ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೆನೇಡ್ ಮಾದರಿಯ ವಸ್ತು ಪತ್ತೆ!

ರೈಲು ನಿಲ್ದಾಣದಲ್ಲಿ ಆತಂಕ l ದಿಕ್ಕಾಪಾಲಾಗಿ ಓಡಿದ ಪ್ರಯಾಣಿಕರು l ರೈಲುಗಳ ಸಂಚಾರ ಎರಡು ಗಂಟೆ ವಿಳಂಬ
Last Updated 31 ಮೇ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ 1ನೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಶುಕ್ರವಾರ ಗ್ರೆನೇಡ್ ಮಾದರಿಯ ವಸ್ತುವೊಂದು ಪತ್ತೆಯಾಗಿದ್ದರಿಂದ, ನಿಲ್ದಾಣದಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು.

ರೈಲ್ವೆ ಭದ್ರತಾ ಪಡೆಯ (ಆರ್‌ಪಿಎಫ್‌) ಕಾನ್‌ಸ್ಟೆಬಲ್ ಕೃಷ್ಣಪ್ಪ ಎಂಬುವರುಬೆಳಿಗ್ಗೆ 8.45ರ ಸುಮಾರಿಗೆ ಪ್ಲ್ಯಾಟ್‌ಫಾರ್ಮ್‌ನಲ್ಲಿ ಗಸ್ತು ತಿರುಗುತ್ತಿದ್ದಾಗ ಸ್ಫೋಟಕದ ರೀತಿಯ ವಸ್ತು ಕಾಣಿಸಿತ್ತು. ಗಾಬರಿಗೊಂಡ ಅವರು ಅದರ ಫೋಟೊ ತೆಗೆದು ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದರು.

ಅಮಾನಾಸ್ಪದ ವಸ್ತುವನ್ನು ‘ಗ್ರೆನೇಡ್’ ಎಂದೇ ತಿಳಿದಿದ್ದ ಹಿರಿಯ ಅಧಿಕಾರಿಗಳು, ಅದು ಬಿದ್ದಿದ್ದ ಸ್ಥಳದಲ್ಲಿ ಪ್ರಯಾಣಿಕರ ಓಡಾಟವನ್ನು ನಿರ್ಬಂಧಿಸಿದರು. ಜಾಗದ ಸುತ್ತಮುತ್ತ ಮರಳಿನ ಚೀಲಗಳನ್ನು ತಂದು ಹಾಕಿದರು. ಮೈಕ್‌ನಲ್ಲಿ ಕೂಗುವ ಮೂಲಕ 1 ಹಾಗೂ 2ನೇ ಪ್ಲ್ಯಾಟ್‌ಫಾರ್ಮ್‌ನಲ್ಲಿದ್ದ ಪ್ರಯಾಣಿಕರನ್ನು ಬೇರೆಡೆ ತೆರಳುವಂತೆ ಸೂಚಿಸಿದರು.

‘ನಿಲ್ದಾಣದಲ್ಲಿ ಬಾಂಬ್ ಸಿಕ್ಕಿದೆ’ ಎಂದು ಸುದ್ದಿ ಹರಡುತ್ತಿದ್ದಂತೆ ಜೀವಭಯದಿಂದ ಪ್ರಯಾಣಿಕರೆಲ್ಲರೂ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಅದೇ ವೇಳೆ ನೂಕುನುಗ್ಗಲು ಸಹ ಉಂಟಾಯಿತು.

ಸ್ಫೋಟಕವಿಲ್ಲದ ವಸ್ತು: ಸ್ಥಳಕ್ಕೆ ಬಂದ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ, ಅನುಮಾನಾಸ್ಪದ ವಸ್ತುವನ್ನು ಕೈಗೆತ್ತಿಕೊಂಡು ಪರಿಶೀಲನೆ ನಡೆಸಿದರು. ‘ಇದೊಂದು ಗ್ರೆನೇಡ್ ಮಾದರಿಯ ವಸ್ತು. ಇದರಲ್ಲಿ ಯಾವುದೇ ಸ್ಫೋಟಕವಿಲ್ಲ. ಇದರಿಂದ ಯಾವುದೇ ಅಪಾಯವಿಲ್ಲ’ ಎಂದು ಖಚಿತಪಡಿಸಿದರು.

ನಂತರ, ಭದ್ರತಾ ಸಿಬ್ಬಂದಿ ಎರಡೂ ಪ್ಲ್ಯಾಟ್‌ಫಾರ್ಮ್‌ನಲ್ಲಿ ಪರಿಶೀಲನೆ ನಡೆಸಿದರು. ಯಾವುದೇ ವಸ್ತು ಸಿಗಲಿಲ್ಲ. 1ನೇ ಪ್ಲ್ಯಾಟ್‌ಫಾರ್ಮ್‌ನಿಂದ ಆಗಷ್ಟೇ ಪಟ್ನಾ ಕಡೆಗೆ ಹೊರಡಬೇಕಿದ್ದ ‘ಸಂಘಮಿತ್ರ ಎಕ್ಸ್‌ಪ್ರೆಸ್‌’ ರೈಲಿನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿ ಪ್ರತಿಯೊಂದು ಬೋಗಿಯಲ್ಲೂ ತಪಾಸಣೆ ನಡೆಸಲಾಯಿತು.

ನಿಲ್ದಾಣದ ಎಲ್ಲ ಪ್ಲ್ಯಾಟ್‌ಫಾರ್ಮ್, ಶೌಚಾಲಯ, ಪ್ರಯಾಣಿಕರ ವಿಶ್ರಾಂತಿ ಕೊಠಡಿ ಸೇರಿದಂತೆ ಎಲ್ಲ ಕಡೆ ಸಿಬ್ಬಂದಿ ತಪಾಸಣೆ ನಡೆಸಿದರು. ಯಾವುದೇ ಅನುಮಾನಾಸ್ಪದ ವಸ್ತು ಸಿಗಲಿಲ್ಲ. ಬೆಳಿಗ್ಗೆ 9.55ರ ಸುಮಾರಿಗೆ ‘ನಿಲ್ದಾಣ ಸುರಕ್ಷಿತವಾಗಿದೆ’ ಎಂದು ಸಿಬ್ಬಂದಿ ಘೋಷಿಸುತ್ತಿದ್ದಂತೆ ಪ್ರಯಾಣಿಕರ ಆತಂಕ ದೂರವಾಯಿತು.

ರೈಲುಗಳು ಎರಡು ಗಂಟೆ ತಡವಾಗಿ ನಿಲ್ದಾಣದಿಂದ ಹೊರಟವು.‌ ರೈಲ್ವೆ ಎಡಿಜಿಪಿ ಅಲೋಕ್ ಮೋಹನ್ ನಿಲ್ದಾಣಕ್ಕೆ ಬಂದು ಮಾಹಿತಿ ಪಡೆದರು.

ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲು: ‘ಅನುಮಾನಾಸ್ಪದ ವಸ್ತು ಸಿಕ್ಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸ್ಫೋಟಕ ವಸ್ತುಗಳ ಕಾಯ್ದೆ– 1908 ಅಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ವಸ್ತು ಎಲ್ಲಿಂದ ಬಂತು? ಯಾರು ತಂದರು? ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದು ರೈಲ್ವೆ ಎಸ್ಪಿ ಭೀಮಾಶಂಕರ್ ಗುಳೇದ್ ಹೇಳಿದರು.

‘ಪ್ಲ್ಯಾಟ್‌ಫಾರ್ಮ್‌ನಲ್ಲಿ ಸಿಕ್ಕ ವಸ್ತು ಗ್ರೆನೇಡ್‌ನ ಹೋಲುವ ರೀತಿಯಲ್ಲಿದೆ. ಆದರೆ, ಅದು ಗ್ರೆನೇಡ್ ಅಲ್ಲ. ಅದರೊಳಗೆ ಯಾವುದೇ ಸ್ಫೋಟಕ ಅಂಶ ಇಲ್ಲ. ಅದರ ಸುತ್ತಲೂ ರಂಧ್ರಗಳಿದ್ದು, ಸ್ಫೋಟಗೊಳ್ಳುವ ಸಾಮರ್ಥ್ಯವೂ ಅದಕ್ಕಿಲ್ಲ. ಆ ಸಂಬಂಧ ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು.

‘ನಿಲ್ದಾಣವು ಸುರಕ್ಷಿತವಾಗಿದ್ದು, ಪ್ರಯಾಣಿಕರು ಆತಂಕಪಡುವ ಅಗತ್ಯವಿಲ್ಲ. ಪ್ರಕರಣದ ತನಿಖೆಗಾಗಿ ಬೆಂಗಳೂರು ಪೊಲೀಸರು, ರಾಜ್ಯ ಗುಪ್ತದಳ, ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಸಿಬ್ಬಂದಿಯನ್ನು ಒಳಗೊಂಡ ಎಂಟು ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆಯನ್ನು ಸಮಗ್ರವಾಗಿ ಕೈಗೊಳ್ಳಲಾಗುವುದು’ ಎಂದರು.

ಕ್ಯಾಮೆರಾಗಳು ನಿಷ್ಕ್ರಿಯ; ನಿಲ್ದಾಣದ ಭದ್ರತೆಯಲ್ಲಿ ಲೋಪ

ನಿತ್ಯವೂ ಸಾವಿರಾರು ಪ್ರಯಾಣಿಕರು ಬಂದು ಹೋಗುವ ರೈಲು ನಿಲ್ದಾಣದ ಭದ್ರತೆಯಲ್ಲಿ ಸಾಕಷ್ಟು ಲೋಪಗಳಿವೆ. ಅನುಮಾನಾಸ್ಪದ ವಸ್ತುವಿನ ಮೂಲ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಾಗ ಲೋಪಗಳು ಒಂದೊಂದಾಗಿ ಪತ್ತೆಯಾಗಿವೆ.

‘ನಿಲ್ದಾಣದಲ್ಲಿ 71 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ, ಅದರಲ್ಲಿ 20 ಕ್ಯಾಮೆರಾಗಳು ಮಾತ್ರ ಕಾರ್ಯನಿರ್ವಹಿಸುತ್ತಿರುವುದಾಗಿ ನಿಲ್ದಾಣದ ಸಿಬ್ಬಂದಿ ಹೇಳುತ್ತಿದ್ದಾರೆ. ಪರಿಶೀಲನೆ ನಡೆಸಿದಾಗ 20ರಲ್ಲೂ ಹಲವು ಕ್ಯಾಮೆರಾಗಳು ನಿಷ್ಕ್ರಿಯಗೊಂಡಿವೆ’ ಎಂದು ಎಸ್ಪಿ ಭೀಮಾಶಂಕರ್ ಗುಳೇದ್ ಹೇಳಿದರು.

‘ನಿಲ್ದಾಣದ ಭದ್ರತೆಗೆ ರೈಲ್ವೆ ಇಲಾಖೆಯ ಅಧಿಕಾರಿಗಳೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಯಾಣಿಕರ ಪರಿಶೀಲನೆ, ಅವರ ಬ್ಯಾಗ್‌ಗಳ ತಪಾಸಣೆಗೆ ಸೂಕ್ತ ಸಲಕರಣೆಗಳನ್ನು ಅಳವಡಿಸಿಕೊಳ್ಳಬೇಕು. ಆದರೆ, ಇಲ್ಲಿರುವ ಸಲಕರಣೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆ ಬಗ್ಗೆ ಹಲವು ಬಾರಿ ರೈಲ್ವೆ ಇಲಾಖೆಯ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

‘ನಿಲ್ದಾಣಕ್ಕೆ ಎರಡು ಪ್ರವೇಶ ದ್ವಾರಗಳಿವೆ. ಮುಖ್ಯ ದ್ವಾರದಲ್ಲಿ ಲೋಹ ಶೋಧಕವಿದ್ದು, ಅದನ್ನು ರೈಲ್ವೆ ಭದ್ರತಾ ಪಡೆಯ ಪೊಲೀಸರೇ ನಿರ್ವಹಣೆ ಮಾಡುತ್ತಾರೆ. ಓಕಳಿಪುರದ ಹಿಂಭಾಗದ ದ್ವಾರದಲ್ಲಿ ಲೋಹ ಶೋಧಕ ಇದ್ದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪ್ರಯಾಣಿಕರು ಬ್ಯಾಗ್‌ನಲ್ಲಿ ಏನಾದರೂ ತಂದರೆ ಪತ್ತೆ ಹಚ್ಚುವುದು ಕಷ್ಟಕರವಾಗಿದೆ’ ಎಂದರು.

ಹೊಸದಾಗಿ 150 ಕ್ಯಾಮೆರಾ ಅಳವಡಿಕೆ: ಭದ್ರತಾ ಲೋಪದ ಬಗ್ಗೆ ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೆ ರಕ್ಷಣಾ ದಳದ ಮುಖ್ಯ ಸುರಕ್ಷತಾ ಕಮಿಷನರ್ ದೇಬಸ್ಮಿತ್ ಚಟ್ಟೋಪಾಧ್ಯಾಯ, ‘ನಿಲ್ದಾಣದ ಭದ್ರತೆಗೆ ಹೊಸದಾಗಿ 150 ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಶೀಘ್ರವೇ ನಿಲ್ದಾಣದಲ್ಲಿ ಬಳಕೆ ಮಾಡಲಾಗುವುದು’ ಎಂದರು.

‘ಪ್ರಯೋಗಾಲಯಕ್ಕೆ ರವಾನೆ’

‘ಸ್ಫೋಟಕದ ಮಾದರಿಯಲ್ಲಿರುವ ವಸ್ತುವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಜ್ಞರು ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ’ ಎಂದು ರೈಲ್ವೆ ವಿಭಾಗದ ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಸ್ತುವಿನಲ್ಲಿ ಯಾವ್ಯಾವ ಅಂಶಗಳು ಇವೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ವಸ್ತು ಸಿಕ್ಕ ಪ್ಲ್ಯಾಟ್‌ಫಾರ್ಮ್‌ನಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಹಾಳಾಗಿದೆ. ಬೇರೆ ಕಡೆಯ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

***

ವಸ್ತುವಿನ ಮೇಲೆ ಯಾವುದೇ ಬರಹ ಹಾಗೂ ಗುರುತು ಇಲ್ಲ. ಅದು ತಯಾರಾಗಿದ್ದು ಎಲ್ಲಿ ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ
– ಭೀಮಾಶಂಕರ್ ಗುಳೇದ್, ರೈಲ್ವೆ ಎಸ್ಪಿ

ನಿಲ್ದಾಣದಲ್ಲಿ ಸಿಕ್ಕಿದ್ದು ಡಮ್ಮಿ ವಸ್ತುವೆಂದು ಅಧಿಕಾರಿಗಳು ಹೇಳಿದ್ದಾರೆ. ಅದು ಎಲ್ಲಿಂದ ಬಂತು? ಯಾರು ತಂದರು? ಎಂಬುದನ್ನು ವರದಿ ಪಡೆದು ತಿಳಿಸುವೆ

-ಎಂ.ಬಿ.ಪಾಟೀಲ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT