ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕೈಮಗ್ಗಗಳ ನಡುವೆ ರಾಮಮಂದಿರ

₹3 ಕೋಟಿ ವೆಚ್ಚದಲ್ಲಿ ತಿಪಟೂರಿನ ಗಾಯತ್ರಿ ನಗರದಲ್ಲಿ ತಲೆ ಎತ್ತಿದೆ ದೇಗುಲ
Last Updated 17 ನವೆಂಬರ್ 2019, 7:15 IST
ಅಕ್ಷರ ಗಾತ್ರ

ತಿಪಟೂರು: ತಿಪಟೂರು ನಗರಕ್ಕೆ ಹೊಂದಿಕೊಂಡಿರುವ, ರೇಷ್ಮೆ ಸೀರೆಗಳ ತವರೂರು ಎಂದು ಖ್ಯಾತಿ ಪಡೆದಿರುವ ಗಾಯತ್ರಿ ನಗರದಲ್ಲಿ ಕೈಮಗ್ಗಗಳಲ್ಲಿಯೇ ಸೀರೆಗಳನ್ನು ನೇಯುತ್ತಾ ಜೀವನ ಸಾಗಿಸುವ ಜನತಾ ಕಾಲೊನಿ ಶ್ರಮಿಕರು ಭವ್ಯವಾದ ರಾಮ ಮಂದಿರ ನಿರ್ಮಿಸಿದ್ದಾರೆ.

ಈ ಕಾಲೊನಿಯ ಜನರು ಪುಟ್ಟ ಮನೆಯೊಂದರಲ್ಲಿ ಭಜನಾ ಮಂಡಳಿ ಆರಂಭಿಸಿದರು. ಅದು 1977ರ ಹೊತ್ತಿಗೆ ಶ್ರೀರಾಮ ಸೇವಾ ಸಂಘವಾಯಿತು. ನಂತರ ಸಣ್ಣ ಮಂದಿರ ತಲೆ ಎತ್ತಿತ್ತು. ರಾಮನ ಭಕ್ತರು, ಊರಿನ ದಾನಿಗಳ ಸಹಕಾರರೊಂದಿಗೆ 2012ರಲ್ಲಿ ಭವ್ಯ ದೇಗುಲ ನಿರ್ಮಾಣಕ್ಕೆ ಕಾರಣವಾಯಿತು.

ಅದೀಗ ₹ 3 ಕೋಟಿ ವೆಚ್ಚದಲ್ಲಿ ಸುಂದರವಾದ ರಾಮಮಂದಿರ ನಿರ್ಮಾಣವಾಗಿದೆ. ದೇವಾಲಯದ ಸೌಂದರ್ಯ ಕಣ್ತುಂಬಿಕೊಂಡವರಿಗೆ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ ಹಾಗೂ ಗಣಪತಿಯ ಮೇಲಿನ ಭಕ್ತಿ ಇಮ್ಮಡಿ ಆಗುವಂತಿದೆ. ಶಾಂತ ಚಿತ್ತರಾಗಿ ಕುಳಿತು ದೇವರನ್ನು ಧ್ಯಾನಿಸಲು ಮನಸ್ಸು ಹಾತೊರೆಯುವಂತಿದೆ.

ದೇವಾಲಯದ ಸ್ವರೂಪ: ಈ ದೇಗುಲವು 127x91 ಚದುರಅಡಿ ವಿಸ್ತೀರ್ಣದ್ದಾಗಿದೆ. ಸುಂದರವಾದ ಪ್ರಾಂಗಣ, ನವೀನ ವಾಸ್ತು ಶಿಲ್ಪ ಆಕರ್ಷಣೀಯವಾಗಿದೆ. ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ ಹಾಗೂ ಗಣಪತಿ ದೇವರನ್ನು ಪ್ರತ್ಯೇಕವಾಗಿ ಪ್ರತಿಷ್ಠಾಪಿಸಲಾಗಿದೆ. ವಿಶೇಷವಾದ ತುಳಸಿ ಬೃಂದಾವನವನ್ನು ನಿರ್ಮಾಣ ಮಾಡಲಾಗಿದೆ. ದೇವಾಲಯದ ಮೇಲ್ಭಾಗದಲ್ಲಿ ಎತ್ತರವಾದ ಶಿಖರದಲ್ಲಿ ಸುಂದರ ಶಿಲ್ಪಗಳಿವೆ. ಸುತ್ತಲೂ ವೈವಿಧ್ಯ ಭಂಗಿಯಲ್ಲಿರುವ ಶಿಲ್ಪಗಳಲ್ಲಿ ಧಾರ್ಮಿಕ ಪರಂಪರೆಯನ್ನು ನೆನಪಿಸುವ ದೃಶ್ಯಾವಳಿಗಳಿವೆ.

ದೇವಾಲಯದ ಸುತ್ತಲೂ ವಿಸ್ತಾರವಾದ ಪೌಳಿ ಇದೆ. ಸೌಂದರ್ಯಕ್ಕೆ ಮೆರುಗು ನೀಡುವಂತೆ ಆವರಣ ನಿರ್ಮಿಸಲಾಗಿದೆ. ಮಂದಿರದ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ಆಕರ್ಷಣಿಯ ಕಲ್ಲಿನ ಕೆತ್ತನೆಗಳಿಂದ ನಿರ್ಮಾಣವಾಗಿರುವ ಈ ದೇವಾಲಯವನ್ನು ನೋಡುವುದು ಕಣ್ಣಿಗೆ ಹಬ್ಬದಂತಿದೆ.

ಮಹಾದಾಸೋಹ ವ್ಯವಸ್ಥೆ: ದೇವರ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಮಾರಂಭ ಸೇರಿದಂತೆ ನಾಲ್ಕು ದಿನಗಳು ನಿರಂತರ ದಾಸೋಹ ಜರುಗಲಿದೆ.

****

'ದಾನಿಗಳ, ಭಕ್ತರು ಮತ್ತು ಟ್ರಸ್ಟ್‌ನ ಪದಾಧಿಕಾರಿಗಳ ಸಹಕಾರದಿಂದ ದೇವಾಲಯ ನಿರ್ಮಾಣ ಸುಸೂತ್ರವಾಗಿ ನಡೆದಿದೆ'
-ಮೋಹನ್ ರಾಜ್, ಶ್ರೀರಾಮ ಚಾರಿಟಬಲ್ ಟ್ರಸ್ಟ್ , ಪದಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT