‘ಗುಣಮಟ್ಟದ ಶಿಕ್ಷಣ ಅಗತ್ಯ’

7
ಸಿಎಂಆರ್ ವಿ.ವಿಯಲ್ಲಿ ವೆಂಕಯ್ಯ ನಾಯ್ಡು ಅಭಿಮತ

‘ಗುಣಮಟ್ಟದ ಶಿಕ್ಷಣ ಅಗತ್ಯ’

Published:
Updated:
Prajavani

ಯಲಹಂಕ: ‘ಶಿಕ್ಷಣದಲ್ಲಿ ಭಾರತ ವಿಶ್ವಗುರುವಿನ ಸ್ಥಾನ ಪಡೆದಿತ್ತು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಆ ಸ್ಥಾನವನ್ನು ಮರಳಿ ಪಡೆಯಬೇಕಾಗಿದೆ’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು. 

ಹೆಣ್ಣೂರು-ಬಾಗಲೂರು ರಸ್ತೆಯಲ್ಲಿರುವ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ನೂತನ ಹಾಸ್ಟೆಲ್ ಕಟ್ಟಡ ಉದ್ಘಾಟಿಸಿ ಭಾನುವಾರ ಅವರು ಮಾತನಾಡಿದರು.

‘ಭಾರತದ ಪ್ರಾಚೀನ ಶಿಕ್ಷಣ ವ್ಯವಸ್ಥೆಯಲ್ಲಿ ವೇದ-ಉಪನಿಷತ್ತು ಬೋಧನೆ ಮಾಡಲಾಗುತ್ತಿತ್ತು. ವಿಶ್ವದ ಮೊದಲ ವಿಶ್ವವಿದ್ಯಾಲಯವಾಗಿದ್ದ ತಕ್ಷಶಿಲಾ 65 ಕೋರ್ಸ್‌ಗಳನ್ನು ಪರಿಚಯಿಸಿತ್ತು. ಆ ಕಾಲದಲ್ಲೇ 10 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ನಳಂದ ವಿಶ್ವವಿದ್ಯಾಲಯ ಬೃಹತ್ ಗ್ರಂಥಭಂಡಾರವನ್ನೇ ಹೊಂದಿತ್ತು’ ಎಂದರು.

‘ಜಾಗತಿಕ ಮಟ್ಟದಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತ ಕೂಡ ಒಂದು. ಆದರೆ ನಾವು ಇನ್ನೂ ಮೆಕಾಲೆ ಶಿಕ್ಷಣ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಭಾರತ ಅತಿಹೆಚ್ಚಿನ ಯುವಕರನ್ನು ಹೊಂದಿರುವ ದೇಶ. ಇದರ ಲಾಭವನ್ನು ಪಡೆದುಕೊಳ್ಳಬೇಕಿದೆ. ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಮತ್ತಷ್ಟು ಬಲಪಡಿಸಲು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಬೇಕು. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ನೂತನವಾಗಿ ಐಐಟಿ, ಐಐಎಂ, ಐಐಎಸ್ಇಆರ್ ಹಾಗೂ ಐಐಐಟಿಗಳನ್ನು ಸ್ಥಾಪಿಸಲು ಮುಂದಾಗಿದೆ’ ಎಂದು ಹೇಳಿದರು.

‘ತರಗತಿಗಳನ್ನು ಸಂತೋಷದ ಕಲಿಕಾ ಕೇಂದ್ರಗಳಾಗಿ ಪರಿವರ್ತಿಸಬೇಕು. ವಿದ್ಯಾರ್ಥಿಗಳಿಗೆ ಶೇ 50ರಷ್ಟು ಪಠ್ಯಪುಸ್ತಕ ಮತ್ತು ಶೇ 50ರಷ್ಟು ದೈಹಿಕ ಶಿಕ್ಷಣದ ಅಗತ್ಯವಿದೆ. ದೈಹಿಕವಾಗಿ ಸದೃಢರಾದರೆ ಇತರ ಯಾವುದೇ ಕೆಲಸವನ್ನು ಉತ್ಸಾಹದಿಂದ ಮಾಡಲು ಸಾಧ್ಯ’ ಎಂದರು.

ನ್ಯಾಷನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಡಾ.ಕೆ.ಪಿ.ಗೋಪಾಲಕೃಷ್ಣ ಮಾತನಾಡಿ, ‘ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡದ ಪರಿಣಾಮ, ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದೇಶಗಳಲ್ಲಿ ದೊರೆಯುವ ಶೈಕ್ಷಣಿಕ ಸೌಲಭ್ಯಗಳು ನಮ್ಮ ದೇಶದಲ್ಲೂ ಸಿಗುವಂತಾಗಬೇಕು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !