2 ವರ್ಷದವನಿದ್ದಾಗಲೇ ಗನ್‌ ಲೈಸೆನ್ಸ್‌!

ಗುರುವಾರ , ಮಾರ್ಚ್ 21, 2019
32 °C
ನಕಲಿ ಶಸ್ತ್ರಾಸ್ತ್ರ ಪರವಾನಗಿ ಜಾಲ: ಜಮ್ಮು– ಕಾಶ್ಮೀರದ ಗನ್‌ಮ್ಯಾನ್‌ಗಳ ವಿರುದ್ಧ ಎಫ್‌ಐಆರ್‌

2 ವರ್ಷದವನಿದ್ದಾಗಲೇ ಗನ್‌ ಲೈಸೆನ್ಸ್‌!

Published:
Updated:

ಬೆಂಗಳೂರು: ನಗರದಲ್ಲಿ ಗನ್‌ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಜಮ್ಮು–ಕಾಶ್ಮೀರದ ಆ ಯುವಕನಿಗೆ ಈಗ 21 ವರ್ಷ. ಆದರೆ, ಆತನಿಗೆ ಗನ್‌ ಲೈಸೆನ್ಸ್‌ ಸಿಕ್ಕಿ 19 ವರ್ಷಗಳು ಕಳೆದಿವೆ. ಅಂದರೆ, ಆತ ಎರಡು ವರ್ಷವನಿದ್ದಾಗಲೇ ಗನ್‌ ಲೈಸೆನ್ಸ್‌ ಸಿಕ್ಕಿದೆ!

‘ನಿಯಮಬಾಹಿರವಾಗಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿ ಗನ್‌ ಇಟ್ಟುಕೊಂಡಿರುವ ಜಮ್ಮು–ಕಾಶ್ಮೀರದ ಕೆಲ ಯುವಕರು, ನಗರದ ಹಲವು ಬ್ಯಾಂಕ್‌ ಹಾಗೂ ಕಂಪನಿಗಳಲ್ಲಿ ಗನ್‌ ಮ್ಯಾನ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ನಗರ ಸಶಸ್ತ್ರ ಮೀಸಲು ಪಡೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಟಿ. ಕೃಷ್ಣಮೂರ್ತಿ, ದಾಖಲೆಗಳ ಸಮೇತ ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಅದರನ್ವಯ ‘ಶಸ್ತ್ರಾಸ್ತ್ರ ಕಾಯ್ದೆ 1959’ರಡಿ ಜಮ್ಮು–ಕಾಶ್ಮೀರದ ರಯಾಸತ್ ಖಾನ್ (31) ಹಾಗೂ ಜಾವೇದ್ ಇಕ್ಬಾಲ್ (21) ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆ ಇಬ್ಬರ ಹಾಗೂ ಅವರ ಜತೆ ನಗರಕ್ಕೆ ಬಂದಿರುವ ಇನ್ನೂ ಕೆಲ ಯುವಕರ ಶಸ್ತ್ರಾಸ್ತ್ರ ಪರವಾನಗಿ ದಾಖಲೆಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

‘1998ರಲ್ಲಿ ಜನಿಸಿರುವ ಆರೋಪಿ ಜಾವೇದ್ ಇಕ್ಬಾಲ್‌ಗೆ 2000ನೇ ಇಸವಿಯಲ್ಲೇ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿದೆ. ಸ್ಥಳೀಯ ಜಿಲ್ಲಾಧಿಕಾರಿಯ ಸಹಿಯೂ ಅದರಲ್ಲಿದೆ. ವಿಳಾಸ ಸೇರಿದಂತೆ ಉಳಿದೆಲ್ಲ ಮಾಹಿತಿಯೂ ಗೊಂದಲಕಾರಿಯಾಗಿದೆ. ಇಂಥ ಪರವಾನಗಿ ಬಳಸಿಕೊಂಡು ನಗರಕ್ಕೆ ಗನ್‌ ತಂದಿರುವ ಜಾವೇದ್, ಐಡಿಬಿಐ ಬ್ಯಾಂಕ್‌ನ ಖಜಾನೆ ಕಾಯುವ ಕೆಲಸ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಆತ ದುಷ್ಕ್ರತ್ಯ ಎಸಗಿದರೂ ಆಶ್ಚರ್ಯವಿಲ್ಲ’ ಎಂದು ಕೃಷ್ಣಮೂರ್ತಿ ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

‘31 ವರ್ಷದ ರಿಯಾಸತ್ ಖಾನ್‌ಗೂ 15 ವರ್ಷಗಳ ಹಿಂದೆ ಲೈಸೆನ್ಸ್ ಸಿಕ್ಕಿದೆ. ಆತನದ್ದೂ ನಕಲಿ ಪರವಾನಗಿ. ಇಂಥ ಪರವಾನಗಿ ಮಾಡಿಸಿಕೊಂಡು ನಗರಕ್ಕೆ ಬಂದು ಕೆಲಸ ಮಾಡುತ್ತಿರುವ ಆತನ ಉದ್ದೇಶವೇನು ಎಂಬುದನ್ನು ಪತ್ತೆ ಹಚ್ಚಿ’ ಎಂದು ಒತ್ತಾಯಿಸಿದ್ದಾರೆ. 

ಬ್ಯಾಂಕ್‌ ಖಜಾನೆಯಲ್ಲಿ ಸಿಕ್ಕಿಬಿದ್ದರು: ‘ಜೆ.ಪಿ.ನಗರದ 5ನೇ ಹಂತದಲ್ಲಿರುವ ಅಚ್ಚಪ್ಪ ಲೇಔಟ್‌ನಲ್ಲಿ ಐಡಿಬಿಐ ಬ್ಯಾಂಕ್‌ನ ಖಜಾನೆ (ಕರೆನ್ಸಿ ಚೆಸ್ಟ್) ಇದೆ. ಅಲ್ಲಿಂದಲೇ ರಾಜ್ಯದ ಎಲ್ಲ ಐಡಿಬಿಐ ಶಾಖೆಗಳಿಗೆ ಹಣ ಸಾಗಣೆ ಆಗುತ್ತದೆ. ಒಂದು ವಾಹನದಲ್ಲಿ ಚಾಲಕ,  ಇಬ್ಬರು ಗನ್‌ ಮ್ಯಾನ್‌ ಹಾಗೂ ಕಸ್ಟೋಡಿಯನ್‌ ಇರುತ್ತಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 

‘ಖಜಾನೆ ಹಾಗೂ ಹಣದ ಸಾಗಣೆ ವಾಹನಗಳಿಗೆ ಭದ್ರತೆ ಒದಗಿಸುವ ಗುತ್ತಿಗೆಯನ್ನು ಖಾಸಗಿ ಕಂಪನಿ ಪಡೆದಿದೆ. ಆ ಕಂಪನಿಯೇ ಚಾಲಕ, ಕಸ್ಟೋಡಿಯನ್ ಹಾಗೂ ಗನ್‌ಮ್ಯಾನ್‌ಗಳನ್ನು ಭದ್ರತೆಗೆ ನಿಯೋಜಿಸಿದೆ. ಆ ಪೈಕಿ ಬಹುಪಾಲು ಗನ್‌ ಮ್ಯಾನ್‌ಗಳು ಜಮ್ಮು– ಕಾಶ್ಮೀರದವರಾಗಿದ್ದು, ಅವರ ಬಳಿಯೇ ನಕಲಿ ಶಸ್ತ್ರಾಸ್ತ್ರ ಪರವಾನಗಿಗಳು ಪತ್ತೆಯಾಗಿವೆ. ಅದೇ ಖಜಾನೆಯಲ್ಲಿ ಕೃಷ್ಣಮೂರ್ತಿ ಅವರನ್ನು ಪೊಲೀಸ್‌ ಇಲಾಖೆ ಪರವಾಗಿ ಭದ್ರತೆಗೆ ನಿಯೋಜಿಸಲಾಗಿತ್ತು. ಅವರೇ ಈ ಜಾಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ’ ಎಂದು ಹೇಳಿದರು.

ರಾಜ್ಯ ಪೊಲೀಸರ ಪರವಾನಗಿ ಅಗತ್ಯ’

‘ಜಮ್ಮು–ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಪರವಾನಗಿ ಪಡೆದರೂ ರಾಜ್ಯದಲ್ಲಿ ಅದನ್ನು ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ. ಬಳಸಲೇ ಬೇಕಾದರೆ, ಇಲ್ಲಿಯ ಪೊಲೀಸರ ಪರಿಶೀಲನೆ ಅಗತ್ಯವಾಗಿರುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !