ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆದು ಹೋಗುವವರ ನೋವು ಕೇಳಿ ಸಾಮಿ...

ಜಗತ್ತಿನ ಹಲವು ನಗರಗಳು ಉಚಿತ ಸಾರಿಗೆ ಸೇವೆ ಒದಗಿಸುತ್ತಿವೆ; ನಮ್ಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಏಕೆ ಲಾಭಕ್ಕಾಗಿ ಹಪಹಪಿಸುತ್ತಿದೆ?
Last Updated 1 ಏಪ್ರಿಲ್ 2019, 5:52 IST
ಅಕ್ಷರ ಗಾತ್ರ

ನಗರದ ಪಶ್ಚಿಮ ಭಾಗದಲ್ಲಿರುವ ಬೋವಿಪಾಳ್ಯದ ನಿವಾಸಿ ಚಂದ್ರಮ್ಮ ನಿತ್ಯ ಕೆಲಸಕ್ಕೆ ಹೋಗುವುದು ಪೂರ್ವ ದಿಕ್ಕಿನಲ್ಲಿರುವ ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್‌ವೊಂದಕ್ಕೆ. ಹೆಚ್ಚು–ಕಡಿಮೆ 26 ಕಿ.ಮೀ. ದೂರದಲ್ಲಿರುವ ಕೆಲಸದ ಸ್ಥಳವನ್ನು ತಲುಪುವಷ್ಟರಲ್ಲಿ ಅವರು ಪ್ರತಿದಿನ ಎರಡು ಬಸ್‌ ಬದಲಾಯಿಸಬೇಕು. ಜತೆಗೆ 35 ರೂಪಾಯಿ ಪ್ರಯಾಣ ದರವನ್ನೂ ತೆರಬೇಕು. ಕೆಲಸ ಮುಗಿಸಿ ಮನೆಗೆ ವಾಪಸ್‌ ಬರುವಷ್ಟರಲ್ಲಿ 70 ರೂಪಾಯಿ ಬಸ್‌ಗಾಗಿಯೇ ಖರ್ಚಾಗಿಬಿಡುತ್ತದಲ್ಲ ಎನ್ನುವುದು ಅವರ ಬೇಗುದಿ.

ಸಾಧ್ಯವಾದಷ್ಟು ಹಣ ಉಳಿಸಲು ಅವರು ಕಂಡುಕೊಂಡ ದಾರಿ ಎಂಥದ್ದು ಗೊತ್ತೆ? ಕಡಿಮೆ ಪ್ರಯಾಣ ದರದ ‘ಸ್ಟೇಜ್‌’ನ ನಿಲುಗಡೆ ತಾಣದವರೆಗೆ ನಡೆಯುತ್ತಾ ಹೋಗುವ ಅವರು, ಅಲ್ಲಿಂದ ಬಸ್‌ ಏರುತ್ತಾರೆ. ನಿತ್ಯ ಬಸ್‌ ಪ್ರಯಾಣದ ಖರ್ಚಿನಲ್ಲಿ 30 ರೂಪಾಯಿ ಉಳಿಸುವ ಸಲುವಾಗಿ ಚಂದ್ರಮ್ಮ ಬರೋಬ್ಬರಿ ಎಂಟು ಕಿ.ಮೀ. ದೂರವನ್ನು ನಡಿಗೆಯಲ್ಲೇ ಕ್ರಮಿಸುತ್ತಾರೆ.

ಇನ್ನು ನಾಯಂಡಹಳ್ಳಿ ಕಡೆಗೆ ಬನ್ನಿ. ಇಲ್ಲಿನ ವಿನಾಯಕನಗರ ನಿವಾಸಿಗಳಾದ ಧನಲಕ್ಷ್ಮಿ, ಶೋಭಾ, ರಾಧಾ ಅವರೆಲ್ಲ ಗಾರ್ಮೆಂಟ್‌ ಫ್ಯಾಕ್ಟರಿ ಕಾರ್ಮಿಕರು. ಸಿಗುವ ಎಂಟು ಸಾವಿರ ರೂಪಾಯಿ ಸಂಬಳದಲ್ಲಿ ಬಸ್‌ಗಾಗಿಯೇ ಪ್ರತೀ ತಿಂಗಳು 600 ರೂಪಾಯಿ ವ್ಯಯಿಸುವ ಜರೂರತ್ತು ಏನಿದೆ ಎಂಬ ಪ್ರಶ್ನೆ ಅವರನ್ನು ಕಾಡಿದ್ದರಿಂದ ಮೂರೂವರೆ ಕಿ.ಮೀ. ದೂರದ ಫ್ಯಾಕ್ಟರಿಗೆ ಅವರೆಲ್ಲ ನಡೆದುಕೊಂಡೇ ಹೋಗುತ್ತಾರೆ. ಇದೇ ಪರಿಪಾಟವನ್ನು ಇಲ್ಲಿನ ಬಹುತೇಕ ಗಾರ್ಮೆಂಟ್‌ ಫ್ಯಾಕ್ಟರಿ ಕಾರ್ಮಿಕರೂ ಅನುಸರಿಸುತ್ತಾರೆ. ಸಂಜೆಯವರೆಗೆ ಕೆಲಸ ಮಾಡಿ ಸುಸ್ತು ಹೊಡೆಯುವ ಅವರು, ಮತ್ತೆ ಮೂರೂವರೆ ಕಿ.ಮೀ. ದೂರ ಕಾಲು ಎಳೆದುಹಾಕುತ್ತಾ ರಾತ್ರಿ 8 ಗಂಟೆ ಹೊತ್ತಿಗೆ ಮನೆ ತಲುಪಿದಾಗ ಮಕ್ಕಳು ಹಸಿವಿನಿಂದ ಕಣ್ಣು ಬಿಡುತ್ತಿರುತ್ತವೆ.

‘ಹಾಗಾದರೆ ಫ್ಯಾಕ್ಟರಿಗೆ ಹೋಗಿ–ಬರಲು ಎಂದಿಗೂ ಬಸ್‌ ಏರುವುದಿಲ್ಲವೇ’ ಎಂಬ ಪ್ರಶ್ನೆಯನ್ನು ಧನಲಕ್ಷ್ಮಿ ಅವರ ಮುಂದಿಟ್ಟರೆ, ‘ಆಕಸ್ಮಾತ್ ಓ.ಟಿ ಸಿಕ್ಕರೆ ಮನೆಗೆ ಬರೋದು ಮತ್ತೂ ತಡ ಆಗುತ್ತೆ. ಆಗಷ್ಟೇ ಬಸ್‌ನಲ್ಲಿ ಬರ್ತೀವಿ. ಸದ್ಯ ಮಕ್ಕಳು ಹಸಿದಿವೆ ಸೋಮಿ, ಮಾತನಾಡೋಕೆ ಟೈಮಿಲ್ಲ’ ಎಂದು ಉತ್ತರಿಸುತ್ತಾ, ಅವರು ಅಡುಗೆ ಕೋಣೆ ಸೇರುತ್ತಾರೆ.

ಗೊರಗುಂಟೆಪಾಳ್ಯ ಹತ್ತಿರದ ವರ್ತುಲ ರಸ್ತೆಯ ಸಿಗ್ನಲ್‌ನಲ್ಲಿ ಎಂದಾದರೂ ಬೆಳಿಗ್ಗೆ ಇಲ್ಲವೆ ಸಂಜೆ ನೀವು ಒಂದೆರಡು ಗಂಟೆ ನಿಂತು ನೋಡಬೇಕು. ಬಸ್‌ ಚಾರ್ಜ್‌ಗಿಂತ ಅರ್ಧ ದರದಲ್ಲಿಯೇ ಫ್ಯಾಕ್ಟರಿಗಳಿಗೆ ಕರೆದೊಯ್ಯುವ ಗೂಡ್ಸ್‌ ಟೆಂಪೊಗಳು ಕಾರ್ಮಿಕರನ್ನು ಕುರಿಗಳಿಗಿಂತ ಕಡೆಯಾಗಿ ತುಂಬಿಕೊಂಡು ಸಾಗುತ್ತವೆ.

ಸುಲ್ತಾನಪಾಳ್ಯದ ಜಯಣ್ಣ, ಸದಾಶಿವನಗರದ ಐಷಾರಾಮಿ ಬಂಗಲೆ ಯೊಂದರ ಸೆಕ್ಯೂರಿಟಿ ಗಾರ್ಡ್‌. ಏಳೂ ವರೆ ಕಿ.ಮೀ. ದೂರದ ಪ್ರಯಾಣಕ್ಕಾಗಿ ಅವರಿಗೆ ನಿತ್ಯ ಸಾಥ್‌ ಕೊಡುವುದು ಸೈಕಲ್‌. ‘ಬಸ್‌ಗೆ ಯಾರು ಅಷ್ಟೊಂದು ಕಾಸು ಕೊಡ್ತಾರೆ ಹೋಗಿ’ ಎನ್ನು ವುದು ಅವರ ನೇರ ತಕರಾರು.

*****

ಬೆಂಗಳೂರಿನ ಸಂಚಾರ ಸೌಕರ್ಯ ಎಷ್ಟೊಂದು ದುಬಾರಿ ಎಂದರೆ ಲಕ್ಷಾಂತರ ಮಂದಿ ಬಸ್‌ ಪ್ರಯಾ ಣದ ದರವನ್ನು ಭರಿಸಲಾಗದೆ ನೆತ್ತಿ ಸುಡುವ ಬಿಸಿಲಿ ನಲ್ಲೂ, ತೊಯ್ದು ತೊಪ್ಪೆಯಾ ಗಿಸುವ ಮಳೆಯಲ್ಲೂ ನಡೆದುಕೊಂಡೇ ಗಮ್ಯಸ್ಥಾನ ತಲುಪುತ್ತಾರೆ. ಹೌದು, ಇವರು ಯಾರ ಕಣ್ಣಿಗೂ ಬೀಳದಂತಹ ‘ಅದೃಶ್ಯ ಯಾತ್ರಿ’ಗಳು. ‘ಸಿಲಿಕಾನ್‌ ಸಿಟಿ’ ಎಂಬ ಹಣೆಪಟ್ಟಿ ಹಚ್ಚಿಕೊಂಡು ಎಲ್ಲರನ್ನೂ ಬ್ಯುಸಿ ಯಾಗಿ ಇಟ್ಟಿರುವ ಬೆಂಗ ಳೂರಿನಲ್ಲಿ ಮನೆ ಹಾಗೂ ಕೆಲಸದ ಸ್ಥಳ ಬಿಟ್ಟರೆ ಜನ ಬಹುಪಾಲು ಸಮಯವನ್ನು ಕಳೆಯುವುದು ದಟ್ಟಣೆಯಿಂದ ಕೂಡಿರುವ ರಸ್ತೆಗಳಲ್ಲಿಯೇ. ನಗರದ ರಸ್ತೆಗಳಲ್ಲಿ ಪ್ರತೀವರ್ಷ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಮಾನವಸಮಯ ವ್ಯರ್ಥವಾಗುತ್ತಿದೆ ಎಂದು ಆರ್ಥಿಕತಜ್ಞರು ಕೂಡ ಲೆಕ್ಕ ಕೊಡುತ್ತಾರೆ.

ನಗರದಲ್ಲಿ ಸಮೂಹ ಸಾರಿಗೆಯ ಮುಖ್ಯ ವಾರಸುದಾರ ಎನಿಸಿರುವ ಬಿಎಂಟಿಸಿ ಮೂಲಕ ನಿತ್ಯ 58 ಲಕ್ಷ ಮಂದಿ ಪ್ರಯಾಣ ಮಾಡುತ್ತಾರೆ. 1.20 ಕೋಟಿ ಜನಸಂಖ್ಯೆಯುಳ್ಳ ಈ ನಗರದಲ್ಲಿ ಇನ್ನೂ ಲಕ್ಷ, ಲಕ್ಷ ಜನಕ್ಕೆ ಬಸ್‌ನಲ್ಲಿಯೇ ಪ್ರಯಾಣ ಮಾಡುವಾಸೆ. ಅದರಲ್ಲಿ ಕಾರ್ಮಿಕರೂ ಇದ್ದಾರೆ, ಟೆಕಿಗಳೂ ಇದ್ದಾರೆ. ಆದರೆ, ‘ಟೈಮಿಗೆ ಸರಿಯಾಗಿ ಬರುವುದಿಲ್ಲ, ಕಿಕ್ಕಿರಿದ ಬಸ್‌ನಲ್ಲಿ ಬೆವರಿನ ವಾಸನೆ ಕುಡಿಯುವುದು ತಪ್ಪಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಸುರಕ್ಷಿತವಲ್ಲ’ ಎಂಬ ಅಭಿಪ್ರಾಯವೇ ಅವರಲ್ಲಿ ಬೇರೂರಿದ್ದರಿಂದ ನಡಿಗೆ, ಸೈಕಲ್‌, ಬೈಕ್‌ ಸವಾರಿ ಅಥವಾ ಕಾರು ಯಾನದಂತಹ ಪರ್ಯಾಯ ಆಯ್ಕೆಗಳತ್ತ ಅವರು ಮುಖ ಮಾಡುವಂತಾಗಿದೆ.

ವಿಚಿತ್ರ ನೋಡಿ, ನಗರದ ಸಂಚಾರ ದಟ್ಟಣೆಗೆ ಬಸ್‌ ಪ್ರಯಾಣಿಕರ ಕೊಡುಗೆ ನಗಣ್ಯ. ಆದರೆ, ದಟ್ಟಣೆಯ ಹೆಚ್ಚಿನ ಬಿಸಿಯನ್ನು ಅನುಭವಿಸುತ್ತಿರುವುದು ಮಾತ್ರ ಅದೇ ಪ್ರಯಾಣಿಕರು. ಸರ್ಕಾರದ ನೀತಿ–ನಿಲುವುಗಳು ಖಾಸಗಿ ವಾಹನಗಳ ಬಳಕೆಗೆ ಉತ್ತೇಜನ ನೀಡುವಂತೆ ಇರುವುದೇ ಇದಕ್ಕೆ ಕಾರಣ. ನಗರದಲ್ಲಿ ದಟ್ಟಣೆ ಹೆಚ್ಚಾದಂತೆಲ್ಲ ‘ಫ್ಲೈಓವರ್‌ ಪರಿಹಾರ’ದ ಹುಡುಕಾಟಕ್ಕೆ ತೊಡಗುವ ಸರ್ಕಾರ, ಸಮೂಹ ಸಾರಿಗೆಯತ್ತ ಹೊರಳಿಯೂ ನೋಡುತ್ತಿಲ್ಲ. ಇಂತಹ ನೀತಿಯಿಂದ ಏನಾಗಿದೆ ಗೊತ್ತೆ? ಕಳೆದ ಐದೇ ವರ್ಷಗಳಲ್ಲಿ ನಗರದಲ್ಲಿ 20 ಲಕ್ಷ ವಾಹನ ಗಳು ಹೊಸದಾಗಿ ಸೇರ್ಪಡೆ ಆಗಿವೆ.

ಸಾರ್ವಜನಿಕರಿಗೆ ಸಾರಿಗೆ ಸೇವೆ ಯನ್ನು ಒದಗಿಸಬೇಕಾದ ಬಿಎಂಟಿಸಿಗೆ ಲಾಭದ ಹುಚ್ಚು ಹಿಡಿದಿದ್ದೇಕೋ? ಬಸ್‌ ಪ್ರಯಾಣವನ್ನು ಉತ್ತೇಜಿ ಸುವಂತೆ ಮತ್ತು ಬಡವರ ಆದಾಯದ ಅನುಪಾತಕ್ಕೆ ತಕ್ಕಂತೆ ನಿಗದಿಯಾಗಬೇಕಿದ್ದ ಬಸ್‌ ದರಗಳು, ವೆಚ್ಚದ ಆಧಾರದ ಮೇಲೆ ನಿರ್ಧಾರವಾಗುತ್ತಿವೆ. ಬಸ್‌ ಯಾನಕ್ಕಿಂತ ದ್ವಿಚಕ್ರವಾಹನದ ಪ್ರಯಾಣವೇ ಅಗ್ಗ ಎನ್ನುವುದು ಜನರಿಗೆ ಎಷ್ಟೊಂದು ಮನವರಿಕೆಯಾಗಿದೆ ಎಂದರೆ ಅವುಗಳ ಸಂಖ್ಯೆ 55.50 ಲಕ್ಷ ದಾಟಿದೆ.

ಗೊತ್ತೆ? ಜಗತ್ತಿನ ಹಲವು ನಗರಗಳಲ್ಲಿ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆಸ್ಟ್ರೇಲಿಯಾದ ಅಡಿಲೇಡ್‌, ಪರ್ತ್‌, ಚೀನಾದ ಚೆಂಗ್‌ಡು, ಗ್ರೀಸ್‌ನ ಅಥೆನ್ಸ್‌, ಥಾಯ್ಲೆಂಡ್‌ನ ಬ್ಯಾಂಕಾಕ್‌, ಅಮೆರಿಕದ ಬಾಲ್ಟಿಮೋರ್‌ ಹಾಗೂ ಬಾಸ್ಟನ್‌ ಉಚಿತ ಸಾರಿಗೆ ಸೇವೆ ನೀಡುತ್ತಿರುವ ನಗರಗಳಿಗೆ ಕೆಲವು ಉದಾಹರಣೆಗಳು. ಪ್ರಯಾಣವು ನಗರದ ಪರಿಸರಕ್ಕೆ ದುಬಾರಿ ಆಗಬಾರದು ಎಂಬ ಉದ್ದೇಶದಿಂದ ಅಲ್ಲಿನ ಸ್ಥಳೀಯಾಡಳಿತಗಳು ಉಚಿತ ಸೇವೆ ಒದಗಿಸುತ್ತಿವೆ. ಬಸ್‌ ಪ್ರಯಾಣಿಕರು ಸ್ವಂತ ವಾಹನಗಳ ಮೂಲಕ ರಸ್ತೆಗಿಳಿದರೆ ಆಗುವ ಮಾಲಿನ್ಯದ ಪ್ರಮಾಣ ಬಲು ದೊಡ್ಡದು ಎನ್ನುವ ಸಂಗತಿ ಅಲ್ಲಿನ ಸ್ಥಳೀಯಾಡಳಿತಗಳ ಕಣ್ಣು ತೆರೆಸಿದೆ.

‘ಉಚಿತ ಸೇವೆ ಒದಗಿಸುವ ಕುರಿತು ನಿಧಾನವಾಗಿ ಚಿಂತಿಸಿ, ಸದ್ಯ ಪ್ರತೀ ಕಿ.ಮೀ. ದೂರದ ಪ್ರಯಾಣಕ್ಕೆ 50 ಪೈಸೆಯಂತೆ ದರ ನಿಗದಿ ಮಾಡಿ. ನಗರ ವ್ಯಾಪ್ತಿಯಲ್ಲಿ 20 ಕಿ.ಮೀ.ಗಿಂತ ಹೆಚ್ಚು ಎಷ್ಟೇ ದೂರವಿದ್ದರೂ ₹ 15 ದರ ನಿಗದಿಮಾಡಿ’ ಎನ್ನುವುದು ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆಯ ಪ್ರಮುಖ ಬೇಡಿಕೆ. ದಿನದ ಪಾಸ್‌ಗೆ ₹ 25 ಮತ್ತು ತಿಂಗಳ ಪಾಸ್‌ಗೆ ₹ 350ಕ್ಕಿಂತ ಹೆಚ್ಚಿನ ಶುಲ್ಕ (ಈಗ ₹ 1050 ಇದೆ) ಇರಬಾರದು ಎಂದೂ ಈ ವೇದಿಕೆ ಆಗ್ರಹಿಸುತ್ತಲೇ ಬಂದಿದೆ. ಲಾಭ–ನಷ್ಟದ ಲೆಕ್ಕಾಚಾರ ಹಾಕುವ ಆಡಳಿತ ವ್ಯವಸ್ಥೆಗೆ ಪರಿಸರ ಮಾಲಿನ್ಯದ ಚಿಂತೆಯಿಲ್ಲ, ದರ ಹೆಚ್ಚಾಯಿತು ಎನ್ನುವ ಬಡವರ ನೋವಿನ ಕೂಗೂ ಕೇಳುತ್ತಿಲ್ಲ.

ಹೀಗಿರಲಿ ಸಮೂಹಸಾರಿಗೆ ಸೌಲಭ್ಯ

ನಗರದಲ್ಲಿ ಸಮೂಹ ಸಾರಿಗೆಗೆ ಬಿಎಂಟಿಸಿ ಜತೆಗೆ ಈಗ ಮೆಟ್ರೊ ಸಹ ಇದೆ. ಉಪನಗರ ರೈಲು ಸಾರಿಗೆ ಬೇಕು ಎನ್ನುವುದು ಜನರ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಮೂರೂ ಸೌಲಭ್ಯಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸಿಕೊಳ್ಳಬೇಕು. ಕೊನೆಯ ತಾಣದವರೆಗೆ (last mile, ಗಮ್ಯಸ್ಥಾನ) ಸಾರಿಗೆ ಸೌಲಭ್ಯದ ವ್ಯವಸ್ಥೆ ಮಾಡಬೇಕು. ಮೂರೂ ವಿಧಗಳ ಸಾರಿಗೆಗಳ ಪ್ರಯಾಣಕ್ಕೆ ಒಂದೇ ಟಿಕೆಟ್‌ ಪಡೆಯುವ ವ್ಯವಸ್ಥೆ ಮಾಡಬೇಕು. ಸುರಕ್ಷಿತವಾದ, ಸಕಾಲದಲ್ಲಿ ತಲುಪುವ, ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಬೇಕು. ಆಗ ಜನ, ಸ್ವಂತ ವಾಹನಗಳ ಬಳಕೆಗೆ ಮನಸ್ಸು ಮಾಡುವುದಿಲ್ಲ. ರಸ್ತೆಗಳ ಮೇಲಿನ ಬಹುಪಾಲು ವಾಹನಗಳ ಹೊರೆ ಕಡಿಮೆ ಆಗುತ್ತದೆ ಎನ್ನುವುದು ಸಾರಿಗೆತಜ್ಞರ ಅಭಿಮತ.

ಬಿಎಂಟಿಸಿ ಬಸ್‌ಗಳು ದಟ್ಟಣೆಯಲ್ಲಿ ಸಿಲುಕದೆ ಮುಕ್ತವಾಗಿ ಸಂಚರಿಸಲು ರಸ್ತೆಯಲ್ಲಿ ಅವುಗಳಿಗಾಗಿ ಪ್ರತ್ಯೇಕ ಮಾರ್ಗವನ್ನು ಮೀಸಲಿಡಬೇಕು. ಅದಕ್ಕಾಗಿ ಹುಬ್ಬಳ್ಳಿ–ಧಾರವಾಡದಲ್ಲಿ ರೂಪಿಸಿರುವಂತೆ ಬಸ್‌ ಕ್ಷಿಪ್ರ ಸಾರಿಗೆ ಸೌಲಭ್ಯ (ಬಿಆರ್‌ಟಿಎಸ್‌) ಕಲ್ಪಿಸಬೇಕು. ಆಗ ಪಕ್ಕದ ಮಾರ್ಗದಲ್ಲಿ ಕಾರಿನೊಳಗೆ ಕುಳಿತು ದಟ್ಟಣೆಯಲ್ಲಿ ಸಿಲುಕಿಕೊಂಡವರು ಸಹ ಬಸ್‌ ಏರಲು ಬರುತ್ತಾರೆ ಎಂದು ಅವರು ಹೇಳುತ್ತಾರೆ.

***

* ಬಿಎಂಟಿಸಿಯ ಎಲ್ಲ ಬಸ್ಸುಗಳ ಪ್ರತಿದಿನ ಸಂಚರಿಸುವ ದೂರವನ್ನು ಲೆಕ್ಕ ಹಾಕಿದರೆ ಅದು ಬರೋಬ್ಬರಿ 11.5 ಲಕ್ಷ ಕಿ.ಮೀ. ಆಗುತ್ತದೆ. ಅಂದರೆ ಭೂಮಿಯಿಂದ ಚಂದ್ರನಿಗಿರುವ ಅಂತರದ ಮೂರು ಪಟ್ಟುಗಳಷ್ಟು ದೂರ!

* ನಗರದಲ್ಲಿ ಒಟ್ಟಾರೆ 8000 ಬಸ್‌ ನಿಲುಗಡೆ ತಾಣಗಳಿವೆ. ಆದರೆ, ಅವುಗಳಲ್ಲಿ 3000 ಮಾತ್ರ ತಂಗುದಾಣ ಹೊಂದಿವೆ.

* ಬಸ್‌ನಲ್ಲಿ ಶುಚಿತ್ವದ ಕೊರತೆ, ರಸ್ತೆ ನಡುವೆ ಬಸ್ ನಿಲ್ಲಿಸುವುದು ಇಂತಹ ಸಮಸ್ಯೆ ತಪ್ಪಿಸಲು ಅಧಿಕಾರಿಗಳು ಆಗಾಗ ಬಸ್‌ನಲ್ಲಿ ಪ್ರಯಾಣಿಸಬೇಕು ಎನ್ನುವುದು ನಾಗರಿಕರ ಆಗ್ರಹ

***

ಕಾರ್ಮಿಕರ ಅಭಿಪ್ರಾಯ

ಬಹು ದೂರದ ಸ್ಥಳಗಳಿಗೆ ಹೋಗಲು ದಿನದ ಪಾಸ್‌ ₹70 ಕೊಟ್ಟು ಪಡೆಯು ತ್ತೇನೆ. ಇನ್ನೂ ಕೆಲವು ಸಲ ಟಿಕೆಟ್‌ ದರ ತೆತ್ತು ತೆರಳುತ್ತೇನೆ. ದಿನ ಒಂದಕ್ಕೆ ₹450 ರಿಂದ ₹500 ಸಂಬಳ ಕೈಗೆ ಸಿಗುತ್ತದೆ. ಇದರಲ್ಲಿ ಸರಿಸುಮಾರು ₹100 ರಿಂದ ₹150 ಪ್ರಯಾಣಕ್ಕೆ ಖರ್ಚಾಗುತ್ತದೆ.ಕಾಲು ಭಾಗ ಸಂಬಳ ಬಸ್ಸಿಗಾಗಿಯೇ ಇಡಬೇಕು. ಸಮಯಕ್ಕೆ ಸರಿಯಾಗಿ ಬಾರದ ಬಸ್‌ಗಳಿಂದಾಗಿ ಮಾಲೀಕರಿಂದ ಬೈಗುಳ ತಿಂದು, ಕೆಲಸವಿಲ್ಲದೆ ಉಪವಾಸವಿದ್ದದ್ದೂ ಇದೆ.

ಮಲ್ಲಪ್ಪ,ಬಿ ಬ್ಲಾಕ್‌, ಲಿಂಗರಾಜಪುರ

ಪೀಣ್ಯ ಇಂಡಸ್ಟ್ರಿ ಭಾಗಗಳಲ್ಲಿ ಕೆಲವೊಮ್ಮೆ ಒಂದರ ಹಿಂದೆ ಒಂದರಂತೆ ರೇಸ್‌ಗೆ ಬಿದ್ದಂತೆ ಬಸ್‌ಗಳು ಬರುತ್ತವೆ. ಆದರೆ, ಇನ್ನೂ ಕೆಲವು ಬಾರಿ ಅರ್ಧಗಂಟೆ ಕಾಯ್ದರೂ ಒಂದು ಬಸ್ಸೂ ಬರಲ್ಲ. ಮೂರು ನಾಲ್ಕು ಬಸ್‌ಗಳನ್ನು ಬದಲಾಯಿಸಿ,ಹೋಗುವಷ್ಟರಲ್ಲಿ ಹಾಜರಾತಿಯ ಸಮಯವೂ ಮೀರಿರುತ್ತದೆ. ಪಾಸ್‌ ಪಡೆದರೂ ಕೆಲವೊಮ್ಮೆ ಪ್ರಯೋಜನವಾಗಲ್ಲ. ಎಲ್ಲ ವಲಯದ ಕಾರ್ಮಿಕರ ಹಿತದೃಷ್ಠಿಯಿಂದ ₹600ಕ್ಕೆ ಪಾಸ್‌ ದೊರೆಯುವಂತಾಗಬೇಕು.

ಯಶೋದಾ,ಮುನ್ನಡೆ ಸಾಮಾಜಿಕ ಸಂಸ್ಥೆ

ಬನಶಂಕರಿಯಿಂದ ಪೀಣ್ಯದಲ್ಲಿರುವ ಗಾರ್ಮೆಂಟ್‌ ಫ್ಯಾಕ್ಟರಿಗೆ ತೆರಳಲು ನಿತ್ಯ ಮೂರ್ನಾಲ್ಕು ಬಸ್‌ ಬದಲಾಯಿಸಲೇಬೇಕು. ಸದಾ ಜನ ದಟ್ಟಣೆಯಿಂದ ತುಂಬಿರುವ ಬಸ್‌ಗಳಿಗಾಗಿ ಗಂಟೆಗಟ್ಟಲೆ ಕಾಯಬೇಕು. ಸಂಜೆ ಹೊತ್ತಲ್ಲಿ ಬಸ್‌ಗಾಗಿ ಪರಿತಪಿಸುತ್ತೇವೆ. ವಾರದಲ್ಲಿ ಮೂರು ನಾಲ್ಕು ದಿನ ಹೆಚ್ಚುವರಿ ಅವಧಿ (ಓ.ಟಿ)ಗಾಗಿ ಗಾರ್ಮೆಂಟ್‌ಗೆ ತೆರಳುವಾಗ ಬಸ್‌ಗಳೇ ಸಿಗುವುದಿಲ್ಲ. ಬಸ್‌ನಲ್ಲಿ ಕೆಲವು ಬಾರಿ ಪುರುಷರೂ ತೀರ ಕೀಳುಮಟ್ಟದಲ್ಲಿ ನಡೆದುಕೊಳ್ಳುತ್ತಾರೆ.

ಗೀತಾ,ಬ್ಯಾಟರಾಯನಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT