ಸೋಮವಾರ, ಅಕ್ಟೋಬರ್ 14, 2019
22 °C

ರಾಜಕಾಲುವೆ ಅಭಿವೃದ್ಧಿ ಹೆಸರಲ್ಲಿ ಲೂಟಿ: ಆರೋಪ

Published:
Updated:

ಬೆಂಗಳೂರು: ರಾಜಕಾಲುವೆ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆಯಲಾಗಿದೆ ಎಂದು ಬಿಜೆಪಿ ನಗರ ಘಟಕದ ವಕ್ತಾರ ಎನ್.ಆರ್. ರಮೇಶ್ ಆರೋಪಿಸಿದರು.

‘ಪಾಲಿಕೆ ವ್ಯಾಪ್ತಿಯ 4 ಕಣಿವೆಗಳಿಗೆ ಸಂಬಂಧಿಸಿದ ರಾಜಕಾಲುವೆ ಪುನಶ್ಚೇತನ ಕಾರ್ಯಕ್ಕೆ 6 ಪ್ಯಾಕೇಜ್‌ಗಳಲ್ಲಿ ಒಟ್ಟು ₹800 ಕೋಟಿ ಮೊತ್ತದ ಟೆಂಡರ್‌ಗಳನ್ನು 2016-17ನೇ ಸಾಲಿನಲ್ಲಿ ಕರೆಯಲಾಗಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರಾಗಿದ್ದ ಕೆ.ಜೆ. ಜಾರ್ಜ್‌ ಮತ್ತು ಅಧಿಕಾರಿಗಳು ಸೇರಿ ಕನಿಷ್ಠ ₹200 ಕೋಟಿ ಲೂಟಿ ಮಾಡಿದ್ದಾರೆ’ ಎಂದು ಗುರುವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಆಪಾದಿಸಿದರು.

‘210.9 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ‌ಒಟ್ಟು 6,49,600 ಕ್ಯೂಬಿಕ್ ಮೀಟರ್ ಹೂಳು ತೆಗೆಯಲಾಗಿದ್ದು, ಇದಕ್ಕೆ ₹29 ಕೋಟಿ ಖರ್ಚಾಗಿದೆ. ಬೆಳ್ಳಹಳ್ಳಿ ಮತ್ತು ಅಂಜನಾಪುರ ಕ್ವಾರಿಗಳಲ್ಲಿ ಇದನ್ನು ಹಾಕಲಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಇಷ್ಟು ಪ್ರಮಾಣದ ಹೂಳನ್ನು ಒಂದು ಸ್ಥಳದಲ್ಲಿ ಹಾಕಿದ್ದರೆ ನಂದಿ ಬೆಟ್ಟಕ್ಕಿಂತ ಎತ್ತರವಾಗುತ್ತಿತ್ತು’ ಎಂದು ಅವರು ಹೇಳಿದರು.

ಈ ಹಗರಣಕ್ಕೆ ಸಂಬಂಧಿಸಿದಂತೆ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಬಿಎಂಟಿಎಫ್ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.

ಅಧಿಕಾರಿಯೇ ಆರೋಪಿ: ‘ಬಿ.ಎಸ್.ಪ್ರಹ್ಲಾದ್ ಅವರು ವಾಸದ ಮನೆಯ ಕಟ್ಟಡವನ್ನು ಬಫರ್ ವಲಯದಲ್ಲಿ ನಿರ್ಮಿಸಿದ್ದಾರೆ. ಈ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಇದೊಂದು ರೀತಿಯ ಬ್ಲ್ಯಾಕ್ ಮೇಲ್’

‘ಎನ್.ಆರ್. ರಮೇಶ್ ಅವರು ನನ್ನ ವೈಯಕ್ತಿಕ ವಿಷಯಕ್ಕೆ ಪದೇಪದೇ ಏಕೆ ಬಂದಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇದೂ ಒಂದು ರೀತಿಯ ಬ್ಲ್ಯಾಕ್‌ ಮೇಲ್‌’ ಎಂದು ಬಿ.ಎಸ್. ಪ್ರಹ್ಲಾದ್ ಹೇಳಿದರು.

‘2005–06ರಲ್ಲಿ ನಾನು ಮನೆ ಕಟ್ಟಿದ್ದೇನೆ. ಆಗ ಅದು ಬಫರ್ ವಲಯ ಆಗಿರಲಿಲ್ಲ. ನಿಯಮಾವಳಿ ಉಲ್ಲಂಘಿಸಿ ಮನೆ ಕಟ್ಟಿಲ್ಲ. ಅನುಮತಿ ಪಡೆದೇ ಮನೆ ಕಟ್ಟಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ರಾಜಕಾಲುವೆ ಹೂಳೆತ್ತುವ ಕಾಮಗಾರಿಯಲ್ಲಿ ಲೋಪ ಆಗಿದ್ದರೆ ತನಿಖೆ ನಡೆಸಲಿ. ಮುಖ್ಯ ಎಂಜಿನಿಯರ್ ಆಗಿರುವ ನಾನು ಹೂಳು ಎಷ್ಟಿದೆ ಎಂಬುದನ್ನು ಲೆಕ್ಕ ಹಾಕುತ್ತೇನೆಯೇ, ಎಂ.ಬಿ ಪುಸ್ತಕದಲ್ಲಿ ನಾನು ದಾಖಲಿಸುತ್ತೇನೆಯೇ? ಅದನ್ನೆಲ್ಲಾ ಕಾರ್ಯಪಾಲಕ ಎಂಜಿನಿಯರ್‌ಗಳು ನೋಡಿಕೊಳ್ಳುತ್ತಾರೆ. ಆದರೂ ಪಾರದರ್ಶಕವಾಗಿ ಇರಬೇಕು ಎಂಬ ಕಾರಣಕ್ಕೆ ಎಷ್ಟು ಹೂಳೆತ್ತಲಾಗಿದೆ ಎಂಬುದನ್ನು ವೆಬ್‌ಸೈಟ್‌ನಲ್ಲಿ ಹಾಕಿಸಿದ್ದೇನೆ’ ಎಂದು ಉತ್ತರಿಸಿದರು. 

Post Comments (+)