ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳು ತೆಗೆಯದೆಯೇ ತಡೆಗೋಡೆ ಕಟ್ಟಿದರು!

ಕಾಲುವೆಯೊಳಗಿನ ಪೊದೆ, ಕುರುಚಲು ಗಿಡಗಳನ್ನು ತೆರವು ಮಾಡಿಲ್ಲ
Last Updated 2 ಜೂನ್ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾಲುವೆಗೆ ಕಾಂಕ್ರೀಟ್‌ನ ಎತ್ತರದ ತಡೆಗೋಡೆಯೇನೋ ಕಟ್ಟಲಾಗಿದೆ. ಆದರೆ, ಕಾಲುವೆಯೊಳಗಿನ ಹೂಳು ತೆಗೆಯದೇ ಪ್ರವಾಹ ತಡೆಯುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಬೆಂಗಳೂರುಫುಟ್ಬಾಲ್ ಕ್ರೀಡಾಂಗಣದಿಂದ (ಗರುಡಾಮಾಲ್ ಸಮೀಪ) ಕಾಣಸಿಗುವ ರಾಜಕಾಲುವೆ ಮುಂದೆ ನೀಲಸಂದ್ರ, ವಿವೇಕನಗರ ಹಾದು ಕೋರಮಂಗಲ ತಲುಪುತ್ತದೆ. ಅದರ ಸದ್ಯದ ಸ್ಥಿತಿ ಮೇಲೆ ಹೇಳಿದಂತಿದೆ.

ವಿಕ್ಟೋರಿಯಾ ಲೇಔಟ್ ಪ್ರದೇಶದಲ್ಲಿ ಪ್ರಶಾಂತವಾಗಿ ಹರಿಯುವಂತೆ ಭಾಸವಾಗುವ ಕಾಲುವೆಯ ನೀರು ಮುಂದೆ ಆಸ್ಟಿನ್ ಟೌನ್ ದಾಟುತ್ತಿದ್ದಂತೆಯೇ ಸ್ವಲ್ಪ ವೇಗ ಪಡೆಯುತ್ತದೆ. ಹೂಳಿನ ಕಾರಣದಿಂದ ಅಲ್ಲಲ್ಲಿ ಕಟ್ಟಿಕೊಳ್ಳಲು ಆರಂಭವಾಗುತ್ತದೆ. ಹೂಳು ಅಲ್ಲಲ್ಲಿ ಅಣೆಕಟ್ಟೆಯಂತೆ ಸಂಗ್ರಹವಾಗಿಬಿಟ್ಟಿದೆ. ಕಾಲುವೆಯೊಳಗಿನ ಪೊದೆ, ಕುರುಚಲು ಗಿಡಗಳನ್ನು ತೆರವು ಮಾಡಿಲ್ಲ. ಸಣ್ಣ ಸಂದಿಗಳ ಮೂಲಕ ಬಿಡಾಡಿ ದನಗಳು ಕಾಲುವೆ ಪ್ರವೇಶಿಸುತ್ತವೆ.

ನೀಲಸಂದ್ರದಿಂದ ವಿವೇಕನಗರದ ರವಿ ಚಿತ್ರಮಂದಿರದವರೆಗೆ ಕಾಲುವೆಗಳಿಗೆ ಉದ್ದಾನುದ್ದ ಕಾಂಕ್ರೀಟ್ ತಡೆಗೋಡೆ ಕಟ್ಟಲಾಗಿದೆ. ಮಧ್ಯೆ ಅಲ್ಲಲ್ಲಿ ಕಲ್ಲಿನ ಹಳೇ ಗೋಡೆಗಳು ಹಾಗೆಯೇ ಇವೆ. ಈ ಪ್ರದೇಶ ಹೆಚ್ಚುಕಡಿಮೆ ಕೊಳೆಗೇರಿಯಂತೆಯೇ ಇದೆ. ಇಲ್ಲಿ ಪ್ರವಾಹ ಉಕ್ಕಿ ಹರಿದರೇನು ಗತಿ ಎಂಬ ಪ್ರಶ್ನೆ ಅಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ನೀಲಸಂದ್ರದಿಂದ ಹೊರಟ ಕಾಲುವೆಗೆ ನೀಲಸಂದ್ರ- ವಿವೇಕನಗರದ ಗಡಿಭಾಗದಲ್ಲಿ ಮತ್ತೊಂದು ಬೃಹತ್ ರಾಜಕಾಲುವೆ ಬಂದು ಸೇರುತ್ತದೆ. ಈಗಾಗಲೇ ಅದರಲ್ಲಿ ಕಡುಗಪ್ಪು ಬಣ್ಣದ, ದುರ್ವಾಸನೆಯಿಂದ ಕೂಡಿದ ನೀರು ಹರಿಯುತ್ತಿದೆ.

‘ಇವೆರಡೂ ಕಾಲುವೆಗಳ ನೀರಿನ ಹರಿಯುವ ಪ್ರಮಾಣ ನಿಭಾಯಿಸಲು ಕಾಲುವೆಗಳು ಸೇರುವ ಜಂಕ್ಷನ್ ಪ್ರದೇಶದಲ್ಲಿ ಸ್ವಲ್ಪ ಹೂಳು ತೆಗೆಯುವ, ತಡೆಗೋಡೆ ಬಲಪಡಿಸುವ ಕೆಲಸ ನಡೆದಿದೆ. ಆದರೂ ಉಕ್ಕಿ ಹರಿಯುತ್ತಿರುವ ಕೊಳಕು ನೀರು ಕೆಲಸಕ್ಕೆ ಅಡ್ಡಿಪಡಿಸುತ್ತಿದೆ’ ಎಂದು ಕಾರ್ಮಿಕರು ಹೇಳಿದರು.

‘ನೀಲಸಂದ್ರ ಮುಖ್ಯ ರಸ್ತೆ ಬಳಿ ಹಾದು ಹೋಗುವ ಕಾಲುವೆಯಲ್ಲಿ ಕುರುಚಲು ಗಿಡಗಳು ದಟ್ಟವಾಗಿ ಬೆಳೆದಿವೆ. ಕಾಲುವೆ ಅಗಲವಿದೆಯಾದರೂ ಹೂಳು, ಕುರುಚಲು ಗಿಡಗಳ ತಡೆಯೊಡ್ಡುವಿಕೆಯಿಂದಾಗಿ ನೀರು ಉಕ್ಕಿ ರಸ್ತೆ ಮೇಲೆ ಹರಿಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು’ ಎಂದು ಇಲ್ಲಿನ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದರು.

ನೀಲಸಂದ್ರ ಚರ್ಚ್ ಮುಂಭಾಗ ಒಳಚರಂಡಿ ಕಾಮಗಾರಿ ನಡೆದಿದೆ. ಚುನಾವಣಾ ನೀತಿಸಂಹಿತೆ ಕಾರಣದಿಂದಾಗಿ ಮಂದಗತಿಯಲ್ಲಿದ್ದ ಕಾಮಗಾರಿ ಈಗಲೂ ಹಾಗೆಯೇ ಸಾಗಿದೆ. ಮುಂಗಾರು ಮಳೆ ಸುರಿಯುವ ಮುನ್ನ ಕಾಮಗಾರಿ ಮುಗಿಯದಿದ್ದರೆ ರಸ್ತೆಯೇ ಪ್ರವಾಹ ಕಾಲುವೆಯಾಗಿ ಮಾರ್ಪಡುವುದು ನಿಶ್ಚಿತ ಎಂದು ಈ ಭಾಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್ ಚಾಲಕರೊಬ್ಬರು ಹೇಳಿದರು.

‘ಕೆಲವೆಡೆ ತಡೆಗೋಡೆ ಇನ್ನೂ ನಿರ್ಮಾಣ ಹಂತದಲ್ಲಿದೆ. ಜತೆಗೆ, ದುರ್ಬಲವಾಗಿರುವುದು ಕೂಡಾ ಇದೆ. ಈಗಲೇ ಗೋಡೆಯ ದೃಢತೆಯತ್ತ ಗಮನಹರಿಸಿದರೆ ಒಳ್ಳೆಯದು’ ಎನ್ನುತ್ತಾರೆ ನೀಲಸಂದ್ರದ ನಿವಾಸಿ ಆನಂದ.

‘ಕಾಲುವೆಗೆ ಮನೆಯ ಕಸ, ತ್ಯಾಜ್ಯವನ್ನು ಎಸೆಯುವುದು ದೊಡ್ಡ ಪ್ರಮಾಣದಲ್ಲೇ ಇದೆ. ಬಿಬಿಎಂಪಿ ಕಸ ಸಂಗ್ರಹಿಸುವವರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಹೀಗಾಗಿ ಕಾಲುವೆಗೆ ಕಸ ಎಸೆಯಬೇಕಾಗುತ್ತದೆ’ ಎಂದು ಸಮರ್ಥಿಸಿಕೊಂಡರು ಇಲ್ಲಿನ ವ್ಯಾಪಾರಿ ಮಹಿಳೆ.

ಸುಮಾರು 12 ಕಿಲೋಮೀಟರ್‌ ಉದ್ದದ ರಾಜಕಾಲುವೆಯ ಭಾಗ ಪರಿಶೀಲಿಸಿದಾಗ ಅಲ್ಲಿ ವ್ಯಾಪಕವಾಗಿ ತಡೆಗೋಡೆ ಕಟ್ಟಲಾಗಿದೆ. ಆದರೆ, ಆಯಕಟ್ಟಿನ ಸ್ಥಳಗಳಲ್ಲಿ ಗೋಡೆ ನಿರ್ಮಾಣ ಇನ್ನೂ ಆರಂಭಿಕ ಹಂತದಲ್ಲಿದೆ. ಮಳೆ ಸುರಿಯುವ ಕಾಮಗಾರಿ ಪೂರ್ಣಗೊಳ್ಳುವುದೂ ಕಷ್ಟ ಎನ್ನುತ್ತಾರೆ ಸ್ಥಳೀಯರು. ಹಾಗೇನಾದರೂ ಆದರೆ ಮಳೆ ನೀರು ಉಕ್ಕಿ ಹರಿದರೆ ಮನೆಗಳಿಗೆ ನುಗ್ಗುವುದು ಖಚಿತ.

‘ತಡೆಗೋಡೆ ನಿರ್ಮಾಣವೂ ಕಠಿಣ’

’ನೀಲಸಂದ್ರದಿಂದ ಮುಂದಕ್ಕೆ ಕಾಲುವೆ ಹೋದ ಪ್ರದೇಶಗಳಲ್ಲಿ (ರೋಜ್ ಗಾರ್ಡನ್, ವಿವೇಕನಗರ, ಈಜಿಪುರ) ಕಾಲುವೆ ನಿರ್ಮಾಣ ಮಾಡುವುದು ಸುಲಭವಲ್ಲ. ಏಕೆಂದರೆ ಇಲ್ಲಿ ಬಹುಪಾಲು ಭೂಮಿ ರಕ್ಷಣಾ ಇಲಾಖೆಗೆ ಸೇರಿದೆ. ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಮಾಡಬೇಕಾದರೂ ಹತ್ತಾರು ಅನುಮತಿ ಪ್ರಕ್ರಿಯೆಗಳು ಆಗಬೇಕು. ರಕ್ಷಣಾ ಭೂಮಿ ಹಲವೆಡೆ ಪಾಳುಬಿದ್ದಿದೆ. ಜನರು ಅಲ್ಲಿಗೂ ಬಂದು ಕಸ ಸುರಿಯುತ್ತಿದ್ದಾರೆ. ನಾವೇನು ಮಾಡಲು ಸಾಧ್ಯ?’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

***

ಕಳೆದ ವರ್ಷ ಮನೆ, ಅಂಗಡಿಗಳೊಳಗೆ ನೀರು ನುಗ್ಗಿತ್ತು. ಈ ಬಾರಿ ತಡೆಗೋಡೆ ಕಟ್ಟಿದ್ದಾರೆ. ಹಿಂದಿನ ಸಮಸ್ಯೆ ಮರುಕಳಿಸದು ಎಂದು ಭಾವಿಸಿದ್ದೇವೆ
-ಮೂರ್ತಿ, ವ್ಯಾಪಾರಿ, ನೀಲಸಂದ್ರ

**

ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಮನೆ ಬದಲಾಯಿಸಬೇಕಾಯಿತು. ಈಗ ತಡೆಗೋಡೆ ಕಟ್ಟಿದ್ದಾರೆ. ಆದರೆ, ದುರ್ವಾಸನೆ ನಡುವೆ ಬದುಕಬೇಕಾಗಿದೆ. ಏನು ಮಾಡಲಿ?
- ಶ್ರೀದೇವಿ, ಗೃಹಿಣಿ, ನೀಲಸಂದ್ರ

**

ಕೆಟ್ಟ ವಾಸನೆಯ ನಡುವೆ ರಾಜಕಾಲುವೆಯ ಬಳಿ ವಾಸಿಸುವುದು ಅನಿವಾರ್ಯವಾಗಿಬಿಟ್ಟಿದೆ. ಕಳೆದ ಬಾರಿ ಡೆಂಗಿ ಬಾಧಿಸಿ ಹೈರಾಣಾಗಿದ್ದೆವು.
- ಮೇರಿ, ಗೃಹಿಣಿ, ನೀಲಸಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT