ಭಾನುವಾರ, ಸೆಪ್ಟೆಂಬರ್ 22, 2019
22 °C

ಮಳೆ: ಹಾನಿಗಿಡಾದ ಪ್ರದೇಶಕ್ಕೆ ಮೇಯರ್ ಭೇಟಿ

Published:
Updated:
Prajavani

ಬೆಂಗಳೂರು: ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೆ ಒಳಗಾದ ಬಿಳೇಕಹಳ್ಳಿ ಮತ್ತು ಕೋಡಿಚಿಕ್ಕನಹಳ್ಳಿಗೆ ಮಂಗಳವಾರ ಭೇಟಿ ನೀಡಿದ ಮೇಯರ್ ಗಂಗಾಂಬಿಕೆ ಅವರಿಗೆ ನಿವಾಸಿಗಳು ಸಮಸ್ಯೆಯ ಗಂಭೀರತೆಯನ್ನು ಮನದಟ್ಟು ಮಾಡಿದರು.

‘ಕೋಡಿಚಿಕ್ಕನಹಳ್ಳಿ ಮುಖ್ಯರಸ್ತೆಯ ಚರಂಡಿಗಳ ಹೂಳು ತೆಗೆದು ನಾಲ್ಕು ವರ್ಷಗಳೇ ಕಳೆದಿವೆ. ಮಳೆನೀರು ಹರಿಯುವುದಾದರೂ ಹೇಗೆ? ಎಂದು ಸ್ಥಳೀಯರು ಪ್ರಶ್ನಿಸಿದರು. ಈ ಬಗ್ಗೆ ಅಧಿಕಾರಿಗಳನ್ನು ಮೇಯರ್ ಕೇಳಿದಾಗ,‘ಈ ರಸ್ತೆಯು ಪಾಲಿಕೆಯ ಮುಖ್ಯ ರಸ್ತೆಗಳ ವಿಭಾಗಕ್ಕೆ ಬರುತ್ತದೆ’ ಎಂದು ವಲಯ ಅಧಿಕಾರಿಗಳು ನುಣಿಚಿಕೊಂಡರು. ಆದರೆ, ಮುಖ್ಯರಸ್ತೆಗಳ ವಿಭಾಗದ ಒಬ್ಬ ಅಧಿಕಾರಿಯೂ ಸ್ಥಳದಲ್ಲಿ ಇರಲಿಲ್ಲ.

ಮೇಯರ್ ಭೇಟಿ ಹಿನ್ನೆಲೆಯಲ್ಲಿ ಚರಂಡಿ ಹೂಳು ತೆಗೆಯಲು ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಹೆಸರು ಹೇಳಲು ಇಚ್ಚಿಸದ ಕಾರ್ಮಿಕರೊಬ್ಬರು,‘ಚರಂಡಿಲೀ ನಾಲ್ಕೂವರೆ ಅಡಿ ಮಣ್ಣು ಸೇರ್ಕಂಡದೆ, ಕ್ಲೀನ್ ಮಾಡೋದೆಂಗೆ ಹೇಳಿ’ ಎಂದು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟರು. 

ಕೋಡಿಚಿಕ್ಕನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಮೇಯರ್ ಭೇಟಿ ನೀಡಿದಾಗ ಕೇಂದ್ರದಲ್ಲಿ ಮಕ್ಕಳು ಇರಲಿಲ್ಲ. ‘ಕೇಂದ್ರಕ್ಕೆ ಚರಂಡಿ ನೀರು ತುಂಬಿತ್ತು. ಸೋಂಕು ತಗುಲಬಹುದೆಂದು ಈ ದಿನ ರಜೆ ನೀಡಿದ್ದೇವೆ’ ಎಂದು ಮೇಲ್ವಿಚಾರಕಿ ಸಮಜಾಯಿಷಿ ನೀಡಿದರು.

ಮೇಯರ್‌ ಗಂಗಾಂಬಿಕೆ,‘ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಸಾಧಾರಣ ಮಳೆಗೂ ಈ ಪರಿ ಸಮಸ್ಯೆ ಸೃಷ್ಟಿಯಾಗುವುದಾರೆ, ಭಾರಿ ಮಳೆ ಬಂದಾಗ ಗತಿ ಏನು? ಎಂದು ಅಧಿಕಾರಿಗಳನ್ನು ಪ್ರಶ್ನಿಸುತ್ತಲೇ, ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ’ ಎಂದರು. ಅಲ್ಲಲ್ಲಿ ತೆರೆದುಕೊಂಡಿದ್ದ ಚರಂಡಿಗಳನ್ನು ಮುಚ್ಚುವಂತೆ ಆದೇಶಿದರು.

ಪಾಲಿಕೆಯ ಸ್ಥಳೀಯ ಸದಸ್ಯ ನಾರಾಯಣರಾಜು ಅವರು ಪರಿಶೀಲನೆ ವೇಳೆ ಸ್ಥಳಕ್ಕೆ ಬರಲಿಲ್ಲ.

ಮನೆಗೆ ನೀರು ನುಗ್ಗಲು ಕಾರಣ: ‘ಕೋಡಿಚಿಕ್ಕನಹಳ್ಳಿ ಮುಖ್ಯರಸ್ತೆಯು ಶನಿ ಮಹಾತ್ಮ ದೇವಸ್ಥಾನದಿಂದ ಅನುಗ್ರಹ ಅಪಾರ್ಟ್‌ಮೆಂಟ್‌ ಸಮುಚ್ಚಯದವರೆಗೂ ಇಳಿಜಾರು ಪ್ರದೇಶದಲ್ಲಿದೆ. ರಸ್ತೆಯೂ ಕಿರಿದಾಗಿದೆ. ಹಾಗಾಗಿ ಮಳೆನೀರು ಮನೆಗಳಿಗೆ ನುಗ್ಗುತ್ತಿದೆ’ ಎಂದು ಕಾರ್ಯಪಾಲಕ ಎಂಜಿನಿಯರ್‌ ಅಶೋಕ್‌ ತಿಳಿಸಿದರು.

‘ಇಲ್ಲಿನ 800 ಮೀಟರ್‌ ಉದ್ದದ ರಸ್ತೆಯೂ ಮೂರೂವರೆ ಮೀಟರ್‌ನಷ್ಟು ಇಳಿಜಾರಿನಲ್ಲಿದೆ. ರಸ್ತೆ ಅಗಲ ಕೇವಲ 16 ಅಡಿ. ಇಲ್ಲಿ ರಸ್ತೆ ಮತ್ತು ಚರಂಡಿ ವೀಸ್ತರಣೆ ಮಾಡಲು ಸಾಧ್ಯವಿಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

Post Comments (+)