ಠಾಣೆಯಲ್ಲೇ ರೈಫಲ್ ಕದ್ದ ಕಾನ್‌ಸ್ಟೆಬಲ್‌ಗಳು!

7
ಮಹಿಳಾ ಪಿಎಸ್‌ಐ ಸೇರಿ ಐವರ ಅಮಾನತು * ಸಿಬ್ಬಂದಿ ಮಧ್ಯೆ ಆಂತರಿಕ ಕಿತ್ತಾಟ

ಠಾಣೆಯಲ್ಲೇ ರೈಫಲ್ ಕದ್ದ ಕಾನ್‌ಸ್ಟೆಬಲ್‌ಗಳು!

Published:
Updated:
ಆನಂದ್‌, ಅಶೋಕ್‌, ಪರಮಾನಂದ, ಬಸವರಾಜ್

ಬೆಂಗಳೂರು: ಠಾಣೆಯಲ್ಲಿದ್ದ ರೈಫಲ್‌ಗಳು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಠಾಣೆ ಪಿಎಸ್‌ಐ ಸುಮಾ ಹಾಗೂ ನಾಲ್ವರು ಕಾನ್‌ಸ್ಟೆಬಲ್‌ಗಳ ತಲೆದಂಡವಾಗಿದೆ.

ವಿಧಾನಸಭಾ ಚುನಾವಣೆ ವೇಳೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದರು. ಚುನಾವಣೆ ಮುಗಿದ ಬಳಿಕ ಶಸ್ತಾಸ್ತ್ರ ಮರಳಿಸುವಾಗ ಎರಡು ರೈಫಲ್‌ಗಳು ನಾಪತ್ತೆಯಾಗಿದ್ದವು.

ಈ ಕುರಿತು ಇಲಾಖಾ ವಿಚಾರಣೆ ನಡೆಸಿದಾಗ ಸುಮಾ, ಕಾನ್‌ಸ್ಟೆಬಲ್‌ಗಳಾದ ಆನಂದ್ ಕೊಳೆಕಾರ್, ಪರಮಾನಂದ ಕೋಟಿ, ಅಶೋಕ್ ಬಿರಾದರ್ ಹಾಗೂ ಬಸವರಾಜ್ ಬೆಳಗಾವಿ ಕರ್ತವ್ಯಲೋಪ ಎಸಗಿರುವುದು ಗೊತ್ತಾಯಿತು. ಹೀಗಾಗಿ, ಅವರನ್ನು ಅಮಾನತು ಮಾಡಿ ಆಡಳಿತ ವಿಭಾಗದ ಹೆಚ್ಚುವರಿ ಕಮಿಷನರ್ ನಂಜುಂಡಸ್ವಾಮಿ ಆದೇಶಿಸಿದ್ದಾರೆ.

ರೈಫಲ್ ಕದ್ದು, ಅಲ್ಲೇ ಇಟ್ಟರು!: ‘ನಾಲ್ವರು ಕಾನ್‌ಸ್ಟೆಬಲ್‌ಗಳೂ 2012ರಲ್ಲಿ ಇಲಾಖೆ ಸೇರಿದ್ದಾರೆ. ಇವರ ಹಾಗೂ ಪಿಎಸ್‌ಐ ನಡುವಿನ ಆಂತರಿಕ ತಿಕ್ಕಾಟವೇ ರೈಫಲ್ ಕಾಣೆಯಾಗಲು ಕಾರಣ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕೆಲಸದ ಹಂಚಿಕೆ ವಿಚಾರದಲ್ಲಿ ಪಿಎಸ್‌ಐ ತಾರತಮ್ಯ ಮಾಡುತ್ತಿದ್ದಾರೆ ಎಂದು ಭಾವಿಸಿದ್ದ ಕಾನ್‌ಸ್ಟೆಬಲ್‌ಗಳು, ಹೇಗಾದರೂ ಮಾಡಿ ಅವರಿಗೆ ಕೆಟ್ಟ ಹೆಸರು ತರಬೇಕೆಂದು ನಿರ್ಧರಿಸಿದ್ದರು. ಸಾರ್ವಜನಿಕರು ಠೇವಣಿ ಇರಿಸಿದ್ದ ಶಸ್ತ್ರಾಸ್ತ್ರಗಳ ಭದ್ರತೆಯ ಉಸ್ತುವಾರಿಯನ್ನು ಸುಮಾ ಅವರಿಗೇ ನೀಡಲಾಗಿತ್ತು. ಕಾನ್‌ಸ್ಟೆಬಲ್‌ಗಳು ಕಿಟಕಿ ಮೂಲಕ 2 ರೈಫಲ್‌ಗಳನ್ನು ಕದ್ದಿದ್ದರು. ಆನಂದ್ ಹಾಗೂ ಪರಮಾನಂದ ತಲಾ ಒಂದು ರೈಫಲನ್ನು ತಮ್ಮ ಮನೆಯಲ್ಲಿ ಇಟ್ಟಿದ್ದರು.’

‘ಠೇವಣಿ ಇಟ್ಟಿದ್ದವರು ರೈಫಲ್ ಕೇಳಿಕೊಂಡು ಠಾಣೆಗೆ ಬಂದಾಗ ನಾಪತ್ತೆ ಪ್ರಕರಣ ಬೆಳಕಿಗೆ ಬಂದಿತ್ತು. ಆ ವಿಚಾರವನ್ನು ಸುಮಾ ಕೂಡಲೇ ಡಿಸಿಪಿ ಎಸ್‌.ಡಿ.ಶರಣಪ್ಪ ಅವರ ಗಮನಕ್ಕೆ ತಂದಿದ್ದರು. ಈ ಕುರಿತು ವಿಚಾರಣೆ ನಡೆಸಿ ವರದಿ ಕೊಡುವಂತೆ ಅವರು ಎಸಿಪಿಗೆ ಸೂಚಿಸಿದ್ದರು. ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕಾನ್‌ಸ್ಟೆಬಲ್‌ಗಳು, ಯಾರಿಗೂ ಗೊತ್ತಾಗದಂತೆ ರೈಫಲ್‌ಗಳನ್ನು ಪುನಃ ಅದೇ ಸ್ಥಳದಲ್ಲಿ ತಂದಿಟ್ಟಿದ್ದರು.’

‘ನಂತರ ಎಸಿಪಿ ಹಾಗೂ ಡಿಸಿಪಿ ಠಾಣೆಯ ಎಲ್ಲ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಿದಾಗ, ನಾಲ್ವರು ಕಾನ್‌ಸ್ಟೆಬಲ್‌ಗಳ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಘಟನೆಯ ಕುರಿತು ಶರಣಪ್ಪ ಅವರು ಆಡಳಿತ ವಿಭಾಗಕ್ಕೆ ವರದಿ ಕೊಟ್ಟಿದ್ದಾರೆ.

ಪ್ರಾದೇಶಿಕ ತಾರತಮ್ಯ
‘ಉತ್ತರ ಕರ್ನಾಟಕದ ಸಿಬ್ಬಂದಿ ‘ಎನ್‌ಇ’ (ನಾರ್ಥ್ ಕರ್ನಾಟಕ) ಎಂತಲೂ, ದಕ್ಷಿಣ ಕರ್ನಾಕದ ಸಿಬ್ಬಂದಿ ‘ಎಸ್‌ಇ’ (ಸೌತ್ ಕರ್ನಾಟಕ) ಎಂತಲೂ ಗುಂಪು ಮಾಡಿಕೊಂಡಿದ್ದಾರೆ. ಕೆಲಸದ ಹಂಚಿಕೆ, ಗಸ್ತು ನಿಯೋಜನೆ, ರಜೆ ಮಂಜೂರು.. ಸೇರಿ ವೃತ್ತಿ ವಿಚಾರದಲ್ಲಿ ಈ ಬಣಗಳ ನಡುವೆ ಕಿತ್ತಾಟ ನಡೆಯುತ್ತಲೇ ಇತ್ತು. ಅದರ ಮುಂದುವರಿದ ಭಾಗವೇ ಈ ಪಿಸ್ತೂಲ್ ಪ್ರಹಸನ’ ಎಂದು ಕುಮಾರಸ್ವಾಮಿ ಲೇಔಟ್ ಠಾಣೆಯ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !