ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಚಿನ್ನದ ಪದಕಗಳಿಗೆ ಕೊರಳೊಡ್ಡಿದ ವಲ್ಲೀಶ್‌

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ
Last Updated 26 ಮಾರ್ಚ್ 2019, 20:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಗಳವಾರ ಆಯೋಜಿಸಿದ್ದ 21ನೇ ಘಟಿಕೋತ್ಸವದಲ್ಲಿ ಮಂಗಳೂರಿನ ಎ.ಜೆ.ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ವಲ್ಲೀಶ್‌ ಶೆಣೈ 7 ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.

ಎಂಬಿಬಿಎಸ್‌ ಪದವೀಧರರಾಗಿರುವ ಮಂಗಳೂರಿನ ವಲ್ಲೀಶ್‌, ‘ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಂಶೋಧನೆಯಲ್ಲಿ ತೊಡಗಿ, ನರರೋಗಗಳಿಗೆ ಔಷಧಿ ಕಂಡುಹಿಡಿಯುವುದು ನನ್ನ ಹೆಬ್ಬಯಕೆ. ನರವ್ಯೂಹ ವಿಜ್ಞಾನದಲ್ಲಿ (ನ್ಯೂರಾಲಜಿ) ಸ್ನಾತಕೋತ್ತರ ಪದವಿ ಪಡೆಯುವ ಆಕಾಂಕ್ಷೆ ಇದೆ’ ಎಂದರು.

ಘಟಿಕೋತ್ಸವದಲ್ಲಿ ಒಟ್ಟು 78 ವಿದ್ಯಾರ್ಥಿಗಳಿಗೆ ರಾಜ್ಯಪಾಲ ವಜುಭಾಯಿ ವಾಲಾ ಚಿನ್ನದ ಪದಕ ಪ್ರದಾನ ಮಾಡಿದರು. ಬೆಂಗಳೂರಿನ ಡಿ.ಎ.ಪಾಂಡು ಸ್ಮಾರಕ ಆರ್‌.ವಿ.ದಂತ ವೈದ್ಯಕೀಯ ಕಾಲೇಜಿನ ಜಿ.ಅಪರ್ಣಾ ಹಾಗೂ ಮಂಡ್ಯದ ಭಾರತಿ ಕಾಲೇಜ್‌ ಆಫ್‌ ಫಾರ್ಮಸಿಯ ಫಾರ್ಮ.ಡಿ. ವಿದ್ಯಾರ್ಥಿನಿ ಭಾತ್ಸಾ ಲಿಜಾ ಜಾನ್ಸನ್‌ ತಲಾ 6 ಚಿನ್ನದ ಪದಕ ಗಳಿಸಿದರು.

ಹಾಸನದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಬಿಎಎಂಎಸ್‌ ವಿದ್ಯಾರ್ಥಿ ಕೆ.ಎಸ್‌.ಹರ್ಷಿತಾ 4 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಈ ಸಾಧನೆ ಬಗ್ಗೆ ಸಂತಸ ಹಂಚಿಕೊಂಡ ಹರ್ಷಿತಾ, ‘ನಿತ್ಯ ನಾಲ್ಕಾರು ಗಂಟೆ ಅಧ್ಯಯನ ಮಾಡುವ ನನಗೆ, ಓದು ಕಷ್ಟ ಎನಿಸಿದಾಗಲೆಲ್ಲ ಅಪ್ಪ–ಅಮ್ಮ ಧೈರ್ಯ ತುಂಬಿದ್ದಾರೆ. ಇಂದಿನ ಈ ಸಾಧನೆಗೆ ಅವರೂ ಕಾರಣ’ ಎಂದರು.

‘ಆಯುರ್ವೇದ ಕ್ಷೇತ್ರದಲ್ಲಿಯೇ ಹೆಚ್ಚಿನ ಆಸಕ್ತಿ ಇದ್ದು ಈ ಕ್ಷೇತ್ರದಲ್ಲೇ ಸಂಶೋಧನೆ ಕೈಗೊಳ್ಳುವ ಕನಸೂ ಇದೆ. ಇದಕ್ಕೆ ನನ್ನ ಗುರು ಡಾ.ಜಿ.ಶ್ರೀನಿವಾಸಾಚಾರ್ಯ ಅವರೇ ಪ್ರೇರಣೆ’ ಎಂದರು.

ಘಟಿಕೋತ್ಸವ ಭಾಷಣ ಮಾಡಿದ ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌, ‘ಉತ್ತಮ ಕಾರ್ಯಗಳಿಗೆ ವಯಸ್ಸಿನ ಹಂಗಿಲ್ಲ. ಸಾಮರ್ಥ್ಯವಿರುವವರೆಗೂ ಉತ್ತಮ ಕೆಲಸಗಳನ್ನು, ಸಾಧನೆಗಳನ್ನು ಮಾಡುತ್ತಲೇ ಇರಬೇಕು.ಮಾನವನ ಕಲ್ಪನಾ ಸಾಮರ್ಥ್ಯ, ಶಕ್ತಿ ಹಾಗೂ ಸಾಧನೆಗಳಿಗೆ ಇತಿಮಿತಿಗಳಿಲ್ಲ. ಹಾಗಾಗಿ, ಅಂದುಕೊಂಡದ್ದನ್ನು ಸಾಧಿಸುವ ತನಕ ವಿರಮಿಸದಿರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT