ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಸ ನಿರ್ದೇಶಕನ ಅವಸರವೇ ‘ಸ್ಫೋಟ’ಕ್ಕೆ ಕಾರಣ?

ವಿಮಾನ ಟಿಕೆಟ್‌ ಕಾಯ್ದಿರಿಸಿ ಚಿತ್ರೀಕರಣದಲ್ಲಿ ಭಾಗಿ * ಶುಕ್ರವಾರ ರಾತ್ರಿಯೇ ಚೆನ್ನೈಗೆ ಹೋಗಬೇಕಿದ್ದ ವಿಜಯನ್‌
Last Updated 30 ಮಾರ್ಚ್ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ರಣಂ’ ಚಲನಚಿತ್ರದ ಸಾಹಸ ದೃಶ್ಯಗಳ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದ ತಮಿಳಿನ ಸಾಹಸ ನಿರ್ದೇಶಕ ವಿಜಯನ್ ಅವರ ಅವಸರವೇ ‘ಸ್ಫೋಟ’ಕ್ಕೆ ಕಾರಣವಾಯಿತು’ ಎನ್ನುತ್ತವೆ ಪೊಲೀಸ್‌ ಮೂಲಗಳು.

‘ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡದ ಹಲವು ಹಿಟ್‌ ಸಿನಿಮಾಗಳ ಮೂಲಕ ಹೆಸರು ಮಾಡಿದ್ದ ವಿಜಯನ್, ಬಹುಬೇಡಿಕೆಯ ಸಾಹಸ ನಿರ್ದೇಶಕ. ಸದ್ಯ ಚಿತ್ರೀಕರಣ ನಡೆಯುತ್ತಿದ್ದ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ವಿಷ್ಣುವರ್ಧನ್ ಅಭಿನಯದ ‘ಸಾಹಸ ಸಿಂಹ’, ದರ್ಶನ್ ಅಭಿನಯದ ‘ತಾರಕ’ ಸೇರಿದಂತೆ ಹಲವು ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಜಯನ್, ಎರಡು ವರ್ಷ ಕನ್ನಡ ಸಿನಿಮಾಗಳಿಗೆ ದಿನಾಂಕ ನೀಡಿರಲಿಲ್ಲ. ‘ರಣಂ’ ಸಿನಿಮಾ ನಿರ್ದೇಶಕ ವಿ.ಸಮುದ್ರಂ, ತಮ್ಮ ಸಿನಿಮಾಕ್ಕೆ ಸಾಹಸ ನಿರ್ದೇಶಕರಾಗಲು ಒಪ್ಪಿಸಿದ್ದರು.’

‘ರಣಂ’ ಚಿತ್ರೀಕರಣಕ್ಕೆ ಕೆಲವೇ ದಿನ ಕಾಲ್‌ಶೀಟ್‌ ನೀಡಿದ್ದ ವಿಜಯನ್, ನಿಗದಿತ ದಿನದಂದು ಶೂಟಿಂಗ್‌ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಕ್ಲೈಮ್ಯಾಕ್ಸ್‌ ದೃಶ್ಯಗಳ ಚಿತ್ರೀಕರಣಕ್ಕೆ ಕೆಲ ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ವಿಜಯನ್, ಶುಕ್ರವಾರ ರಾತ್ರಿ 7 ಗಂಟೆಗೆ ವಾಪಸ್‌ ಚೆನ್ನೈಗೆ ಹೋಗಲು ವಿಮಾನದ ಟಿಕೆಟ್‌ ಕಾಯ್ದಿರಿಸಿಯೇ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು’ ಎನ್ನುತ್ತಾರೆ ಆ ಪೊಲೀಸ್‌ ಅಧಿಕಾರಿ.

ಶುಕ್ರವಾರ ಬೆಳಿಗ್ಗೆ ಶೂಟಿಂಗ್‌ ಆರಂಭವಾಗುತ್ತಿದ್ದಂತೆ ವಿಜಯನ್, ‘ರಾತ್ರಿ ವಿಮಾನಕ್ಕೆ ಹೋಗಬೇಕು... ಬೇಗ ಬೇಗ ಕಾರು ಬೆನ್ನಟ್ಟುವ ಹಾಗೂ ಸ್ಫೋಟದ ದೃಶ್ಯಕ್ಕೆ ತಯಾರಿ ಮಾಡಿಕೊಳ್ಳಿ’ ಎಂದು ತಂತ್ರಜ್ಞರಿಗೆ ಹೇಳುತ್ತಲೇ ಇದ್ದರು. ಕಾರು ಬೆನ್ನಟ್ಟುವ ದೃಶ್ಯದ ಚಿತ್ರೀಕರಣ ಸಂಜೆ 4 ಗಂಟೆಗೆ ಮುಗಿದಿತ್ತು. ನಂತರ ತರಾತುರಿಯಲ್ಲಿ ಕಾರು ಸ್ಫೋಟಿಸಲು ಸಿದ್ಧತೆ ನಡೆದಿತ್ತು.

‘ರಸ್ತೆ ಮಧ್ಯೆ ಕಾರು ನಿಲ್ಲಿಸಿದ್ದ ತಂತ್ರಜ್ಞರು, ಸಿಲಿಂಡರ್ ಸ್ಫೋಟಿಸಿದ್ದರು. ಗುರಿ ತಪ್ಪಿದ್ದ ಸಿಲಿಂಡರ್, ಸುಮೇರಾ ಬಾನು ಹಾಗೂ ಆಯೇರಾ ಬಾನು ನಿಂತಿದ್ದ ಸ್ಥಳದಲ್ಲಿ ಬಿದ್ದು ಸ್ಫೋಟಗೊಂಡಿತ್ತು’ ಎಂದು ಅಧಿಕಾರಿ ವಿವರಿಸಿದರು.

ವಿಮಾನದಲ್ಲಿ ಹುಡುಕಾಡಿದ ಪೊಲೀಸರು: ಸ್ಫೋಟದ ನಂತರ ಸ್ಥಳದಿಂದ ವಿಜಯನ್ ಪಲಾಯನ ಮಾಡಿದ್ದಾರೆ. ಅವರು ವಿಮಾನದ ಟಿಕೆಟ್ ಕಾಯ್ದರಿಸಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಅವರಿಗಾಗಿ ವಿಮಾನದಲ್ಲಿ ಹುಡುಕಾಟ ನಡೆಸಿದರು. ಆದರೆ, ವಿಜಯನ್ ಕಾಯ್ದಿರಿಸಿದ್ದ ಆಸನ ಖಾಲಿ ಇತ್ತು.

‘ರಸ್ತೆ ಮಾರ್ಗವಾಗಿ ವಿಜಯನ್ ಚೆನ್ನೈಗೆ ಹೋಗಿರುವ ಮಾಹಿತಿ ಇದೆ. ಪೊಲೀಸರ ವಿಶೇಷ ತಂಡವೊಂದು ಈಗಾಗಲೇ ಚೆನ್ನೈಗೆ ತೆರಳಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಚಿತ್ರತಂಡದ ವಿರುದ್ಧ ದೂರು ನೀಡಿದ ತಬ್ರೇಜ್

ಸ್ಫೋಟದಿಂದ ಮೃತಪಟ್ಟ ಸುಮೇರಾ ಬಾನು ಅವರ ಪತಿ ತಬ್ರೇಜ್‌, ಚಿತ್ರತಂಡದ ವಿರುದ್ಧ ಬಾಗಲೂರು ಠಾಣೆಗೆ ದೂರು ನೀಡಿದ್ದು, ಅದರ ವಿವರ ಹೀಗಿದೆ.

‘ಕುಟುಂಬದವರ ಜತೆಗೆ ಮಾರ್ಚ್‌ 29ರಂದು ಮಧ್ಯಾಹ್ನ ಸೂಲಿಬೆಲೆಗೆ ಹೊರಟಿದ್ದೆ.ಮಹದೇವಕೊಡಿಗೇಹಳ್ಳಿ ಹತ್ತಿರದ ಕೆಐಎಡಿಬಿ ಪ್ರದೇಶದ ಮುಖ್ಯರಸ್ತೆಯಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು.

ಅದನ್ನು ಕಂಡ ಮಕ್ಕಳು, ‘ಶೂಟಿಂಗ್ ನೋಡೋಣ‘ ಎಂದು ಹೇಳಿದ್ದರು. ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ, ಶೂಟಿಂಗ್‌ನ ಬಸ್ ಸಮೀಪ ಹೋಗಿ ನಾವೆಲ್ಲರೂ ನಿಂತುಕೊಂಡಿದ್ದೆವು’ ಎಂದವರು ತಿಳಿಸಿದ್ದಾರೆ.

‘ಸಂಜೆ 4 ಗಂಟೆ ಸುಮಾರಿಗೆ ರಸ್ತೆಯಲ್ಲಿ ರೋಲರ್, ಕ್ರೇನ್‌ ಹಾಗೂ ಕಾರುಗಳನ್ನು ನಿಲ್ಲಿಸಿಕೊಂಡಿದ್ದರು. ಕಾರುಗಳನ್ನು ಜಂಪ್ ಮಾಡಿಸಲು ಸಿಲಿಂಡರ್ ಸ್ಫೋಟಿಸಿದ್ದರು. ಆ ಸಿಲಿಂಡರ್, ಕಾರುಗಳ ಕಡೆಗೆ ಹೋಗದೇ ನಮ್ಮತ್ತ ಬಂದಿತ್ತು. ಪತ್ನಿ ಸುಮೇರಾ ಬಾನು ಅವರ ಕೈ ತುಂಡರಿಸಿ ಮುಖ ಹಾಗೂ ಕತ್ತಿಗೆ ಪೆಟ್ಟಾಯಿತು. ಮಗಳು ಆಯೇರಾ ಬಾನು ಅವರ ತಲೆ ಹಾಗೂ ಮುಖಕ್ಕೆ ಪೆಟ್ಟಾಯಿತು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ಹಿರಿಯ ಮಗಳು ಜೈನಬಿಗೆ ತೀವ್ರ ಗಾಯವಾಯಿತು. ಇದಕ್ಕೆ ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT