ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಸ್ ರೂಪಾ ಹೆಸರಲ್ಲಿ ಲಖನೌದಲ್ಲಿ ರೂಂ ಬುಕ್!

ಬನಶಂಕರಿ ಠಾಣೆಗೆ ದೂರು ಕೊಟ್ಟ ರೂಪಾ * ಲಖನೌ ಪೊಲೀಸರಿಗೂ ಚಳ್ಳೇಹಣ್ಣು ತಿನ್ನಿಸಿದ ಮಹಿಳೆ
Last Updated 2 ಜನವರಿ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಹೆಸರಿನಲ್ಲಿ ಲಖನೌ ಪೊಲೀಸರಿಗೆ ಕರೆ ಮಾಡಿರುವ ಮಹಿಳೆಯೊಬ್ಬರು, ಅಲ್ಲಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿಸಿದ್ದಾಳೆ!

ಲಖನೌದಲ್ಲಿರುವ ಪರಿಚಿತ ಅಧಿಕಾರಿಯೊಬ್ಬರು ರೂಪಾ ಅವರಿಗೆ ವಾಪಸ್ ಕರೆ ಮಾಡಿದಾಗ, ವಂಚನೆ ಕೃತ್ಯ ಬಯಲಾಗಿದೆ. ತಮ್ಮ ಹೆಸರನ್ನು ದುರುಪಯೋಗ ಮಾಡಿಕೊಂಡ ಮಹಿಳೆಯನ್ನು ಪತ್ತೆ ಮಾಡುವಂತೆ ರೂಪಾ ಬನಶಂಕರಿ ಠಾಣೆಗೆ ಮಂಗಳವಾರ ದೂರು ಕೊಟ್ಟಿದ್ದಾರೆ.

ವಂಚನೆ (ಐಪಿಸಿ 417, 420) ಹಾಗೂ ಅಪರಾಧ ಕೃತ್ಯಕ್ಕೆ ಯತ್ನಿಸಿದ (511) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಆ ಮೊಬೈಲ್ ಸಂಖ್ಯೆಯ ಮೂಲ ಮಾಲೀಕಳನ್ನು ಮಂಗಳೂರಿನಲ್ಲಿ ಪತ್ತೆ ಹಚ್ಚಿದ್ದಾರೆ.

ಆದರೆ, ‘ತಿಂಗಳ ಹಿಂದೆಯೇ ನನ್ನ ಮೊಬೈಲ್ ಕಳೆದುಹೋಗಿತ್ತು. ಈ ಸಂಬಂಧ ಪಾಂಡೇಶ್ವರ ಠಾಣೆಗೆ ದೂರು ಕೊಟ್ಟಿದ್ದೇನೆ. ಎಫ್‌ಐಆರ್ ಹಾಗೂ ದೂರು ಸ್ವೀಕೃತಿ ಅರ್ಜಿಯನ್ನು ಬಿಎಸ್‌ಎನ್‌ಎಲ್ ಕಚೇರಿಗೆ ಸಲ್ಲಿಸಿ, ಅದೇ ಸಂಖ್ಯೆಯ ಹೊಸ ಸಿಮ್ ಖರೀದಿಸಿದ್ದೇನೆ’ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದರಿಂದ ಪೊಲೀಸರೂ ಗೊಂದಲಕ್ಕೆ ಸಿಲುಕಿದ್ದಾರೆ.

ಹೋಟೆಲ್ ಬುಕ್ ಆಗಿತ್ತು: ‘ಕೆಲ ದಿನಗಳ ಹಿಂದೆ ಲಖನೌ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿರುವ ಮಹಿಳೆ, ‘ನಾನು ಗೃಹರಕ್ಷಕದಳದ ಐಜಿಪಿ ಡಿ.ರೂಪಾ ಮಾತನಾಡುತ್ತಿದ್ದೇನೆ. ಕೆಲಸದ ನಿಮಿತ್ತ ಲಖನೌಗೆ ಬರುತ್ತಿದ್ದೇನೆ. ಡಿ.29ರಿಂದ ಜ.3ರವರೆಗೆ ಒಳ್ಳೆಯ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿ’ ಎಂದು ಹೇಳಿದ್ದರಂತೆ. ಅವರ ಮಾತನ್ನು ನಂಬಿದ್ದ ಅಧಿಕಾರಿ, ರೂಂ ಕೂಡ ಬುಕ್ ಮಾಡಿದ್ದಾರೆ’ ಎಂದು ರೂಪಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಸಂಗತಿ ತಿಳಿದು ನನ್ನ ಪರಿಚಯದ ಅಧಿಕಾರಿ ವಿಕಾಸ್ ಚಂದ್ರ ತ್ರಿಪಾಠಿ ಅವರು ಕರೆ ಮಾಡಿ ವಿಚಾರಿಸಿದ್ದರು. ನಾನು ರೂಂ ಬುಕ್ ಮಾಡುವಂತೆ ಯಾರಿಗೂ ಕರೆ ಮಾಡಿಲ್ಲವಲ್ಲ ಎಂದಾಗ, ‘ಯಾರೋ ನಿಮ್ಮ ಹೆಸರು ಹೇಳಿಕೊಂಡು 944****544 ಸಂಖ್ಯೆಯಿಂದ ಕರೆ ಮಾಡಿದ್ದರು’ ಎಂದರು. ನಂತರ ಆ ಸಂಖ್ಯೆಗೆ ಕರೆ ಮಾಡಿದೆ. ಆ ಮಹಿಳೆ ಸರಿಯಾಗಿ ಮಾತನಾಡದ ಕಾರಣ ಠಾಣೆಗೆ ದೂರು ಕೊಟ್ಟಿದ್ದೇನೆ’ ಎಂದರು.

‘ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಹೊರಟಾಗ, ಆ ಮಹಿಳೆ ಮಂಗಳೂರಿನ ಬಲ್ಮಠದಲ್ಲಿರುವ ‘ಚಿರಾಗ್’ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿ ಎಂಬುದು ಗೊತ್ತಾಯಿತು. ಆದರೆ, ಕರೆ ಹೋದ ದಿನ ಆ ಮೊಬೈಲ್ ಸಂಖ್ಯೆಯನ್ನು ಅದೇ ಮಹಿಳೆ ಬಳಸುತ್ತಿದ್ದರೋ? ಇಲ್ಲವೋ ಗೊತ್ತಿಲ್ಲ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ನಾಲ್ಕು ದಿನಗಳಲ್ಲಿ 2ನೇ ಸಲ ವಂಚನೆ

‘ಡಿ_ರೂಪಾ_ಐಪಿಎಸ್‌’ ಹೆಸರಿನಲ್ಲಿ ‘ಇನ್‌ಸ್ಟಾಗ್ರಾಂ’ನಲ್ಲಿ ನಕಲಿ ಖಾತೆ ತೆರೆದಿದ್ದ ಅಪರಿಚಿತರು, ‘ಬಡ ಹೆಣ್ಣು ಮಕ್ಕಳ ಏಳಿಗೆಗೆ ಸಹಾಯ ಮಾಡಿ’ ಎಂಬ ಪೋಸ್ಟ್ ಹಾಕಿದ್ದರು. ಈ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ‘ನಾನು ಯಾವುದೇ ಇನ್‌ಸ್ಟಾಗ್ರಾಂ ಖಾತೆ ಹೊಂದಿಲ್ಲ. ಯಾರೂ ಹಣ ಹಾಕಬೇಡಿ’ ಎಂದು ಟ್ವೀಟ್ ಮೂಲಕ ರೂಪಾ ಸ್ಪಷ್ಟಪಡಿಸಿದ್ದರು. ಈ ಸಂಬಂಧ 2018ರ ಡಿ.30ರಂದು ಸೈಬರ್ ಕ್ರೈಂ ಠಾಣೆಗೂ ದೂರು ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT