ಸೋಮವಾರ, ಡಿಸೆಂಬರ್ 16, 2019
17 °C
ಬಟ್ಟೆ ವ್ಯಾಪಾರಿ ಜೈಕುಮಾರ್ ಜೈನ್‌ ಕೊಲೆ ಪ್ರಕರಣ

‘ಮಗಳ ಭವಿಷ್ಯ ರೂಪಿಸಬೇಕು, ಜಾಮೀನು ಕೊಡಿ’: ಬಾಲ ನ್ಯಾಯಮಂಡಳಿಗೆ ತಾಯಿ ಮೊರೆ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಿಯಕರನ ಜೊತೆಗೂಡಿ ತಂದೆಯನ್ನೇ ಬರ್ಬರವಾಗಿ ಕೊಂದು ಶವ ಸುಟ್ಟಿದ್ದ ಪ್ರಕರಣದಲ್ಲಿ ಸುಪರ್ದಿಗೆ ಪಡೆದಿದ್ದ, ಸದ್ಯ ಬಾಲಕಿಯರ ಬಾಲಮಂದಿರದಲ್ಲಿರುವ 16 ವರ್ಷದ ಪುತ್ರಿಗೆ ಜಾಮೀನು ಕೋರಿ ಆಕೆಯ ತಾಯಿಯೇ ಅರ್ಜಿ ಸಲ್ಲಿಸಿದ್ದಾರೆ.

ರಾಜಾಜಿನಗರದ ‘ದಿಲೀಪ್ ಅಪೆರಲ್ಸ್’ ಹೋಲ್‌ಸೇಲ್ ಬಟ್ಟೆ ಅಂಗಡಿ ಮಾಲೀಕ ಜೈಕುಮಾರ್ ಜೈನ್‌ (40) ಕೊಲೆಗೆ ಸಂಬಂಧ ಕಾನೂನು ಸಂಘರ್ಷಕ್ಕೆ ಒಳ ಪಟ್ಟ ಮಗಳನ್ನು ಪೊಲೀಸರು ಸುಪರ್ದಿಗೆ ಪಡೆದಿದ್ದರು.

ಆಕೆ ಸದ್ಯ ವಿಲ್ಸನ್ ಗಾರ್ಡನ್‌ನ ಬಾಲಕಿಯರ ಬಾಲಮಂದಿರದಲ್ಲಿ ಇದ್ದಾಳೆ. ಕೃತ್ಯದಲ್ಲಿ ಭಾಗಿಯಾಗಿದ್ದ ಆಕೆಯ ಪ್ರಿಯಕರ ಪ್ರವೀಣ್‌ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾನೆ. ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎನ್ನಲಾದ ಬಾಲಕಿ ವಿರುದ್ಧ ಬಾಲ ನ್ಯಾಯಮಂಡಳಿ ವಿಚಾರಣೆ ನಡೆಸುತ್ತಿದೆ. ಈ ಮಂಡಳಿಗೆ ಅರ್ಜಿ ಸಲ್ಲಿಸಿರುವ ತಾಯಿ ಪೂಜಾ ಜೈನ್, ‘ಮಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡಿ’ ಎಂದು ಕೋರಿದ್ದಾರೆ.

‘ಏನೂ ಅರಿಯದ ವಯಸ್ಸಿನಲ್ಲಿ ಮಗಳು ತಪ್ಪು ಮಾಡಿದ್ದಾಳೆ. ಪತಿ ಕಳೆದುಕೊಂಡ ದುಃಖದಲ್ಲಿರುವ ನನಗೆ, ಮಗಳಿಂದ ದೂರವಿರಲು ಆಗುತ್ತಿಲ್ಲ’ ಎಂದು ಅರ್ಜಿಯಲ್ಲಿ ತಾಯಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

‘ಘಟನೆ ಬಳಿಕ ಮಗಳು ಸಾಕಷ್ಟು ನೊಂದಿದ್ದಾಳೆ. ಕುಟುಂಬದವರ ಜೊತೆ ಇದ್ದರೆ ಬದಲಾಗುವ ನಂಬಿಕೆಯಿದೆ. ಮಗಳಿಗೆ ಉತ್ತಮ ಭವಿಷ್ಯ ರೂಪಿಸುವ ಆಸೆ ಇದೆ. ಆಕೆ ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ. ವಾರ್ಷಿಕ ಪರೀಕ್ಷೆಗಳು ಹತ್ತಿರವಾಗುತ್ತಿವೆ. ಪರೀಕ್ಷೆ ಬರೆಯಲು, ಕುಟುಂಬದವರ ಜೊತೆ ಇರಲು ಅನುಕೂಲವಾಗುವಂತೆ ಜಾಮೀನು ನೀಡಬೇಕು’ ಎಂದೂ ತಾಯಿ ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಜಾಮೀನು ಅರ್ಜಿ ಸ್ವೀಕರಿಸಿರುವ ಬಾಲ ನ್ಯಾಯಮಂಡಳಿ ಶೀಘ್ರ ಈ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಪ್ರಕರಣ ವಿವರ: ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಬಟ್ಟೆ ಮಾರಾಟ ಮಳಿಗೆ ಇಟ್ಟುಕೊಂಡಿದ್ದ ಜೈಕುಮಾರ್ ಪತ್ನಿ, ಮಗ ಹಾಗೂ ಮಗಳ ಜೊತೆ ನೆಲೆಸಿದ್ದರು. ಆಗಸ್ಟ್ 17ರಂದು ಬೆಳಿಗ್ಗೆ ಕೆಲಸ ನಿಮಿತ್ತ ಪತ್ನಿ ಹಾಗೂ ಮಗ, ಪುದುಚೇರಿಗೆ ಹೋಗಿದ್ದರು.

ಅಂದು ರಾತ್ರಿ ಮನೆಗೆ ಬಂದು ಊಟ ಮಾಡಿದ್ದ ಜೈಕುಮಾರ್‌ ಅವರಿಗೆ ಮಗಳೇ ನಿದ್ರೆಮಾತ್ರೆ ಬೆರೆಸಿದ್ದ ಪಾನೀಯ ಕುಡಿಸಿದ್ದಳು. ಜೈಕುಮಾರ್ ನಿದ್ರೆಗೆ ಜಾರಿದ್ದರು. ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದ ಮಗಳು, ಹಾಸಿಗೆ ಮೇಲೆಯೇ ತಂದೆಗೆ ಚಾಕುವಿನಿಂದ ಇರಿದು ಕೊಂದಿ
ದ್ದಳು. ಮೃತದೇಹವನ್ನು ಎಳೆದೊಯ್ದು ಶೌಚಾಲಯದಲ್ಲಿ ಹಾಕಿದ್ದಳು.

ಆಗಸ್ಟ್ 18ರಂದು ನಸುಕಿನಲ್ಲಿ ಪೆಟ್ರೋಲ್‌ ಬಂಕ್‌ಗೆ ಹೋಗಿದ್ದ ಆರೋಪಿಗಳು, 8 ಲೀಟರ್ ಪೆಟ್ರೋಲ್‌ ತಂದು ಶವದ ಮೇಲೆ ಸುರಿದು ಬೆಂಕಿ ಹಚ್ಚಿದ್ದರು. ಬಳಿಕ ಪ್ರವೀಣ್ ಹೊರಟುಹೋಗಿದ್ದ. ಮನೆ ಚಾವಣಿಗೆ ಹೋಗಿದ್ದ ಬಾಲಕಿ, ‘ಕಾಪಾಡಿ... ಕಾಪಾಡಿ... ಬೆಂಕಿ... ಬೆಂಕಿ..’ ಎಂದು ಕೂಗಿ ಜನರನ್ನು ಸೇರಿಸಿದ್ದಳು. ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದ್ದಳು.

ಸ್ಥಳಕ್ಕೆ ಬಂದಿದ್ದ ರಾಜಾಜಿನಗರ ಠಾಣೆ ಪೊಲೀಸರು ಸ್ಥಳದಲ್ಲಿ ರಕ್ತದ ಕಲೆಗಳನ್ನು ಗುರುತಿಸಿದ್ದರು. ಮಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಸಂಗತಿ ಬಾಯ್ಬಿಟ್ಟಿದ್ದಳು. ಆ ನಂತರ, ಪ್ರಿಯಕರನೂ ಸಿಕ್ಕಿಬಿದ್ದ.

‘ತಂದೆ ವಿಪರೀತ ಕಿರುಕುಳ ನೀಡುತ್ತಿದ್ದ. ಪ್ರಿಯಕರನ ಜೊತೆಗೆ ಮಾತನಾಡಲೂ  ಬಿಡುತ್ತಿರಲಿಲ್ಲ. ಮೊಬೈಲ್ ಫೋನ್‌ ಅನ್ನು ಕಿತ್ತುಕೊಂಡಿದ್ದ. ಹೀಗಾಗಿ ಆತನನ್ನು ಕೊಲೆ ಮಾಡಿದೆ’ ಎಂಬುದಾಗಿ ಬಾಲಕಿ ಪೊಲೀಸರ ಎದುರು ಹೇಳಿಕೆ ನೀಡಿದ್ದರು.

ಹಿಂದೆ ತಿರಸ್ಕೃತಗೊಂಡಿದ್ದ ಅರ್ಜಿ

ರಾಜಾಜಿನಗರದ ಶಾಲೆಯೊಂದರಲ್ಲಿ ಬಾಲಕಿ ಓದುತ್ತಿದ್ದಳು. ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಅರ್ಧ ವಾರ್ಷಿಕ ಪರೀಕ್ಷೆ ವೇಳೆಯಲ್ಲೂ ಬಾಲಕಿಗೆ ಮಧ್ಯಂತರ ಜಾಮೀನು ಕೋರಿ ತಾಯಿ ಅರ್ಜಿ ಸಲ್ಲಿಸಿದ್ದರು. ಅದು ತಿರಸ್ಕೃತಗೊಂಡಿದೆ. 

‘ಮಗಳ ಶೈಕ್ಷಣಿಕ ಭವಿಷ್ಯ ಹಾಗೂ ಅರ್ಧ ವಾರ್ಷಿಕ ಪರೀಕ್ಷೆ ಕಾರಣ ನೀಡಿ ತಾಯಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಕೆ ದಿನಾಂಕಕ್ಕೂ ಮುನ್ನವೇ ಕೆಲ ವಿಷಯಗಳ ಪರೀಕ್ಷೆಗಳು ಮುಗಿದು ಹೋಗಿದ್ದವು. ಅದೇ ಅಂಶವನ್ನು ಆಧರಿಸಿ ಮಂಡಳಿ ಜಾಮೀನು ಅರ್ಜಿ ತಿರಸ್ಕರಿಸಿದೆ. ಈಗ ಪೂರ್ಣ ಪ್ರಮಾಣದ ಜಾಮೀನಿಗಾಗಿ ತಾಯಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯದಲ್ಲೇ ಅದರ ವಿಚಾರಣೆ ನಡೆಯಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು