ರಾಮನಗರ ಉಪಚುನಾವಣೆ: ಬಿಜೆಪಿಯಿಂದ ರುದ್ರೇಶ್‌, ಜೆಡಿಎಸ್‌ನಿಂದ ಅನಿತಾ?

7

ರಾಮನಗರ ಉಪಚುನಾವಣೆ: ಬಿಜೆಪಿಯಿಂದ ರುದ್ರೇಶ್‌, ಜೆಡಿಎಸ್‌ನಿಂದ ಅನಿತಾ?

Published:
Updated:

ಬೆಂಗಳೂರು: ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಸಲು ಜೆಡಿಎಸ್‌ ಮತ್ತು ಬಿಜೆಪಿ ತೆರೆಮರೆಯ ಕಸರತ್ತು ನಡೆಸುತ್ತಿದ್ದು, ಬಿಜೆಪಿಯಿಂದ ಎಂ.ರುದ್ರೇಶ್‌ ಮತ್ತು ಜೆಡಿಎಸ್‌ನಿಂದ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಜೆಡಿಎಸ್‌ ಅನ್ನು ಬೆಂಬಲಿಸಲಿದೆ. ಹೀಗಾಗಿ ಜೆಡಿಎಸ್‌ ಮತ್ತು ಬಿಜೆಪಿ ಜತೆ ನೇರ ಹಣಾಹಣಿ ನಡೆಯಲಿದೆ.

ಏತನ್ಮಧ್ಯೆ, ‘ರಾಮನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಆ ಸಮುದಾಯದ ಮನಗೆಲ್ಲುವ ಕೆಲಸಕ್ಕೆ ಮುಖ್ಯಮಂತ್ರಿ ಮುಂದಾಗಬೇಕು’ ಎಂಬ ಒತ್ತಾಯವೂ ಜೆಡಿಎಸ್‌ನಲ್ಲಿ ಕೇಳಿಬಂದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಲು ಅನಿತಾ ಸಿದ್ಧತೆ ನಡೆಸಿದ್ದರು. ಇನ್ನೊಂದೆಡೆ ರೇವಣ್ಣ ಅವರ ಪತ್ನಿ ಭವಾನಿ, ಪುತ್ರ ಪ್ರಜ್ವಲ್‌ ರೇವಣ್ಣ ಅವರೂ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಕುಟುಂಬದ ಇಬ್ಬರು ಮಾತ್ರ ಸ್ಪರ್ಧಿಸುತ್ತಾರೆ ಎಂದು ಹೇಳುವ ಮೂಲಕ ಕುಟುಂಬದೊಳಗಿನ ಪೈಪೋಟಿಗೆ ಕಡಿವಾಣ ಹಾಕಿದ್ದ ಎಚ್.ಡಿ.ಕುಮಾರಸ್ವಾಮಿ (ಅಂದು ಜೆಡಿಎಸ್‌ ಅಧ್ಯಕ್ಷ) ತಾವೇ ಎರಡು ಕಡೆ ಸ್ಪರ್ಧಿಸಿದ್ದರು.

ಸಿದ್ಧತಾ ಸಭೆ: ಕುಮಾರಸ್ವಾಮಿ ಬುಧವಾರ ರಾಮನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಆಪ್ತರೊಂದಿಗೆ ಉಪಚುನಾವಣೆ ಸಿದ್ಧತೆಯ ಬಗ್ಗೆ ಚರ್ಚೆ ನಡೆಸಿದರು. 

ಇನ್ನೊಂದೆಡೆ, ರಾಮನಗರ ಬಿಜೆಪಿ ಘಟಕದ ಅಧ್ಯಕ್ಷ ಎಂ.ರುದ್ರೇಶ್‌ ಅವರನ್ನು ಕರೆಸಿಕೊಂಡ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸುಮಾರು 45 ನಿಮಿಷ ಸಮಾಲೋಚನೆ ನಡೆಸಿದರು. ‘ಚುನಾವಣೆಗೆ ಸ್ಪರ್ಧಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಿ’ ಎಂದೂ ಸೂಚಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸೋತ ಸಿ.‍ಪಿ.ಯೋಗೀಶ್ವರ ಅವರನ್ನು ಕಣಕ್ಕಿಳಿಸಲು ಪಕ್ಷ ಆಸಕ್ತಿ ತೋರಿತ್ತು. ‘ಚುನಾವಣಾ ಖರ್ಚನ್ನು ಪಕ್ಷ ಭರಿಸಿದರೆ ಸ್ಪರ್ಧೆಗೆ ಸಿದ್ಧ’ ಎಂದು ಯೋಗೀಶ್ವರ ರಾಜ್ಯ ನಾಯಕರಿಗೆ ತಿಳಿಸಿದ್ದಾರೆ.

ಪಕ್ಷದ ಮಂಡಲ ಅಧ್ಯಕ್ಷ ಪ್ರವೀಣ್‌ ಗೌಡ ಹಾಗೂ ಮಾಗಡಿಯ ಉದ್ಯಮಿ ಎನ್‌.ವೇಣುಗೋಪಾಲ್‌ ಸಹ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ‘3–4 ದಿನಗಳಲ್ಲಿ ಪಕ್ಷದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗುತ್ತದೆ’ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !