ರಾಜನಗರ ಡಕಾಯಿತಿ ಪ್ರಕರಣ ಆರೋಪಿಗಳ ಸುಳಿವು ಇದೆ: ಕಮಿಷನರ್ ನಾಗರಾಜ

7
‘ಅಂತರರಾಜ್ಯ ತಂಡದ ಕೃತ್ಯ'

ರಾಜನಗರ ಡಕಾಯಿತಿ ಪ್ರಕರಣ ಆರೋಪಿಗಳ ಸುಳಿವು ಇದೆ: ಕಮಿಷನರ್ ನಾಗರಾಜ

Published:
Updated:

ಹುಬ್ಬಳ್ಳಿ: ರಾಜನಗರದ ಕೊಲೆ– ಡಕಾಯಿತಿ ಪ್ರಕರಣ ಅಂತರರಾಜ್ಯ ತಂಡದ ಕೃತ್ಯವಾಗಿದ್ದು, ಆರೋಪಿಗಳ ಸುಳಿವು ಇದೆ ಎಂದು ಕಮಿಷನರ್ ಎಂ.ಎನ್. ನಾಗರಾಜ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಡಕಾಯಿತಿ ಆಗಿರುವ ರೀತಿ ನೋಡಿದರೆ ಇದೊಂದು ಅಂತರರಾಜ್ಯ ತಂಡದ ಕೃತ್ಯವೆಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದ್ದರಿಂದ ತನಿಖೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಹಾಗೂ ರಾಜ್ಯ ಅಪರಾಧ ದಾಖಲಾತಿ ವಿಭಾಗದ ಸಹಾಯ ಕೇಳಲಾಗಿದೆ ಎಂದರು.

ತನಿಖೆಗಾಗಿ ರಚಿಸಿರುವ ನಾಲ್ಕು ತಂಡಗಳು ಸಹ ಮಾಹಿತಿ ಕಲೆ ಹಾಕುತ್ತಿದ್ದು, ಕೆಲವೊಂದು ಸುಳಿವು ಸಹ ಲಭ್ಯವಾಗಿವೆ. ಖಾಸಗಿ ವ್ಯಕ್ತಿಗಳು ಅಳವಡಿಸಿದ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸಹ ಕೆಲವೊಂದು ದೃಶ್ಯಗಳು ದಾಖಲಾಗಿವೆ. ಆದರೆ ಅವರೇ ಆರೋಪಿಗಳೇ? ಸಾರ್ವಜನಿಕರೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಅದು ನಸುಕಿನ ಸಮಯವಾದ ಕಾರಣ ಸಾರ್ವಜನಿಕರು ಸಹ ಓಡಾಡಿರುತ್ತಾರೆ ಎಂದರು.

ಡಕಾಯಿತರು ‘ಹತ್ತು ಲಕ್ಷ ಎಲ್ಲಿ’ ಎಂದು ಕೇಳಿರುವ ಬಗ್ಗೆಯೂ ತನಿಖೆ ನಡೆದಿದೆ. ₹10 ಲಕ್ಷ ಹಣ ಡ್ರಾ ಮಾಡಿದ ಬಗ್ಗೆ ಫಾರ್ಮಿಸಿ ಮಾಲೀಕರೊಬ್ಬರನ್ನು ಪ್ರಶ್ನಿಸಲಾಗಿದೆ. ವಿವಿಧ ಸಂದರ್ಭಗಳಲ್ಲಿ ಹಣ ಡ್ರಾ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಆ ವಿಷಯದ ಬಗ್ಗೆ ಬ್ಯಾಂಕಿನಿಂದ ಸಹ ದೃಢೀಕರಣ ಪಡೆಯಲಾಗುವುದು. ಬೇರೊಂದು ಮನೆಯಲ್ಲಿ ಡಕಾಯಿತಿ ಮಾಡುವ ಬದಲು ಈ ಮನೆಗೆ ಬಂದರೇ ಎಂಬ ಪ್ರಶ್ನೆಯೂ ಇದೆ. ಸ್ಥಳೀಯರ ಸಹಾಯ ಮಾಡಿರುವ ಆಯಾಮದಿಂದಲೂ ತನಿಖೆ ನಡೆದಿದೆ ಎಂದರು.

ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಮಾತಿನಲ್ಲಿ ಸತ್ಯ ಇಲ್ಲ. ಧಾರವಾಡದಲ್ಲಿ ನಡೆದ ಒಂದು ಪ್ರಕರಣದಲ್ಲಿ ಮಾತ್ರ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ರಾಜನಗರದ್ದು ಈ ವರ್ಷದ ಮೊದಲ ಪ್ರಕರಣವಾಗಿದೆ. ವಾಣಿಜ್ಯ ವಹಿವಾಟು ಇರುವ ನಗರವಾಗಿರುವುದರಿಂದ ಕೆಲವೊಂದು ಘಟನೆಗಳು ನಡೆಯುತ್ತವೆ ಎಂದು ಹೇಳಿದರು.

ಸಿ.ಸಿ. ಟಿ.ವಿ. ಅಳವಡಿಸಿ: ಸಿ.ಟಿ. ಟಿ.ವಿ ಕ್ಯಾಮೆರಾ ಅಳವಡಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. 1193 ಅಂಗಡಿ ಮುಂಗಟ್ಟುಗಳಿಗೆ ನೋಟಿಸ್ ಸಹ ನೀಡಲಾಗಿದೆ. ಅವರಲ್ಲಿ ಕೆಲವರು ಅಳವಡಿಸಿದ್ದಾರೆ. ಸಿ.ಸಿ. ಟಿ.ವಿ. ಕ್ಯಾಮೆರಾ ಇದ್ದರೆ ಅಪರಾಧ ತಡೆಯಬಹುದು, ನಡೆದರೂ ಬಂಧಿಸಲು ಅನುಕೂಲವಾಗುತ್ತದೆ ಎಂದರು.

ಡಿಸಿ‍ಪಿ ರವೀಂದ್ರ ಗಡಾದಿ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !