ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಸತ್ಯಸಾಯಿ ವಿ.ವಿ ಉದ್ಘಾಟನೆ ನಾಳೆ

ಮಹಾಗಾಂವ ಬಳಿಯ ನವನಿಹಾಳದಲ್ಲಿ ಸ್ಥಾಪನೆ; ಲೋಕಾರ್ಪಣೆಗೆ ಕೇಂದ್ರ ಸಚಿವರು
Last Updated 2 ಜೂನ್ 2018, 5:47 IST
ಅಕ್ಷರ ಗಾತ್ರ

ಕಲಬುರ್ಗಿ: ಸಮೀಪದ ಮಹಾಗಾಂವ ಬಳಿಯ ನವನಿಹಾಳದಲ್ಲಿ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನಿಂದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ರಾಜ್ಯ ಸರ್ಕಾರದ ವಿಶೇಷ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದಿರುವ ಖಾಸಗಿ ವಿಶ್ವವಿದ್ಯಾಲಯ ಇದಾಗಿದೆ.

ಜೂನ್‌ 3ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್‌ ಅವರು ಲೋಕಾರ್ಪಣೆ ಮಾಡುವರು ಎಂದು ಟ್ರಸ್ಟ್‌ ಅಧ್ಯಕ್ಷ ಹಾಗೂ ಸಮ ಕುಲಾಧಿಪತಿ ಡಾ.ಎ.ಆರ್‌. ಮಂಜುನಾಥ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಶಾಸಕ ಬಸವರಾಜ ಮತ್ತಿಮೂಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಬಾಬಾ ಅವರ ವಿದೇಶಿ ಭಕ್ತರು ಉಪಸ್ಥಿತರಿರುವರು ಎಂದರು.

ಪುಟ್ಟಪರ್ತಿಯ ಶ್ರೀ ಸತ್ಯ ಸಾಯಿ ಬಾಬಾ ಅವರ ಮೌಲ್ಯಾಧಾರಿತ ಸಮಗ್ರ ಶಿಕ್ಷಣ ಪದ್ಧತಿಯ ಮೂಲತತ್ವದಡಿ ಈ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಮೌಲ್ಯಾಧಾರಿತ ಸಮಗ್ರ ಶಿಕ್ಷಣವನ್ನು ಗುರುಕುಲ ಮಾದರಿ ವಾತಾವರಣದಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.

‘ನವನಿಹಾಳದಲ್ಲಿ 2012ರಲ್ಲಿ ಹೊಸ ಶಾಲೆ ಆರಂಭಿಸಲಾಗಿದೆ. 6ರಿಂದ 10ನೇ ತರಗತಿವರೆಗೆ ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದಲ್ಲಿ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, 350 ವಿದ್ಯಾರ್ಥಿಗಳು ಇದ್ದಾರೆ. ಮುಂದಿನ ವರ್ಷದಿಂದ ಪದವಿ ಪೂರ್ವ ಕಾಲೇಜು ಆರಂಭಿಸುತ್ತೇವೆ. ಐದು ವರ್ಷಗಳಲ್ಲಿ ವಿಶ್ವವಿದ್ಯಾಲಯ ಆರಂಭವಾಗುತ್ತಿರುವುದು ಸಾಧನೆಯೇ ಸರಿ. ಈ ವಿಶ್ವವಿದ್ಯಾಲಯದ ಅಡಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಬಿ.ಎಸ್ಸಿ ಮತ್ತು ಬಿ.ಎ ಪದವಿ ಕೋರ್ಸ್‌ಗಳನ್ನು ಆರಂಭಿಸುತ್ತೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಂ.ಎಸ್ಸಿ, ಎಂ.ಎ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಿದ್ದೇವೆ’ ಎಂದರು.

ಟ್ರಸ್ಟ್‌ ಆಡಳಿತಾಧಿಕಾರಿ ಹಾಗೂ ಟ್ರಸ್ಟಿ  ಆರ್‌.ಕೆ.ಸುಬ್ರಹ್ಮಣ್ಯ, ಕುಲಪತಿ ಡಾ.ಪಿ.ಡಿ.ಎನ್‌. ಶ್ರೀನಿವಾಸ್‌ ಇದ್ದರು.

4 ವರ್ಷಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಶಾಲೆ

‘ನಮ್ಮ ಟ್ರಸ್ಟ್‌ನಿಂದ ರಾಜ್ಯದ 13 ಜಿಲ್ಲೆಗಳಲ್ಲಿ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ. 2022ರ ವೇಳೆಗೆ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಸುಸಜ್ಜಿತ ವಸತಿ ಶಾಲೆಗಳನ್ನು ಆರಂಭಿಸುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಡಾ.ಮಂಜುನಾಥ್‌ ಹೇಳಿದರು. ಈ ವರ್ಷ ಹಂಪಿ, ತುಮಕೂರು ಜಿಲ್ಲೆಯ ಶಿರಾ, ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕಾರವಾರ ಬಳಿಯ ಹಳ್ಳಿಯಲ್ಲಿ ಶಾಲೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ನವನಿಹಾಳ ದತ್ತು

‘ನಮ್ಮ ಸಂಸ್ಥೆಯಿಂದ ನವನಿಹಾಳ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತೇವೆ. ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದವರು ಸಹಯೋಗ ನೀಡಲು ಮುಂದೆ ಬಂದಿದ್ದಾರೆ’ ಎಂದು ಅವರು ಹೇಳಿದರು. ಬಾಬಾ ಅವರ ಪ್ರೇರಣೆಯಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಅಪೌಷ್ಟಿಕಾಂಶ ನಿವಾರಣೆಗೆ 11 ರಾಜ್ಯಗಳಲ್ಲಿ ಮಕ್ಕಳಿಗೆ ಬೆಳಿಗ್ಗೆ ಉಪಾಹಾರ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ ಎಂದರು.

ಸಿಂಗಪುರ ಭಕ್ತರ ನೆರವು

‘ನವನಿಹಾಳದಲ್ಲಿಯ ಕ್ಯಾಂಪಸ್‌ಗೆ ಕಟ್ಟಡ ಹಾಗೂ ಮೂಲಸೌಲಭ್ಯಕ್ಕೆ ಬಾಬಾ ಅವರ ಸಿಂಗಪುರದಲ್ಲಿರುವ ಭಕ್ತರು ನೆರವು ನೀಡಿದ್ದಾರೆ. ಅವರ ಬಯಕೆಗೆ ಅನುಸಾರ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ತಗಲುವ ಶಿಕ್ಷಣದ ವೆಚ್ಚವನ್ನು ನಮ್ಮ ಹಳೆಯ ವಿದ್ಯಾರ್ಥಿಗಳು ಭರಿಸುತ್ತಿದ್ದಾರೆ. ಊಟೋಪಚಾರಕ್ಕೆ ಸ್ಥಳೀಯ ಭಕ್ತರು ನೆರವು ನೀಡುತ್ತಿದ್ದಾರೆ’ ಎಂದರು.

**
ಈ ವಿಶ್ವವಿದ್ಯಾಲಯದ ಅಡಿಯಲ್ಲಿ ರಾಜ್ಯದ ವಿವಿಧೆಡೆ ವಿದ್ಯಾರ್ಥಿನಿಯರಿಗಾಗಿ ಮೂರು ಹಾಗೂ ವಿದ್ಯಾರ್ಥಿಗಳಿಗಾಗಿ 5 ಹೊಸ ಕ್ಯಾಂಪಸ್‌ ಆರಂಭಿಸುತ್ತೇವೆ
- ಡಾ.ಎ.ಆರ್‌. ಮಂಜುನಾಥ್, ಟ್ರಸ್ಟ್‌ ಅಧ್ಯಕ್ಷ ಹಾಗೂ ಸಮ ಕುಲಾಧಿಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT