ಹುಬ್ಬಳ್ಳಿಯಲ್ಲಿ ಆಸ್ತಿ ಖರೀದಿ ಇನ್ನಷ್ಟು ತುಟ್ಟಿ

7
ವಾಣಿಜ್ಯ ನಗರದಲ್ಲಿ ಪರಿಷ್ಕೃತ ಸ್ಥಿರಾಸ್ತಿ ಮಾರ್ಗಸೂಚಿ ದರ ಜಾರಿಗೆ

ಹುಬ್ಬಳ್ಳಿಯಲ್ಲಿ ಆಸ್ತಿ ಖರೀದಿ ಇನ್ನಷ್ಟು ತುಟ್ಟಿ

Published:
Updated:

ಹುಬ್ಬಳ್ಳಿ: ಪರಿಷ್ಕೃತ ಸ್ಥಿರಾಸ್ತಿ ಮಾರ್ಗಸೂಚಿ ದರ ಜಾರಿಗೆ ಬಂದಿರುವುದರಿಂದ ಹುಬ್ಬಳ್ಳಿಯಲ್ಲಿ ಆಸ್ತಿ ಖರೀದಿ ಇನ್ನಷ್ಟು ತುಟ್ಟಿಯಾಗಲಿದೆ. ನಗರದಲ್ಲಿರುವ ಉತ್ತರ ಮತ್ತು ದಕ್ಷಿಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜನವರಿ 1ರಿಂದಲೇ ಹೊಸ ದರದ ಅನ್ವಯವೇ ನೋಂದಣಿ ಮಾಡಲಾಗುತ್ತಿದೆ.

ನಿರ್ದಿಷ್ಟ ಬಡಾವಣೆಗಳಲ್ಲಿ ನಿವೇಶನಗಳ ಖರೀದಿಯ ಸರಾಸರಿ ಮೊತ್ತವನ್ನು ಲೆಕ್ಕ ಹಾಕಿ, ಮಾರ್ಗಸೂಚಿ ದರದ ಹೆಚ್ಚಳದ ಪ್ರಮಾಣವನ್ನು ನಿರ್ಧರಿಸಲಾಗಿದೆ. ಕೆಲವು ಬಡಾವಣೆಗಳಲ್ಲಿ ಶೇ12ರಷ್ಟು ಹೆಚ್ಚಳವಾದರೆ, ಇನ್ನೂ ಕೆಲವು ಕಡೆ ಗರಿಷ್ಠ ಶೇ30ರಷ್ಟು ಹೆಚ್ಚಿಸಲಾಗಿದೆ. ಜಮೀನಿನ ಬೆಲೆ ಸಹ ಶೇ30ರಷ್ಟು ಹೆಚ್ಚಳವಾಗಿದ್ದು, ಕೆಲವೊಂದು ಕಡೆ ಶೇ170ರಷ್ಟು ಭಾರಿ ಏರಿಕೆ ಮಾಡಲಾಗಿದೆ. ಭೂ ಸ್ವಾಧೀನ ದರ ಹಾಗೂ ವಾಸ್ತವ ದರದಲ್ಲಿ ಹೆಚ್ಚಿನ ಅಂತರ ಇರುವುದರಿಂದ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ.

‘ದರ ಪರಿಷ್ಕರಣೆ ನಿರ್ಧರಿಸಲು ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಒಂದೊಂದು ಬಡಾವಣೆಗೆ ಒಂದೊಂದು ರೀತಿಯ ಪರಿಷ್ಕೃತ ದರ ನಿಗದಿ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕಕ್ಕಿರುವ, ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ, ಒಳ ಮುಖ್ಯ ರಸ್ತೆಗಳು ಹೀಗೆ ಹಲವು ರೀತಿ ವರ್ಗೀಕರಣ– ಮಾನದಂಡ ಅನುಸರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ದರ ಹೆಚ್ಚಳವಾಗಿರುವುದರಿಂದ ನೋಂದಣಿ ಮೇಲೆ ಒಂದು ತಿಂಗಳು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಆ ನಂತರ ಸಹಜ ಸ್ಥಿತಿಗೆ ಬರಲಿದೆ. ಮುದ್ರಾಂಕ ಶುಲ್ಕ ಸಂಗ್ರಹಣೆಯ ಮೇಲೆ ಇದು ಹೆಚ್ಚಿನ ಪರಿಣಾಮ ಬೀರದ ಕಾರಣ ಆದಾಯ ಗುರಿ (ಟಾರ್ಗೆಟ್‌) ಸಾಧನೆಯಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಲೆಕ್ಕಾಚಾರ ಹೇಗೆ, ಎಷ್ಟು ಹೆಚ್ಚಾಗಲಿದೆ
ನೋಂದಣಿ ಸಂದರ್ಭದಲ್ಲಿ ಆಸ್ತಿಯನ್ನು ಚ.ಮೀಗಳಲ್ಲಿ ಲೆಕ್ಕಹಾಕಲಾಗುತ್ತದೆ. 108 ಚ.ಮೀ 30x40 ನಿವೇಶನಕ್ಕೆ ಸಮ. ಸಾಮಾನ್ಯವಾಗಿ ಏಕ ಶಯನ ಗೃಹದ (ಸಿಂಗಲ್ ಬಿಎಚ್‌ಕೆ) ಅಪಾರ್ಟ್‌ಮೆಂಟ್ 69 ಚ.ಮೀ ಇರುತ್ತದೆ. ಎರಡು ಮಲಗುವ ಕೋಣೆಯ ಅಪಾರ್ಟ್‌ಮೆಂಟ್‌ 98 ಚ.ಮೀ ಇರುತ್ತದೆ.

ಮಾರ್ಗಸೂಚಿ ದರದ ಒಟ್ಟು ಮೊತ್ತಕ್ಕೆ ಶೇ5.6 ಮುದ್ರಾಂಕ ಹಾಗೂ ಶೇ1ರಷ್ಟು ನೋಂದಣಿ ಶುಲ್ಕ ಸೇರಿ ಒಟ್ಟು ಶೇ6.6ರಷ್ಟನ್ನು ಪಾವತಿಸಬೇಕಾಗುತ್ತದೆ. ಹೊಸ ಲೇಔಟ್‌ಗಳ ನೆಚ್ಚಿನ ತಾಣವಾಗಿರುವ ಕುಸುಗಲ್‌ನಲ್ಲಿ ಈ ಹಿಂದೆ 30x40 ನಿವೇಶನದ ಮಾರ್ಗಸೂಚಿ ದರ ₹3.78 ಲಕ್ಷ ಇತ್ತು, ಅಂದರೆ ₹24,948ಮುದ್ರಾಂಕ ಮತ್ತು ನೋಂದಣಿ ಶುಲ್ಕ ಪಾವತಿಸಬೇಕಾಗಿತ್ತು. ಆದರೆ ಈಗ ಮಾರ್ಗಸೂಚಿ ದರ ಹೆಚ್ಚಾದ ನಂತರ ನಿವೇಶದನ ಬೆಲೆ ₹5.40 ಲಕ್ಷವಾಗಿರುವುದರಿಂದ ₹35,640 ಪಾವತಿಸಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !