿ ಎಂದೇ ಭಾವಿಸಿದ್ದೆ ಹಾಗೂ ಅದೇ ರೀತಿ ನಡೆದುಕೊಂಡಿದ್ದೆ. ಆದರೆ, ಆಕೆ ದೂರಿನಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ನನ್ನ ಮುಖಕ್ಕೆ ಮಸಿ ಬಳಿದು ಹೋಗಿದ್ದಾರೆ’ ಎಂದು ದುಃಖ ತೋಡಿಕೊಂಡರು.

‘ಇದೇ 21ರಂದು ಆಕೆ ಕಮರ್ಶಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಗೆ ನೀಡಿರುವ ದೂರು ಸತ್ಯಕ್ಕೆ ದೂರವಾಗಿದೆ. ಇದನ್ನು ನಾನು ಕೋರ್ಟ್‌ನಲ್ಲಿ ಒರೆಗೆ ಹಚ್ಚಲಿದ್ದೇನೆ’ ಎಂದೂ ಅವರು ಹೇಳಿದರು.

ಚಂದ್ರಾನಾಯಕ್ ನವೆಂಬರ್‌ 19ರಂದು ‍ಪುಷ್ಪಾರ್ಚನಾ ವಿರುದ್ಧ ನಗರ ಪೊಲೀಸ್‌ ಕಮಿಷನರ್‌ ಅವರಿಗೆ ದೂರೊಂದನ್ನು ಸಲ್ಲಿಸಿದ್ದರು.

ದೂರಿನಲ್ಲಿ ಏನಿದೆ?: ‘ನಾನು 15 ವರ್ಷಗಳಿಂದ ವಕೀಲಿಕೆ ಮಾಡುತ್ತಿದ್ದು, ಜಯಂತ್‌ ಪಟ್ಟಣಶೆಟ್ಟಿ ಅಸೋಸಿಯೇಟ್ಸ್‌ನಲ್ಲಿ ಇದ್ದೇನೆ. ನಮ್ಮ ಕಚೇರಿಯಲ್ಲಿ 15ಕ್ಕೂ ಹೆಚ್ಚು ಕಿರಿಯ ಮಹಿಳಾ ವಕೀಲರಿದ್ದಾರೆ. ಬಿಷಪ್‌ ಕಾಟನ್‌ ಕಾಲೇಜು ವಿದ್ಯಾರ್ಥಿನಿಯಾದ ಪುಷ್ಪಾರ್ಚನಾ 2017ರಲ್ಲಿ ನಮ್ಮ ಕಚೇರಿಯಲ್ಲಿ ಇಂಟರ್ನಿಯಾಗಿ ಸೇರಿದರು. ನಂತರ ನನ್ನ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಾನು ಆಕೆಗೆ ಮಾರ್ಗದರ್ಶನ ಮಾಡುತ್ತಿದ್ದೆ’ ಎಂದು ಅವರು ದೂರಿನಲ್ಲಿ ವಿವರಿಸಿದ್ದರು.

‘ಆಕೆ ಕಚೇರಿಗೆ ನಿಯಮಿತವಾಗಿ ಹಾಜರಾಗುತ್ತಿರಲಿಲ್ಲ. ಖಿನ್ನತೆಯಿಂದ ಕೂಡಿದಂತೆ ಕಂಡು ಬರುತ್ತಿದ್ದರು. ಆಕೆ ಬಾಯ್‌ಫ್ರೆಂಡ್‌ನಿಂದ ಮೋಸಕ್ಕೆ ಒಳಗಾಗಿದ್ದಾರೆ ಎಂಬುದು ನನಗೆ ನಂತರ ಗೊತ್ತಾಯಿತು. ಆಕೆ ಒಬ್ಬ ಮಾದಕ ಪದಾರ್ಥ ವ್ಯಸನಿಯಾಗಿದ್ದರು. ಈ ರೀತಿಯ ದುಶ್ಚಟಕ್ಕೆ ಬೀಳದಂತೆ ನಾನು ಬುದ್ಧಿವಾದ ಹೇಳಿದ್ದೆ. ಉತ್ತಮ ವಿದ್ಯಾರ್ಥಿಯಾಗಿ ಒಳ್ಳೆಯ ಜೀವನ ನಡೆಸುವಂತೆ ಸೂಚಿಸಿದ್ದೆ’ ಎಂದೂ ದೂರಿನಲ್ಲಿ ತಿಳಿಸಲಾಗಿದೆ.

‘ಅದೊಂದು ದಿನ ಆಕೆ ಮದ್ಯಸೇವಿಸಿ ಕಚೇರಿಗೆ ಬಂದಿದ್ದಳು. ತನ್ನೊಟ್ಟಿಗೆ ಗಾಂಜಾವನ್ನೂ ಇಟ್ಟುಕೊಂಡಿದ್ದಳು. ಈ ವಿಷಯವನ್ನು ನಾನು ಸೀನಿಯರ್‌ ಮತ್ತು ನಿಮ್ಮ ತಂದೆಯ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದೆ. ಆದರೆ, ಆಕೆ ಅದನ್ನೆಲ್ಲಾ ಲೆಕ್ಕಿಸುವ ಸ್ಥಿತಿಯಲ್ಲಿ ಇರಲಿಲ್ಲ. ಮಾನಸಿಕ ಸಮತೋಲನ ಕಳೆದುಕೊಂಡಿದ್ದಳು. ಈ ವಿಷಯವನ್ನು ನೀವು ಯಾರಿಗಾದರೂ ತಿಳಿಸಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನನಗೇ ಬೆದರಿಸಿದ್ದಳು’ ಎಂದಿದ್ದಾರೆ.

‘ಆಕೆ ನನ್ನೊಟ್ಟಿಗೆ ಬೆಳೆಸಿಕೊಂಡಿದ್ದ ವ್ಯಾಮೋಹದ ಬಗ್ಗೆ ನನ್ನ ಪತ್ನಿ ಕೂಡಾ ಆಕೆಯನ್ನು ಅನೇಕ ಬಾರಿ ಎಚ್ಚರಿಸಿದ್ದರು. ಇದನ್ನೆಲ್ಲಾ ನಾನು ಅಂಡಮಾನ್‌–ನಿಕೊಬಾರ್‌ನಲ್ಲಿರುವ ಹಿರಿಯ ವಕೀಲರೂ ಆದ ಅವರ ತಂದೆ ತುಳಸಿ ಲಾಲ್‌ ಅವರಿಗೂ ತಿಳಿಸಿದ್ದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ನಾನೊಬ್ಬ ಲಂಬಾಣಿ ಸಮುದಾಯಕ್ಕೆ ಸೇರಿದ ವಿನಯಪೂರ್ವಕ ನಡವಳಿಕೆಯ ವಕೀಲ. ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಆಕೆ ನನ್ನ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದರು.

ಕೊಲಿಜಿಯಂಗೆ ದೂರಿನ ಪ್ರತಿ ರವಾನೆ: ‘ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂದು ಪುಷ್ಪಾರ್ಚನಾ ಪೊಲೀಸ್‌ ದೂರು ಕೊಡುವ ಮುನ್ನವೇ ಸುಪ್ರೀಂ ಕೋರ್ಟ್ ಕೊಲಿಜಿಯಂಗೂ ದೂರಿನ ಪ್ರತಿ ಕಳುಹಿಸಿದ್ದರು’ ಎಂಬ ಅಂಶ ಬೆಳಕಿಗೆ ಬಂದಿದೆ.

**

‘ಎಂತ ಮಾಡೋದು ಗೊತ್ತಿಲ್ಲ’

‘ಪ್ರಕರಣದಲ್ಲಿ ಆರೋಪಿಯಾಗಿರುವ ಚೇತನ್‌ ದೇಸಾಯಿ ಅವರಿಂದ ವಿವರಣೆ ಕೇಳಿದ್ದೇನೆ’ ಎಂದು ಅಡ್ವೊಕೇಟ್ ಜನರಲ್ ಉದಯ ಹೊಳ್ಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪುಷ್ಪಾರ್ಚನಾ ಪೊಲೀಸರಿಗೆ ದೂರು ನೀಡಿದ್ದಾರೆ. ಅವೆಲ್ಲಾ ಎಷ್ಟರ ಮಟ್ಟಿಗೆ ಸತ್ಯ ಸಂಗತಿಗಳು ಎಂಬುದು ತನಿಖೆಯ ವೇಳೆ ಗೊತ್ತಾಗಲಿದೆ’ ಎಂದು ಹೇಳಿದರು.

‘ಇದೊಂದು ದುರದೃಷ್ಟಕರ ಪ್ರಸಂಗ. ಇಂದಿನ ಯುವ ಜನತೆಗೆ ಬುದ್ಧಿ ಹೇಳುವುದೇ ಕಷ್ಟವಾಗಿದೆ. ಅಂತೆಯೇ, ಹಿರಿಯ ವಕೀಲರೂ ಜವಾಬ್ದಾರಿಯಿಂದ ವರ್ತಿಸುವ ಅಗತ್ಯವಿದೆ. ಇವುಗಳನ್ನೆಲ್ಲಾ ನೋಡುತ್ತಿದ್ದರೆ ಎಂತ ಮಾಡೋದು ಗೊತ್ತಿಲ್ಲ’ ಎಂದು ವ್ಯಥೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT