ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗಣೆಗೆ ‘ಕೋಡ್‌ವರ್ಡ್‌’!

ರಕ್ತಚಂದನ: ಹವಾಲಾ ಮೂಲಕ ಹಣ ರವಾನೆ
Last Updated 18 ಮೇ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ರಕ್ತಚಂದನವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಸ್ಮಗ್ಲರ್‌ಗಳು, ‘ಕೋಡ್‌ವರ್ಡ್‌’ಗಳನ್ನು ಬಳಸುತ್ತಿದ್ದರು. ಹೀಗಾಗಿಯೇ ಅವರ ಅಕ್ರಮದ ಸುಳಿವು ಯಾರಿಗೂ ಸಿಕ್ಕಿರಲಿಲ್ಲ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಜಾಲದ ರೂವಾರಿ ಅಬ್ದುಲ್‌ ರಷೀದ್, ಪುತ್ತೂರಿನಲ್ಲೇ ಕುಳಿತುಕೊಂಡು ಸಹಚರರ ಮೂಲಕ ರಕ್ತಚಂದನ ಸಾಗಣೆ ಮಾಡಿಸುತ್ತಿದ್ದ. ಬಸ್‌ ಹಾಗೂ ಲಾರಿಗಳಲ್ಲಿ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಪಾರ್ಸಲ್‌ಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಅವುಗಳ ಮೇಲೆ ‘ಗ್ರೀನ್– 1, 2 ,3...’, ‘ಎಎ–1, 2,...‘ ಹಾಗೂ ‘ಬಿಬಿ–1, 2,...’ ಎಂಬ ಕೋಡ್‌ಗಳನ್ನು ಬರೆಯಲಾಗುತ್ತಿತ್ತು.’

‘ಹೊರರಾಜ್ಯ ಹಾಗೂ ವಿದೇಶಗಳಲ್ಲಿ ಏಜೆಂಟರನ್ನು ನೇಮಕ ಮಾಡಿದ್ದ ಅಬ್ದುಲ್, ಒಬ್ಬೊಬ್ಬರಿಗೆ ಒಂದೊಂದು ಕೋಡ್‌ವರ್ಡ್‌ ನೀಡಿದ್ದ. ಅದರ ಮೂಲಕವೇ ಅವರನ್ನು ಗುರುತಿಸುತ್ತಿದ್ದ. ಬೆಂಗಳೂರಿನಿಂದ ಸಾಗಿಸುತ್ತಿದ್ದ ರಕ್ತಚಂದನ ತುಂಡುಗಳ ಪಾರ್ಸಲ್, ಕೋಡ್‌ವರ್ಡ್‌ ಮೂಲಕವೇ ಆ ಏಜೆಂಟನಿಗೆ ತಲುಪುತ್ತಿತ್ತು’ ಎಂದು ಅಧಿಕಾರಿ ಹೇಳಿದರು.

‘ಎಲೆಕ್ಟ್ರಾನಿಕ್ ಉಪಕರಣಗಳನ್ನು ಪಾರ್ಸಲ್‌ ಕಳುಹಿಸುವ ಮಾದರಿಯಲ್ಲೇ ರಕ್ತಚಂದನವನ್ನೂ ಕಳುಹಿಸಲಾಗುತ್ತಿತ್ತು. ಒಂದು ಬಾಕ್ಸ್‌ನಲ್ಲಿ ಎರಡು ಅಥವಾ ಮೂರು ತುಂಡುಗಳನ್ನು ಇಟ್ಟು, ಅದರ ಸುತ್ತಲೂ ಥರ್ಮಾಕೋಲ್ ಇರಿಸಲಾಗುತ್ತಿತ್ತು. ಹೊರಗಡೆಯಿಂದ ಯಾರಾದರೂ ಮುಟ್ಟಿ ನೋಡಿದರೆ, ಅದು ಎಲೆಕ್ಟ್ರಾನಿಕ್ ಉಪಕರಣವೆಂದು ಸುಮ್ಮನಾಗುತ್ತಿದ್ದರು. ಬಸ್ ಚಾಲಕರಿಗೂ ಅದು ಗೊತ್ತಾಗುತ್ತಿರಲಿಲ್ಲ’ ಎಂದರು.

ಹವಾಲಾ ಮೂಲಕ ಹಣ ರವಾನೆ: ‘ಮಂಗಳೂರಿನ ಹಲವರು ಹೊರ ದೇಶಗಳಲ್ಲಿ ಕೆಲಸ ಮಾಡುತ್ತಿದ್ದು, ಅವರ ಜೊತೆ ಅಬ್ದುಲ್ ಒಡನಾಟವಿಟ್ಟುಕೊಂಡಿದ್ದ. ಅವರ ಸಹಾಯದಿಂದ ರಕ್ತಚಂದನವನ್ನು ಹೊರದೇಶಕ್ಕೆ ಕಳುಹಿಸಿ, ಹವಾಲಾ ಮೂಲಕ ಹಣ ಪಡೆದುಕೊಳ್ಳುತ್ತಿದ್ದ. ಆತನ ವಹಿವಾಟು ಬಗ್ಗೆಯೂ ಯಾರಿಗೂ ಅನುಮಾನ ಬರುತ್ತಿರಲಿಲ್ಲ’ ಎಂದು ಹೇಳಿದರು.

‘ಹವಾಲಾ ಮೂಲಕವೇ ಆರೋಪಿ ಇದುವರೆಗೂ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆ ಬಗ್ಗೆ ಮಾಹಿತಿ ಇದ್ದು, ಕೆಲವರನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ತಿಳಿಸಿದರು.

ದಾವೂದ್ ಇಬ್ರಾಹಿಂ ಜೊತೆ ಒಡನಾಟ ಶಂಕೆ

‘25ನೇ ವಯಸ್ಸಿನಲ್ಲೇ ದುಬೈಗೆ ಹೋಗಿದ್ದ ಅಬ್ದುಲ್ ರಷೀದ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಒಡನಾಟ ಇಟ್ಟುಕೊಂಡಿದ್ದ ಎಂಬ ಅನುಮಾನವಿದ್ದು, ಆ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಉದ್ಯೋಗ ಹುಡುಕಿಕೊಂಡು 1994ರಲ್ಲಿ ದುಬೈಗೆ ಹೋಗಿದ್ದ ಅಬ್ದುಲ್, 1998ರವರೆಗೂ ಅಲ್ಲೇ ಇದ್ದ. ಅದೇ ವೇಳೆ ದಾವೂದ್‌ ಇಬ್ರಾಹಿಂನ ಸಹಚರರ ಪರಿಚಯ ಆಗಿತ್ತು. ಅವರ ಮೂಲಕವೇ ಆತ ದಾವೂದ್‌ ಜೊತೆ ಮಾತನಾಡಿದ್ದ. ನಂತರ, ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT