ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ ನೆನಪಿನ ಅಲೆಯಲ್ಲಿ ತೇಲಿದ ರಾಜಧಾನಿ

Last Updated 24 ಏಪ್ರಿಲ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ವರನಟ ಡಾ.ರಾಜಕುಮಾರ್ ಅವರ 91ನೇ ಜಯಂತಿಯನ್ನು ನಗರದಾದ್ಯಂತ ಮನೆ ಹಬ್ಬದಂತೆ ಆಚರಿಸಿದ ಅಭಿಮಾನಿಗಳು ಅಣ್ಣಾವ್ರ ನೆನಪಿನಲ್ಲಿಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಬೆಳಗಿನಿಂದ ಬೈಗಿನವರೆಗೆ ರಾಜ್‌ ಅವರ ಪ್ರೀತಿಯ ಗೀತೆಗಳು ಮೊಳಗಿದವು.

ಕಂಠೀರವ ಸ್ಟುಡಿಯೊದಲ್ಲಿ ರಾಜ್‌ ಸ್ಮಾರಕಕ್ಕೆ ಬೆಳಿಗ್ಗೆಯಿಂದ ರಾತ್ರಿವರೆಗೂ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ನಮನ ಸಲ್ಲಿಸಿದರು. ಹಲವು ಸಂಘ-ಸಂಸ್ಥೆಗಳು ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿದ್ದವು. ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಅಭಿಮಾನ ಮೆರೆದರು.

ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಹಾಗೂ ರಾಜ್‌ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೊಗೆ ತೆರಳಿ ರಾಜ್‌ ಮತ್ತು ಪಾರ್ವತಮ್ಮ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ, ನಟಿ ಸುಮಲತಾ, ದೊಡ್ಡಣ್ಣ, ರಾಕ್‌ಲೈನ್‌ ವೆಂಕಟೇಶ್‌ ಸೇರಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು. ಆಟೊ ಚಾಲಕರು ತಮ್ಮ ಆಟೊಗಳ ಮೇಲೆ ರಾಜಕುಮಾರ್‌ ಭಾವಚಿತ್ರಗಳನ್ನು ಪ್ರದರ್ಶಿಸಿ ಮೆರವಣಿಗೆ ಮಾಡಿದರು.

ಫೇಸ್‌ಬುಕ್, ಟ್ವಿಟರ್, ವ್ಯಾಟ್ಸ್‌ಆ್ಯಪ್‌ಗಳಲ್ಲೂ ಅಣ್ಣಾವ್ರ ಭಾವಚಿತ್ರಗಳು, ಹಾಡುಗಳು ಮತ್ತು ಡೈಲಾಗ್‌ಗಳು ಮೊಳಗುತ್ತಿದ್ದವು. ಭಾರತ ಕಂಡ ಸರ್ವಶ್ರೇಷ್ಠ ನಟರಲ್ಲಿ ರಾಜ್ ಕೂಡ ಒಬ್ಬರು ಎಂದು ಸಾಮಾಜಿಕ ಜಾಲತಾಣಿಗರು ಕೊಂಡಾಡಿದರು.

ಗಾಯನ ಸ್ಪರ್ಧೆ: ಮಧು ಮ್ಯೂಸಿಕಲ್‌ ಇವೆಂಟ್ಸ್‌ನ 4ನೇ ವಾರ್ಷಿಕೋತ್ಸವ ಹಾಗೂ ರಾಜ್‌ ಜನ್ಮದಿನದ ಪ್ರಯುಕ್ತ 'ರಾಜ್‌ ಧ್ವನಿ' ಗಾಯನ ಸ್ಪರ್ಧೆಯನ್ನುಮಲ್ಲೇಶ್ವರದಲ್ಲಿ ಏರ್ಪಡಿಸಲಾಗಿತ್ತು. ಬೆಳಿಗ್ಗೆ 10.30ರಿಂದ ರಾತ್ರಿ 9ರವರೆಗೆ ನಡೆದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಗಾಯಕರು ರಾಜಕುಮಾರ್‌ ಅವರ ಎಲ್ಲ ಸಿನಿಮಾಗಳ ಹಾಡುಗಳನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು.

ರಾಜ್‌ ಕ್ರಿಕೆಟ್‌ ಲೀಗ್‌: ಕನ್ನಡ ನಿತ್ಯೋತ್ಸವ.ಕಾಂ ಸಂಘ ಹಾಗೂ ಜೀವನಹಳ್ಳಿ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ‘ಡಾ.ರಾಜ್‌ ಕ್ರಿಕೆಟ್‌ ಲೀಗ್‌-2019’ ಹಮ್ಮಿಕೊಳ್ಳಲಾಗಿತ್ತು. 21ರಂದು ಈ ಪಂದ್ಯಾವಳಿ ಆರಂಭವಾಗಿತ್ತು. ಏ.24ರಂದು ರಾಜ್‌ ಜಯಂತಿ ಪ್ರಯುಕ್ತ ಫೈನಲ್‌ ಪಂದ್ಯಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.‌

ಮಾಲಾರ್ಪಣೆ

ಮಲ್ಲೇಶ್ವರದ 18ನೇ ಕ್ರಾಸ್‌ನ ಗೋಕಾಕ್‌ ಚಳವಳಿ ಸ್ಮರಣಾರ್ಥ ವೃತ್ತದಲ್ಲಿನ ರಾಜ್‌ ಪ್ರತಿಮೆಗೆ ಶಾಸಕ ಸಿ.ಎನ್‌.ಅಶ್ವತ್ಥ್‌ ನಾರಾಯಣ್‌ ಅವರು ಮಾಲಾರ್ಪಣೆ ಮಾಡಿದರು. ಹಡ್ಸನ್‌ ವೃತ್ತದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಅನ್ನಸಂತರ್ಪಣೆ ಮಾಡಿದರು.

ಚಿಕ್ಕಬೊಮ್ಮಸಂದ್ರದಲ್ಲಿ ರಾಜ್ ನೆನಪು

ಯಲಹಂಕ: ಉಪನಗರದ ಚಿಕ್ಕಬೊಮ್ಮಸಂದ್ರದಲ್ಲಿ ‘ಧ್ರುವತಾರೆ ಡಾ.ರಾಜಕುಮಾರ್ ಅಭಿಮಾನಿಗಳ ಸಂಘ’ ಹಾಗೂ ‘ಮಿತ್ರಪ್ರಿಯ ಕ್ರಿಕೆಟರ್ಸ್’ ಸಹಯೋಗದಲ್ಲಿ ಡಾ.ರಾಜಕುಮಾರ್ ಅವರ 91ನೇ ಹುಟ್ಟುಹಬ್ಬ ಆಚರಿಸಲಾಯಿತು.

ಡಾ.ರಾಜ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ಅಭಿಮಾನಿಗಳು, ಬೃಹತ್ ಕೇಕ್ ಕತ್ತರಿಸಿದರು. ಬಳಿಕ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಂಘಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿಸಲಾಯಿತು.

ಇದೇ ವೇಳೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ ಪುಸ್ತಕ ವಿತರಿಸಲಾಯಿತು. ಬಿಬಿಎಂಪಿ ಸದಸ್ಯ ಎಂ.ಸತೀಶ್, ಮಾಜಿ ಸದಸ್ಯ ಎಂ.ಮುನಿರಾಜು, ಸಂಘದ ಅಧ್ಯಕ್ಷ ಎಚ್.ಎಂ.ರಾಜು, ಗೌರವಾಧ್ಯಕ್ಷ ಎಚ್.ಸುರೇಶ್, ಶಿವಣ್ಣ ಇದ್ದರು.

ರಾಜ್ ಸ್ಮರಣೆ: ರಕ್ತದಾನ

ರಾಜರಾಜೇಶ್ವರಿನಗರ: ವರನಟ ಡಾ.ರಾಜ್‍ಕುಮಾರ್ ಅವರ 91ನೇ ಜನ್ಮದಿನೋತ್ಸವ ಅಂಗವಾಗಿ ಮರಿಯಪ್ಪನಪಾಳ್ಯ ಸಮೀಪದ ಜ್ಞಾನಭಾರತಿ ಬಡಾವಣೆಯ ನಗೆಮನೆಯಲ್ಲಿ ‘ಕೆಂಗೇರಿ ಹೋಬಳಿ ಆರ್ಯ ಈಡಿಗರ ಸಂಘ’, ‘ರಾಷ್ಟ್ರೋತ್ಥಾನ ರಕ್ತ ನಿಧಿ’ ವತಿಯಿಂದ ರಕ್ತದಾನ ಶಿಬಿರ ನಡೆಸಲಾಯಿತು.

ಮುಖಂಡ ಜಿ.ಮುನಿರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವ ಉಳಿಸಲು ಸಹಕಾರಿಯಾಗುತ್ತದೆ.ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು. ಆಗ ಮಾತ್ರ ಡಾ.ರಾಜ್‍ಕುಮಾರ್ ಅವರ ಜನ್ಮ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಟಿ.ಮುತ್ತುರಾಜು ಉಪಾಧ್ಯಕ್ಷ ಪಿ. ಮಹಾಲಿಂಗಪ್ಪ, ಸಮಾಜ ಸೇವಕ ಜಯರಾಮು, ರಾಜ್ಯ ಆರ್ಯ ಈಡಿಗರ
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಪಿ.ಪ್ರಕಾಶ್, ಮುಖಂಡರಾದ ಚಂದ್ರು, ಶಶಿಕುಮಾರ್, ಸುನಿಲ್ ಇದ್ದರು. 60 ಜನ ರಕ್ತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT