ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತಿ ನಿರೀಕ್ಷೆಯಲ್ಲಿ ಅನಾಥ ವಾಹನಗಳು

ಪ್ರಜಾವಾಣಿ ವಿಶೇಷ
Last Updated 14 ನವೆಂಬರ್ 2018, 19:51 IST
ಅಕ್ಷರ ಗಾತ್ರ

ಬೆಂಗಳೂರು:ನಗರದ ವಿವಿಧೆಡೆ ನಿಂತ ಅನಾಥ ವಾಹನಗಳು ನಗರದ ಸೌಂದರ್ಯಕ್ಕೆ ಧಕ್ಕೆ ತರುವುದರ ಜತೆಗೆ ಸಂಚಾರ ವ್ಯವಸ್ಥೆಗೂ ಅಡಚಣೆ ಉಂಟು ಮಾಡುತ್ತಿವೆ.ಇಂಥವಾಹನಗಳಿಗೊಂದು ಮುಕ್ತಿ ಕಾಣಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಅನಾಥವಾಗಿ ನಿಂತ ಪೈಕಿ ಹಳೆಯ ಮಾದರಿಗಳಿಂದ ಹಿಡಿದು, ಇತ್ತೀಚೆಗೆ ಖರೀದಿಸಿದ ವಾಹನಗಳೂ ಇವೆ. ವಿಜಯನಗರ, ಮೈಸೂರು ರಸ್ತೆ, ಕುಮಾರಸ್ವಾಮಿ ಲೇಔಟ್‌, ಬನಶಂಕರಿ, ಹೊರವರ್ತುಲ ರಸ್ತೆಗಳಲ್ಲಿ ಇಂತಹ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೆ, ಅವು ಸಂಚರಿಸಲಾಗದ ಸ್ಥಿತಿಯಲ್ಲಿವೆ.

ಎರಡು ಕಾರಣಗಳಿಂದಾಗಿ ವಾಹನಗಳು ಅನಾಥವಾಗಿ ನಿಂತಿವೆ. ಅಪಘಾತ, ಅಪರಾಧ ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ಠಾಣೆಯ ಆವರಣದಲ್ಲಿ ನಿಲ್ಲಿಸಲು ಜಾಗವಿಲ್ಲದೇ ಹೀಗೆ ರಸ್ತೆ ಬದಿ ನಿಲ್ಲಿಸಲಾಗಿದೆ.

ಇನ್ನುಕೆಲವುಹಣಕಾಸು ಸಂಸ್ಥೆಗಳು ವಶಪಡಿಸಿಕೊಂಡವು. ತೆರಿಗೆ ಕಟ್ಟದೆ, ನಿರ್ವಹಣೆ ಮಾಡಲಾಗದೆ ಸಂಕಷ್ಟಕ್ಕೊಳಗಾಗಿ ಮಾರ್ಗಮಧ್ಯೆ ಬಿಟ್ಟ ವಾಹನಗಳು ಸಹ ಇವೆ.

ಅಪಘಾತ ಪ್ರಕರಣಗಳಿಂದಾಗಿ ಅತ್ತ ಮಾರಾಟ ಮಾಡಲೂ ಆಗದೇ, ಇತ್ತ ಇಟ್ಟುಕೊಳ್ಳಲೂ ಆಗದೇ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಮಾಲೀಕರಿಗೆ ಸೇರಿದ ವಾಹನಗಳೂ ರಸ್ತೆಯ ಬದಿಯಲ್ಲೇ ನಿಂತಿವೆ.

ಬಹುಪಾಲು ವಾಹನಗಳ ಬಿಡಿ ಭಾಗಗಳನ್ನು ಕಳವು ಮಾಡಲಾಗಿದೆ. ಗಾಜುಗಳು ಕಿಡಿಗೇಡಿಗಳ ಕಲ್ಲೇಟಿಗೆ ಒಡೆದಿವೆ. ಹೀಗೆ ತೆರೆದ ಕಾರುಗಳು ಕಸ ಹಾಕುವ ಡಬ್ಬಿಯಾಗಿಯೂ ಕೆಲವೆಡೆ ಬಳಕೆಯಾಗುತ್ತಿವೆ. ಬೀದಿ ನಾಯಿಗಳ ವಾಸಸ್ಥಾನವಾಗಿಯೂ ಮಾರ್ಪಟ್ಟಿವೆ.

ಟೆಂಪೊ ಟ್ರಾವೆಲರ್‌, ಇಂಡಿಕಾ, ಮಾರುತಿ ಎಸ್ಟೀಮ್‌, ಸ್ವಿಫ್ಟ್‌, ಓಮ್ನಿ ಕಾರುಗಳು, ಹುಂಡೈ ಮತ್ತು ಸುಝುಕಿ ಕಂಪನಿಯ ವಿವಿಧಕಾರುಗಳು, ವಿಂಗರ್‌ ವಾಹನ, ಕಾಂಟೆಸ್ಸಾ, ಬಿಎಂಡಬ್ಲ್ಯೂ ಹಳೆ ಮಾದರಿಯ ಕಾರು. ಫಿಯೆಟ್‌ನ ವಿಂಟೇಜ್‌ ಕಾರು, ಆಸ್ಟಿನ್‌ ಟೌನ್‌ನಲ್ಲಿ ಮಾರುತಿ ಆಲ್ಟೋ, ಎಸ್ಟೀಮ್‌ ವಾಹನಗಳು ಅಲ್ಲಲ್ಲಿ ಇವೆ.

ಪ್ರತ್ಯೇಕ ಜಾಗ:ಈ ಮಧ್ಯೆ ಪೊಲೀಸ್‌ ಇಲಾಖೆ, ಸಾರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ವಾಹನಗಳನ್ನು ನಿಲ್ಲಿಸುವುದಕ್ಕೆ ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸುವ ಸಲುವಾಗಿ ಎಸ್‌.ಬಿಂಗಿಪುರದಲ್ಲಿ 13 ಎಕರೆಯಷ್ಟು ಜಾಗವನ್ನು ಬಿ‌ಟ್ಟುಕೊಡುವುದಕ್ಕೆ ಪಾಲಿಕೆ ಒಪ್ಪಿದೆ.

ಈ ಸಮಸ್ಯೆ ಬಗ್ಗೆ ಕೌನ್ಸಿಲ್‌ ಸಭೆಯಲ್ಲೂ ಇತ್ತೀಚೆಗೆ ಚರ್ಚೆ ನಡೆದಿತ್ತು.

‘ಬಿಂಗಿಪುರದಲ್ಲಿ ಕಸವನ್ನು ಭೂಭರ್ತಿ ಮಾಡಲಾಗಿದೆ. ಈ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ಹಾಗಾಗಿ ಉದ್ಯಾನ ನಿರ್ಮಿಸುವ ಚಿಂತನೆ ನಡೆಸಿದ್ದೆವು. ಈ ಜಾಗವನ್ನು ವಾಹನಗಳ ನಿಲುಗಡೆಗೆ ಬಿಟ್ಟುಕೊಡುತ್ತೇವೆ’ ಎಂದು ಪಾಲಿಕೆ ಆಯುಕ್ತರು ಹೇಳುತ್ತಾರೆ.

‘ಬಿಂಗಿಪುರದ ಜಾಗ ಕಂದಾಯ ಇಲಾಖೆಯಿಂದ ನಮಗೆ ಹಸ್ತಾಂತರವಾಗಿತ್ತು. ಹಾಗಾಗಿ ನಾವು ಅದನ್ನು ಇಲಾಖೆಗೆ ಮರಳಿಸಲಿದ್ದೇವೆ. ಅವರೇ ಅದನ್ನು ಪೊಲೀಸ್‌ ಇಲಾಖೆಗೆ ಹಸ್ತಾಂತರ ಮಾಡಲಿದ್ದಾರೆ’ ಎಂದು ಅವರು ವಿವರಿಸುತ್ತಾರೆ.

ವಿಲೇವಾರಿಗೆ ಏನು ಅಡ್ಡಿ?

*ಮಾಲೀಕರು ಪತ್ತೆಯಾಗದಿರುವುದು ಹಾಗೂ ಸ್ಪಂದಿಸದಿರುವುದು.

*ಹಣಕಾಸು ಸಂಸ್ಥೆಗಳು ಮತ್ತು ಮಾಲೀಕರ ನಡುವಿನ ಸಮಸ್ಯೆ

*ನಿರ್ದಿಷ್ಟ ಜಾಗದಲ್ಲಿ ಹಾಕಲು ಸ್ಥಳದ ಕೊರತೆ

**

ಜನ ಏನೆನ್ನುತ್ತಾರೆ?
ಬಿಬಿಎಂಪಿ, ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಒಟ್ಟಾಗಿ ಸೇರಿ ವಿಶೇಷ ನಿಯಮ ರೂಪಿಸಬೇಕು. ಸಂಬಂಧಪಟ್ಟ ಮಾಲೀಕರು ಸಿಗದಿದ್ದಾಗ ಅಥವಾ ಪ್ರತಿಕ್ರಿಯಿಸದಿದ್ದಾಗ ಹಣಕಾಸು ಸಂಸ್ಥೆಗಳಿಗೆ ವಾಹನದ ತೆರವಿಗೆ ಸೂಚಿಸಬೇಕು. ಆಗಲೂ ಸಾಧ್ಯವಾಗದಿದ್ದರೆ ಪಾಲಿಕೆಯೇ ಅದನ್ನು ಯಾವುದೇ ರೀತಿಯಲ್ಲಿ ವಿಲೇವಾರಿ ಮಾಡುವ ಅಧಿಕಾರ ಕೊಡಬೇಕು ಎಂದು ಜನ ಸಲಹೆ ಮಾಡುತ್ತಿದ್ದಾರೆ.

**
ಪೊಲೀಸರೇ ಕ್ರಮ ತೆಗೆದುಕೊಳ್ಳಬಹುದು

ಪೊಲೀಸ್‌ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ವಾಹನಗಳನ್ನು ನಿಲ್ಲಿಸಲು ಪಾಲಿಕೆ ವತಿಯಿಂದ 13 ಎಕರೆ, ಜಿಲ್ಲಾಡಳಿತದಿಂದ ಐದು ಎಕರೆ ಜಮೀನು ನೀಡಲಾಗುವುದು. ಅಲ್ಲಿ ವ್ಯವಸ್ಥಿತವಾಗಿ ನಿಲ್ಲಿಸಬಹುದು. ಇನ್ನು ಪೊಲೀಸ್‌ ಹೊರತಾದ ಪ್ರಕರಣಗಳಿಂದಾಗಿ ಅನಾಥವಾದ ವಾಹನಗಳನ್ನು ಏಕಾಏಕಿ ವಶಪಡಿಸಿಕೊಳ್ಳಲು ಆಗುವುದಿಲ್ಲ. ಕಾನೂನು ಸಮಸ್ಯೆಗಳು ಎದುರಾಗುತ್ತವೆ. ಪೊಲೀಸರೇ ಏನಾದರೂ ಕ್ರಮ ತೆಗೆದುಕೊಳ್ಳಬಹುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT