ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರ ಮನವೊಲಿಕೆ: ಕಾಂಗ್ರೆಸ್‌ಗೆ ಸಂಭ್ರಮ

ಒಂದೆರಡು ದಿನಗಳಲ್ಲಿ ರಾಜಕೀಯ ಪ್ರಹಸನ ಅಂತ್ಯವಾಗುವ ನಿರೀಕ್ಷೆ
Last Updated 16 ಜನವರಿ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲವೆಂದು ‌ಮುನಿಸಿಕೊಂಡು ‘ಕೈ’ಗೆ ಸಿಗದೆ ಓಡಾಡುತ್ತಿದ್ದ ಪಕ್ಷದ ಬಹುತೇಕ ಶಾಸಕರ ಮನವೊಲಿಸುವಲ್ಲಿ ಕಾಂಗ್ರೆಸ್‌ ನಾಯಕರು ಯಶಸ್ವಿಯಾಗಿದ್ದು, ಸದ್ಯದ ರಾಜಕೀಯ ಪ್ರಹಸನ ಒಂದೆರೆಡು ದಿನಗಳಲ್ಲಿ ಅಂತ್ಯ ಕಾಣಲಿದೆ ಎನ್ನಲಾಗಿದೆ.

ಪಕ್ಷೇತರ ಶಾಸಕರಿಬ್ಬರು ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸು ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್ ಮುಖಂಡರು‌, ಅತೃಪ್ತರನ್ನು ಸಂತೃಪ್ತಿ ಪಡಿಸುವ ಕಸರತ್ತಿಗೆ ಕೈಹಾಕಿದ್ದರು.

ಹಗರಿಬೊಮ್ಮನಹಳ್ಳಿಯ ಭೀಮಾ ನಾಯ್ಕ್‌, ಕಂಪ್ಲಿಯ ಜೆ. ಎನ್‌. ಗಣೇಶ್, ಮಸ್ಕಿಯ ಪ್ರತಾಪ ಗೌಡ ಪಾಟೀಲ, ಅಮರೇಗೌಡ ಬಯ್ಯಾಪುರ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ಆಶ್ವಾಸನೆ ನೀಡಿದ್ದಾರೆ. ಪಕ್ಷದ ವಿರುದ್ಧ ಮುನಿಸಿಕೊಂಡು ರಹಸ್ಯ
ಸ್ಥಳಕ್ಕೆ ತೆರಳಿರುವ ಶಾಸಕರಿಗೆ ಸ್ಥಾನಮಾನ ನೀಡುವುದಾಗಿ ಕಾಂಗ್ರೆಸ್‌ ಆಮಿಷ ಒಡ್ಡಿದೆ.

ರಾಹುಲ್‌ ಸೂಚನೆ: ಕರ್ನಾಟಕದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕೆಂಬ ತೀರ್ಮಾನಕ್ಕೆ ಬಂದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‍ ಗಾಂಧಿ, ಅಗತ್ಯಬಿದ್ದರೆ ಸಂಪುಟದಲ್ಲಿರುವ ಐವರು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

‘ಕಾಂಗ್ರೆಸ್ ಬೆಂಬಲದಿಂದ ಮುಳಬಾಗಿಲು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ನಾಗೇಶ್ ಆಯ್ಕೆಯಾಗಿದ್ದಾರೆ. ಅವರ ಬೇಡಿಕೆಯನ್ನು ಪೂರೈಸಲು ಪಕ್ಷ ಸಿದ್ಧ. ಸಚಿವ ಸ್ಥಾನ ನೀಡಲು ಸಾಧ್ಯವಾಗದಿದ್ದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದು’ ಎಂದು ಸಂಸದ ಕೆ.ಎಚ್. ಮುನಿಯಪ್ಪ ಹೇಳಿದರು.

ನಾವೂ ಕುಸ್ತಿ ಆಡಿದವರು: 'ರಾಜಕೀಯ ಅಖಾಡದಲ್ಲಿ ನಾವೂ ಕುಸ್ತಿ ಆಡಿದವರು' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಕೆಲವು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕೂತಿಲ್ಲ. ಪಟ್ಟುಗಳು ನಮಗೂ ಗೊತ್ತು’ ಎಂದಿದ್ದಾರೆ.

ನಾನಂತೂ ಶಾಂತವಾಗಿ ಇದ್ದೇನೆ: ‘ಮೈತ್ರಿ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನಂತೂ ಶಾಂತವಾಗಿ ಇದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ನಿಮಗೆ (ಮಾಧ್ಯಮಗಳು) ಅತೃಪ್ತ ಶಾಸಕರು ಸಂಪರ್ಕಕ್ಕೆ ಸಿಗದೇ ಇರಬಹುದು. ನನ್ನ ಜೊತೆ ರಮೇಶ ಜಾರಕಿಹೊಳಿ, ನಾಗೇಂದ್ರ ಸೇರಿದಂತೆ ಎಲ್ಲರೂ ಸಂಪರ್ಕದಲ್ಲಿದ್ದಾರೆ. ಮೂರು ದಿನಗಳಿಂದ ಎಲ್ಲರ ಜೊತೆ ನಾನು ಮಾತಾನಾಡಿದ್ದೇನೆ. ಜೆಡಿಎಸ್‌ನಿಂದ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ’ ಎಂದರು.

‘ಶಾಸಕರು ಬಿಜೆಪಿಗೆ ಹೋಗುವುದಿಲ್ಲ’

ಬೆಂಗಳೂರು: ‘ನಾವು ಆಪರೇಷನ್‌ ಕಮಲದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜೆಡಿಎಸ್‌ನ ಯಾವುದೇ ಶಾಸಕರು ಬಿಜೆಪಿಗೆ ಹೋಗುವುದಿಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎ. ಎಚ್‌. ವಿಶ್ವನಾಥ್‌ ಹೇಳಿದರು.

ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರಕ್ಕೆ ಯಾವುದೇ ಆಪತ್ತು ಇಲ್ಲ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ‘ಆಪರೇಷನ್‌ ಕಮಲ’ದ ಬಗ್ಗೆ ನಮಗೆ ಮಾಹಿತಿ ಇಲ್ಲ. ಮಾಹಿತಿ ಇಲ್ಲದೆ ಮಾತನಾಡುವುದು ಸರಿಯಲ್ಲ. ಪಕ್ಷದ ಅಲ್ಪಸಂಖ್ಯಾತರ ಸಮಾವೇಶ ಗುರುವಾರ ಏರ್ಪಡಿಸಿದ್ದು, ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT