ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲ ಸಮೀಪಿಸಿದರೂ ಹಳೆ ಮರ ತೆರವು ಇಲ್ಲ

ಅರಣ್ಯ ವಿಭಾಗದ ಅಧಿಕಾರಿಗಳ ವಿರುದ್ಧ ಮುಗಿಬಿದ್ದ ಪಾಲಿಕೆ ಸದಸ್ಯರು
Last Updated 27 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಗಾಲ ಸಮೀಪಿಸಿದರೂ ಅಪಾಯದ ಸ್ಥಿತಿಯಲ್ಲಿರುವ ಹಳೆಯ ಮರಗಳನ್ನು ಹಾಗೂ ಬೀಳುವ ಸ್ಥಿತಿಯಲ್ಲಿರುವ ಕೊಂಬೆಗಳನ್ನು ತೆರವುಗೊಳಿಸದಿರುವ ಬಗ್ಗೆ ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಆಕ್ಷೇಪ ವ್ಯಕ್ತಪಡಿಸಿದರು.

ಅರಣ್ಯ ವಿಭಾಗದ ಸಿಬ್ಬಂದಿಯ ಗಮನಕ್ಕೆ ತಂದರೂ ಅಪಾಯಕಾರಿ ಕೊಂಬೆಗಳನ್ನು ತೆರವುಗೊಳಿಸುವುದಿಲ್ಲ ಎಂದು ಕೆಲವು ಸದಸ್ಯರು ದೂರಿದರು.

‘ನಮ್ಮ ವಾರ್ಡ್‌ನಲ್ಲಿ ಮೊದಲ ಮಳೆಗೇ ಕೊಂಬೆ ಮುರಿದು ರಿಕ್ಷಾ ಮೇಲೆ ಬಿದ್ದಿತ್ತು. ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇಂತಹ ಘಟನೆ ಮರುಕಳಿಸಲು ಅವಕಾಶ ನೀಡಬೇಡಿ’ ಎಂದು ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌ ಹೇಳಿದರು.

‘28 ವಿಧಾನಸಭಾ ಕ್ಷೇತ್ರಗಳಿಗೆ 21 ತುರ್ತು ಸ್ಪಂದನಾ ತಂಡಗಳು ಮಾತ್ರ ಇವೆ. 7 ಹೆಚ್ಚುವರಿ ತಂಡಗಳನ್ನು ರಚಿಸಲು ಉಪಮುಖ್ಯಮಂತ್ರಿ ಹಾಗೂ ಆಯುಕ್ತರು ಒಪ್ಪಿಗೆ ನೀಡಿದ್ದಾರೆ. ಶೀಘ್ರವೇ ಟೆಂಡರ್‌ ಕರೆಯುತ್ತೇವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಚೊಳರಾಜಪ್ಪ ತಿಳಿಸಿದರು.

‘ನಾವು ಇತಿ ಮಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ವಲಯ ಅರಣ್ಯಾಧಿಕಾರಿ ಹುದ್ದೆಗಳು ಖಾಲಿ ಇವೆ. ಸರ್ಕಾರೇತರ ಸಂಘಟನೆಗಳಿಂದಲೂ ಒತ್ತಡವಿದೆ. ರೋಗಗ್ರಸ್ತ ಮರಗಳನ್ನು ತೆರವುಗೊಳಿಸಲು ಒಪ್ಪಿಗೆ ನೀಡಿದರೂ ಪರಿಸರ ಕಾರ್ಯಕರ್ತರು ತಗಾದೆ ತೆಗೆಯುತ್ತಾರೆ. ದಿನಕ್ಕೆ ಏನಿಲ್ಲವೆಂದರೂ 30ರಿಂದ 40 ಮಂದಿ ಕಚೇರಿಗೆ ಬಂದು ಪ್ರಶ್ನಿಸುತ್ತಾರೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಜಯನಗರದಲ್ಲಿ ಸುಸ್ಥಿತಿಯಲ್ಲಿದ್ದ ಮರವನ್ನು ಕಡಿದ ಬಗ್ಗೆ ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಪಾಲಿಕೆ ಸದಸ್ಯ ನಾಗರಾಜ್‌ ಆಕ್ಷೇಪ ವ್ಯಕ್ತಪಡಿಸಿದರು.

‘ಮನೆ ತಿಂಡಿ ಹೋಟೆಲ್‌ ಬಳಿ ಇದ್ದ ಮರವನ್ನು ಬೆಂಗಳೂರು ಮೆಟ್ರೊ ರೈಲು ನಿಗಮದವರು (ಬಿಎಂಆರ್‌ಸಿಎಲ್‌) ತೆರವುಗೊಳಿಸಿದ್ದಾರೆ. ಈ ಬಗ್ಗೆ ಮೊಕದ್ದಮೆ ದಾಖಲಿಸುವಂತೆ ಸೂಚಿಸಿದ್ದೇನೆ. ಬಳಿಕ ದಂಡ ಕಟ್ಟಿದ್ದಾರೆ’ ಎಂದು ಚೋಳರಾಜಪ್ಪ ತಿಳಿಸಿದರು.

ಕಡಿದ ಮರಗಳ ಹರಾಜಿನಿಂದ ಕಳೆದ ವರ್ಷ ₹ 10 ಲಕ್ಷ ಆದಾಯ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಸದ ರಾಶಿಯಲ್ಲಿ ರಾಷ್ಟ್ರಧ್ವಜ: ಆಕ್ಷೇಪ

ಕಸದ ಬುಟ್ಟಿಯಲ್ಲಿ ರಾಷ್ಟ್ರಧ್ವಜ ಪತ್ತೆಯಾದ ವಿಚಾರ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ರಾಷ್ಟ್ರಧ್ವಜಕ್ಕೆ ಅಗೌರವ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮೇಯರ್‌ ಗಂಗಾಂಬಿಕೆ ಭರವಸೆ ನೀಡಿದರು.

ವನ್ಯಜೀವಿ ಸಂರಕ್ಷಕರಿಗೆ ಗೌರವಧನವಿಲ್ಲ!

ವನ್ಯಜೀವಿ ಸಂರಕ್ಷಣಾ ತಂಡದ ಸ್ವಯಂಸೇವಕರಿಗೆ ಮೂರು ವರ್ಷಗಳಿಂದ ಗೌರವಧನ ಪಾವತಿ ಆಗದಿರುವ ಬಗ್ಗೆ ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ವಿರೋಧ ವ್ಯಕ್ತಪಡಿಸಿದರು.

ಗೌರವಧನ ಪಾವತಿ ಆಗದಿರುವುದನ್ನು ಖಂಡಿಸಿ ಸ್ವಯಂಸೇವಕರು ತಾವು ರಕ್ಷಿಸಿದ ಪಕ್ಷಿಗಳನ್ನು ಹಾಗೂ ಸತ್ತ ಹಾವನ್ನು ಪಾಲಿಕೆ ಕಚೇರಿ ಬಳಿ ತಂದು ಪ್ರದರ್ಶಿಸಿದರು.

‘ಗೌರವಧನ ಪಾವತಿಸುವ ಅಧಿಕಾರ ನನಗೆ ಇಲ್ಲ. ಏನಿದ್ದರೂ ಜಿಲ್ಲಾ ಡಿಸಿಎಫ್‌ ಅವರೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪಿಸಿಸಿಎಫ್‌ ಹೇಳಿದ್ದಾರೆ’ ಎಂದು ಚೋಳರಾಜಪ್ಪ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪದ್ಮನಾಭ ರೆಡ್ಡಿ, ‘ಪಾಲಿಕೆ ವತಿಯಿಂದಲೇ ಗೌರವಧನ ಪಾವತಿಸಲು ಪಿಸಿಸಿಎಫ್‌ 2016ರಲ್ಲೇ ಒಪ್ಪಿಗೆ ನೀಡಿದ್ದಾರೆ. ಡಿಸಿಎಫ್‌ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಪತ್ರದ ಪ್ರತಿ ಪ್ರದರ್ಶಿಸಿದರು.

‘ನನ್ನ ಬಗ್ಗೆಯೂ ಏಕವಚನದಲ್ಲಿ ಮಾತನಾಡಿದ್ದಾರೆ’ ಎಂದು ಪದ್ಮನಾಭ ರೆಡ್ಡಿ ಮಾತುಕತೆಯ ಆಡಿಯೊ ಕೇಳಿಸಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಮೇಯರ್‌, ‘ಸಭೆಯಲ್ಲಿ ಧ್ವನಿಯನ್ನು ಕೇಳಿಸುವುದುಬೇಡ. ಸಭೆ ಬಳಿಕ ಕಚೇರಿಯಲ್ಲಿ ಇಬ್ಬರನ್ನೂ ಕರೆಸಿ ಮಾತನಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಮರ ಗಣತಿಯೂ ಇಲ್ಲ: ನೆಟ್ಟ ಸಸಿಗಳ ಲೆಕ್ಕವಿಟ್ಟಿಲ್ಲ

‘ನಗರದಲ್ಲಿ ಮರಗಣತಿ ಸರಿಯಾಗಿ ನಡೆದಿಲ್ಲ. ನೆಟ್ಟ ಗಿಡಗಳ ಲೆಕ್ಕವನ್ನೂ ಪಾಲಿಕೆ ಇಟ್ಟಿಲ್ಲ. ಒಂದು ಗಿಡ ನೆಡಲು ₹ 700 ಖರ್ಚು ಮಾಡಲಾಗುತ್ತದೆ. ಆ ಗಿಡಗಳೆಲ್ಲ ಎಲ್ಲಿ ಹೋದವು. ನಗರವನ್ನು ಅಂದಗೊಳಿಸುವ ಸಲುವಾಗಿ ನೆಟ್ಟಿರುವ ಗಿಡಗಳಿಗೆ ನೀರುಣಿಸುವುದಕ್ಕೂ ಗತಿ ಇಲ್ಲ’ ಎಂದು ಪಾಲಿಕೆ ಸದಸ್ಯ ರಾಜು ಆಕ್ಷೇಪ ವ್ಯಕ್ತಪಡಿಸಿದರು.

ಮರ ಗಣತಿಯನ್ನು ಸರ್ಕಾರೇತರ ಸಂಘಟನೆಗಳಿಗೆ ವಹಿಸುವುದು ಬೇಡ. ಭಾರತೀಯ ವಿಜ್ಞಾನ ಸಂಸ್ಥೆಯ ಪರಿಣಿತರಿಂದಲೇ ಇದನ್ನು ನಡೆಸಬೇಕು ಎಂದು ಲತಾ ಕುವರ್‌ ರಾಥೋಡ್‌ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT