ರಾಂಚಿ ಯುವತಿ ಮೇಲೆ ಅತ್ಯಾಚಾರ; ಟೆಕಿ ಸೆರೆ

7
ಜ್ಯೂಸ್‌ಗೆ ನಿದ್ರೆ ಮಾತ್ರೆ ಹಾಕಿ ಕೃತ್ಯ * ಬುದ್ಧಿಮಾತು ಹೇಳಿದ್ದ ಸಂತ್ರಸ್ತೆ

ರಾಂಚಿ ಯುವತಿ ಮೇಲೆ ಅತ್ಯಾಚಾರ; ಟೆಕಿ ಸೆರೆ

Published:
Updated:

ಬೆಂಗಳೂರು: ನಿದ್ರೆ ಮಾತ್ರೆ ಬೆರೆಸಿದ ಕಿತ್ತಳೆ ಹಣ್ಣಿನ ಜ್ಯೂಸ್‌ ಕುಡಿಸಿ 32 ವರ್ಷದ ರಾಂಚಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದೆಹಲಿಯ ಸಾಫ್ಟ್‌ವೇರ್ ಉದ್ಯೋಗಿ ಮೈಕೆಲ್ ಸೊರೆಂಗ್ (23) ಎಂಬಾತನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆ ಭಾನುವಾರ ದೂರು ಕೊಟ್ಟಿದ್ದರು. ಅತ್ಯಾಚಾರ (ಐಪಿಸಿ 376) ಹಾಗೂ ವಂಚನೆ (420) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ಮೈಕೆಲ್‌ನನ್ನು ಮಂಗಳವಾರ ಬೆಳಿಗ್ಗೆ ಬೆಳ್ಳಂದೂರಿನ ಆತನ ಫ್ಲ್ಯಾಟ್‌ನಲ್ಲೇ ವಶಕ್ಕೆ ಪಡೆಯಲಾಯಿತು. ನ್ಯಾಯಾಲಯದ ಆದೇಶದ ಮೇರೆಗೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ನೀನಿನ್ನೂ ಚಿಕ್ಕವನು ಎಂದಿದ್ದೆ: ‘ವರ್ಷದ ಹಿಂದೆ ನಗರಕ್ಕೆ ಬಂದ ನಾನು, ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡಿಕೊಂಡು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಚರ್ಚ್‌ ಫಾದರ್‌ ಒಬ್ಬರ ಮೂಲಕ ಮೈಕೆಲ್‌ನ ಪರಿಚಯವಾಗಿತ್ತು. ಆತ ನನ್ನ ಮೊಬೈಲ್ ಸಂಖ್ಯೆ ಪಡೆದು ನಿತ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

‘ಕೆಲ ದಿನಗಳ ಮಾತುಕತೆ ಬಳಿಕ ಇಬ್ಬರೂ ಆಪ್ತ ಸ್ನೇಹಿತರಾದೆವು. ಇತ್ತೀಚೆಗೆ ಮನೆಗೆ ಊಟಕ್ಕೆ ಕರೆದಿದ್ದ ಆತ, ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ಇಬ್ಬರೂ ಮದುವೆ ಆಗೋಣ’ ಎಂದಿದ್ದ. ಅದಕ್ಕೆ, ನನಗಿಂತ ನೀನು 9 ವರ್ಷ ಚಿಕ್ಕವನು. ಜೋಡಿ ಸರಿ ಹೋಗುವುದಿಲ್ಲ. ಸ್ನೇಹಿತನಾಗಿಯೇ ಇರು ಎಂದು ಬುದ್ಧಿಮಾತು ಹೇಳಿದ್ದೆ. ಅದಕ್ಕೆ ಒಪ್ಪಿಕೊಂಡ ಆತ, ಕುಡಿಯಲು ಕಿತ್ತಳೆ ಹಣ್ಣಿನ ಜ್ಯೂಸ್ ಕೊಟ್ಟಿದ್ದ.’

‘ಈ ಸಂದರ್ಭದಲ್ಲಿ ಯಾವುದೋ ಮಾತ್ರೆ ನುಂಗಿದ ಮೈಕೆಲ್, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬಲವಂತ ಮಾಡಿದ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ವಲ್ಪ ಸಮಯದಲ್ಲೇ ತಲೆ ಸುತ್ತಿದಂತಾಗಿ ಪ್ರಜ್ಞೆ ಕಳೆದುಕೊಂಡೆ. ಈ ವೇಳೆ ಮೈಕೆಲ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಒಂದು ತಾಸಿನ ಬಳಿಕ ಎಚ್ಚರವಾಯಿತು. ಆಗ ಮೈಕೆಲ್ ಇರಲಿಲ್ಲ. ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿದ್ದ ಎಂಬುದು ಆ ನಂತರ ಗೊತ್ತಾಯಿತು’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

‘ಮದುವೆಯ ನಿರ್ಧಾರಕ್ಕೆ ಬಂದೆ’

‘ನಡೆದಿದ್ದನ್ನು ಸ್ನೇಹಿತೆಯ ಬಳಿ ಹೇಳಿಕೊಂಡೆ. ಆಕೆಯ ಸಲಹೆಯಂತೆ ಮೈಕೆಲ್‌ನನ್ನೇ ಮದುವೆ ಆಗುವ ನಿರ್ಧಾರಕ್ಕೆ ಬಂದೆ. ಆದರೆ, ಆತ ಮೊಬೈಲ್ ಸಂಪರ್ಕಕ್ಕೆ ಸಿಗಲೇ ಇಲ್ಲ. ಇತ್ತೀಚೆಗೆ ಫ್ಲ್ಯಾಟ್ ಕೂಡ ಬದಲಾಯಿಸಿದ್ದ. ಹೀಗಾಗಿ, ಆತನ ವಿರುದ್ಧ ಕ್ರಮ ಜರುಗಿಸಿ ನನಗೆ ನ್ಯಾಯ ಕೊಡಿಸಿ’ ಎಂದು ಸಂತ್ರಸ್ತೆ ಪೊಲೀಸರನ್ನು ಮನವಿ ಮಾಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !