ರ‍್ಯಾಗಿಂಗ್: ವಿದ್ಯಾರ್ಥಿಗಳ ಬಂಧನ

7
ಹಾಡು ಹಾಡಿಸಿ, ನೃತ್ಯ ಮಾಡಿಸಿದರು

ರ‍್ಯಾಗಿಂಗ್: ವಿದ್ಯಾರ್ಥಿಗಳ ಬಂಧನ

Published:
Updated:

ಬೆಂಗಳೂರು: ಕಿರಿಯ ವಿದ್ಯಾರ್ಥಿಗಳಿಬ್ಬರಿಗೆ ರ‍್ಯಾಗಿಂಗ್ ಮಾಡಿದ ಆರೋಪದಡಿ ಕೇರಳದ ಏಳು ವಿದ್ಯಾರ್ಥಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಆದರ್ಶ್ ಹಾಗೂ ವಿಶಾಲ್ ಎಂಬ ವಿದ್ಯಾರ್ಥಿಗಳು, ಡಿ–ಫಾರ್ಮಾ ವ್ಯಾಸಂಗ ಮಾಡಲು ಹತ್ತು ದಿನಗಳ ಹಿಂದಷ್ಟೇ ಹೊಸೂರು ರಸ್ತೆಯ ಪ್ರತಿಷ್ಠಿತ ಕಾಲೇಜೊಂದಕ್ಕೆ ಸೇರಿದ್ದರು. ಹಿರಿಯ ವಿದ್ಯಾರ್ಥಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂದು ಅವರಿಬ್ಬರು ಆರೋಪಿಸಿದ್ದರು. ಈ ಸಂಬಂಧ ಹಾಸ್ಟೆಲ್ ವಾರ್ಡನ್ ಟಿ.ಎಂ.ಗುರುಮೂರ್ತಿ ಅವರು ಆ.18ರಂದು ಬೊಮ್ಮನಹಳ್ಳಿ ಠಾಣೆಗೆ ದೂರು ಕೊಟ್ಟಿದ್ದರು.

ವಿದ್ಯಾರ್ಥಿಗಳು ಹೇಳಿದ್ದು: ‘ಆ.17ರ ರಾತ್ರಿ 8.30ರ ಸುಮಾರಿಗೆ ನಮಗೆ ಕರೆ ಮಾಡಿದ ದ್ವಿತೀಯ ವರ್ಷದ ಬಿ.ಇ ವಿದ್ಯಾರ್ಥಿ ಅಜಯ್ ಟಾಮ್, ‘ಏನೋ ಕೆಲಸ ಇದೆ. ಹಾಸ್ಟೆಲ್‌ನಿಂದ ಹೊರ ಬನ್ನಿ’ ಎಂದ. ಅಂತೆಯೇ ನಾವು ಹೊರಗೆ ಹೋದಾಗ ಎ.ಅಮಲ್, ಅಮಲ್ ಬೇನಿ, ಮಹಮದ್ ಫದಲ್, ಎಂ.ನಾಜೀಫ್, ಮಹಮದ್ ನಾಜಿಕ ಹಾಗೂ ಸಾಹೀರ್ ಸಹ ಟಾಮ್ ಜತೆಗಿದ್ದರು’ ಎಂದು ಆದರ್ಶ್ ಹಾಗೂ ವಿಶಾಲ್ ವಾರ್ಡನ್ ಬಳಿ ಹೇಳಿದ್ದರು.

‘ಎಲ್ಲರೂ ಸೇರಿ ನಮ್ಮಿಬ್ಬರನ್ನು ಮಂಗಮ್ಮನಪಾಳ್ಯದ ಮನೆಯೊಂದಕ್ಕೆ ಕರೆದುಕೊಂಡು ಹೋದರು. ಅಲ್ಲಿ, ‘ನಾವೆಲ್ಲ ಸೀನಿಯರ್ಸ್‌. ನಾವು ಹೇಳಿದಂತೆ ಕೇಳಬೇಕು. ಇಲ್ಲವಾದರೆ ನೀವಿಬ್ಬರೂ ಈ ಮನೆಯಿಂದ ಹೊರಗೆ ಹೋಗುವುದಿಲ್ಲ’ ಎಂದು ಬೆದರಿಸಿದರು. ನೃತ್ಯ ಮಾಡಿಸಿ, ಹಾಡು ಹೇಳಿಸಿ, ಮನೆಗೆಲಸಗಳನ್ನೂ ಮಾಡಿಸಿಕೊಂಡರು. ಇಲ್ಲಿ ನಡೆದ ವಿಚಾರ ಬಹಿರಂಗಪಡಿಸಿದರೆ ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದರು’ ಎಂದು ಹೇಳಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !