ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಮಾಡಿ ಬಂದ್‌, ಶಿರಾಡಿಯಲ್ಲೂ ಸಂಕಷ್ಟ

ಮಳೆಯ ಆರ್ಭಟ: ಮಹಿಳೆ ಸಾವು, ಯುವಕ ನಾಪತ್ತೆ
Last Updated 8 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಮಂಗಳೂರು/ ಚಿಕ್ಕಮಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕೊಟ್ಟಿಗೆಯ ಗೋಡೆ ಕುಸಿದು ಉಡುಪಿ ಜಿಲ್ಲೆಯ ಬೆನಗಲ್‌ನಲ್ಲಿ ಗಂಗಾ (46) ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಹೇಮಾವತಿ ನದಿಯಲ್ಲಿ ಶ್ರೀವತ್ಸ ಎಂಬ ಯುವಕ ಕೊಚ್ಚಿ ಹೋಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಮಾರಧಾರಾ ಮತ್ತು ನೇತ್ರಾವತಿ ನದಿ ಉಕ್ಕಿ ಹರಿಯುತ್ತಿವೆ. ಸುಳ್ಯ ತಾಲ್ಲೂಕಿನಾದ್ಯಾಂತ ಭಾರೀ ಮಳೆ ಸುರಿಯುತ್ತಿದ್ದು, ಕಂದಲಡ್ಕ, ಮಿತ್ತೂರು, ಪಂಜ, ಅರಂಬೂರು, ಪೆರೋಡಿ ಜಲಾವೃತಗೊಂಡಿವೆ. ಸುಳ್ಯ ಕಲ್ಮಕಾರಿನಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದ್ದು, 8 ಕುಟುಂಬದ 25 ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಡಬದ ಅಂಬೇಡ್ಕರ್ ಭವನದಲ್ಲೂ ಗಂಜಿ ಕೇಂದ್ರ ತೆರೆಯಲಾಗಿದ್ದು, ಸುಬ್ರಹ್ಮಣ್ಯದ ಆರು ಕುಟುಂಬದ 18 ಜನರನ್ನು ಸ್ಥಳಾಂತರಿಸಲಾಗಿದೆ. ಬಂಟ್ವಾಳದ ಪಾಣೆ ಮಂಗಳೂರು
ಶ್ರೀ ಶಾರದಾ ಹೈಸ್ಕೂಲ್‌ನಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ನಿಷೇಧ ಮುಂದುವರಿಕೆ: ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಮುಂದುವರಿದಿದ್ದು, ಚಿಕ್ಕಮಗಳೂರು ಕಡೆಗೆ ತೆರಳಬೇಕಾಗಿರುವ ಭಾರಿ ವಾಹನಗಳು ಸಾಲುಗಟ್ಟಿ ನಿಂತಿವೆ. ಭೂಕುಸಿತದಿಂದ ರಸ್ತೆಯಲ್ಲಿ ಬಿದ್ದಿರುವ ಕಲ್ಲುಮಣ್ಣು, ಮರಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ. ಉದನೆ ಗ್ರಾಮದ ಬಳಿ ಕೆಂಪುಹೊಳೆ ಉಕ್ಕಿ ಹರಿದಿದ್ದರಿಂದ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದ್ದು, ವಾಹನಗಳ ಸಂಚಾರ ಕೆಲಕಾಲ ಸ್ಥಗಿತವಾಗಿತ್ತು. ಸಂಪಾಜೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಕುರುಬಗೇರಿ, ಭಾರತೀ ತೀರ್ಥ ಮಾರ್ಗ, ಗಾಂಧಿ ಮೈದಾನ ಜಲಾವೃತವಾಗಿವೆ. ಅಂಗಡಿ, ಮಳಿಗೆ, ಮನೆ, ಕಟ್ಟಡಗಳೊಳಗೆ ನೀರು ನುಗ್ಗಿದೆ. ತೆಕ್ಕೂರು ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಮೂಡಿಗೆರೆ ತಾಲ್ಲೂಕಿನ ಉಗ್ಗೇಹಳ್ಳಿ ಬಳಿ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ಮುಳುಗಡೆ ಭೀತಿ ಆವರಿಸಿದೆ. ಇದೇ ತಾಲ್ಲೂಕಿನ ಗೋಣಿಬೀಡಿನಲ್ಲಿ 226 ಮಿ.ಮೀ ಮಳೆಯಾಗಿದೆ.

ಗುರುವಾರ ಬೆಳಿಗ್ಗೆ ದುಬೈನಿಂದ ಮಂಗಳೂರಿಗೆ ಬಂದಿಳಿಯಬೇಕಿದ್ದ ಏರ್ ಇಂಡಿಯಾ ವಿಮಾನ, ಹವಾಮಾನ ವೈಪರೀತ್ಯದಿಂದಾಗಿ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಮಂಗಳೂರು ನಗರಕ್ಕೆ ಬರುತ್ತಿದ್ದ ಸುಮಾರು 180 ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ರೈಲು ಸಂಚಾರ ವ್ಯತ್ಯಯ

ಸುಬ್ರಹ್ಮಣ್ಯ–ಸಿರಿಬಾಗಿಲು ಮಧ್ಯೆ ಭೂಕುಸಿತ ಆಗುತ್ತಿರುವುದರಿಂದ ಈ ಮಾರ್ಗವಾಗಿ ಸಂಚರಿಸಬೇಕಿದ್ದ ಮಂಗಳೂರು ಜಂಕ್ಷನ್‌–ಯಶವಂತಪುರ ಹಾಗೂ ಕಾರವಾರ/ಕಣ್ಣೂರು– ಕೆಎಸ್‌ಆರ್ ಬೆಂಗಳೂರು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಮಂಗಳೂರಿನಿಂದ ಪುಣೆ ಮತ್ತು ಮುಂಬೈಗೆ ಇದ್ದ ಸಾರಿಗೆ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಎರಡು ದಿನಗಳ ಹಿಂದೆ ನಿಪ್ಪಾಣಿಯಲ್ಲಿ ಸಿಲುಕಿಕೊಂಡಿದ್ದ ಪುಣೆ–ಮಂಗಳೂರು ಬಸ್‌, ನಗರಕ್ಕೆ ಹಿಂದಿರುಗಿದೆ. ಹುಬ್ಬಳಿ ಕಡೆಗೆ ತೆರಳುವ ಬಸ್‌ಗಳು ಶಿರಸಿ ಮಾರ್ಗವಾಗಿ ಸಂಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT