ಗುರುವಾರ , ಏಪ್ರಿಲ್ 22, 2021
22 °C
ಅಂತರರಾಷ್ಟ್ರೀಯ ಕರೆಗಳ ಮಾರ್ಪಾಡು * ಸರ್ಕಾರ ಹಾಗೂ ಮೊಬೈಲ್‌ ಸೇವಾ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ನಷ್ಟ

ರೌಡಿ ನಾಗ ಅಳಿಯನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ಮೊಬೈಲ್‌ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಸರ್ಕಾರ ಹಾಗೂ ಮೊಬೈಲ್‌ ಸೇವಾ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಮಾಗಡಿ ರಸ್ತೆ ಪೊಲೀಸರು, ಶ್ರೀರಾಮ‍‍ಪುರದ ರೌಡಿ ಬಾಂಬ್‌ ನಾಗನ ಅಳಿಯ ಸೇರಿ ಮೂವರನ್ನು ಬಂಧಿಸಿದ್ದಾರೆ.

ನಾಗನ ಅಕ್ಕನ ಮಗ ಸುಚಿತ್ (29), ಆತನ ಸಹಚರರಾದ ಕೇರಳದ ಅಶ್ರಫ್ ಹಾಗೂ ಸೈಯದ್ ಬಂಧಿತರು. ಅವರಿಂದ 3 ಎಫ್‌ಸಿಟಿ ಬಾಕ್ಸ್‌, ಎರಡು ಲ್ಯಾಪ್‌ಟಾಪ್ ಹಾಗೂ 2 ಸಾವಿರಕ್ಕೂ ಹೆಚ್ಚು ಸಿಮ್‌ಕಾರ್ಡ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ರಾಜಾಜಿನಗರದ 6ನೇ ಹಂತದಲ್ಲಿರುವ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ ಆರೋಪಿಗಳು, ಅಲ್ಲಿಯೇ ಸಲಕರಣೆಗಳನ್ನು ಇಟ್ಟುಕೊಂಡು ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದರು. ಮೊಬೈಲ್‌ ಕರೆ ವಿನಿಮಯ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್‌ ಆರ್‌.ಹೇಮಂತ್‌ಕುಮಾರ್‌ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮೊಬೈಲ್ ಮಳಿಗೆ ಇಟ್ಟುಕೊಂಡಿದ್ದ: ‘ಮೊಬೈಲ್‌ ಸಿಮ್‌ಕಾರ್ಡ್‌ ಮಾರಾಟ ಹಾಗೂ ಕರೆನ್ಸಿ ಹಾಕುವ ಮಳಿಗೆ ಇಟ್ಟುಕೊಂಡಿದ್ದ ಸುಚಿತ್‌, ಅಲ್ಲಿಗೆ ಬರುವ ಗ್ರಾಹಕರ ಗುರುತಿನ ಚೀಟಿಗಳನ್ನು ಜೆರಾಕ್ಸ್‌ ಮಾಡಿಟ್ಟುಕೊಳ್ಳುತ್ತಿದ್ದ. ಅವುಗಳನ್ನು ಬಳಸಿಕೊಂಡು ಹೊಸ ಸಿಮ್‌ಕಾರ್ಡ್‌ ಖರೀದಿಸಿ ಕೃತ್ಯಕ್ಕೆ ಬಳಸುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

’ಅಂತರರಾಷ್ಟ್ರೀಯ ಮೊಬೈಲ್‌ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಹಣ ಮಾಡುವ ಬಗ್ಗೆ ಯೋಚಿಸಿದ್ದ ಸುಚಿತ್‌, ಸ್ನೇಹಿತನೊಬ್ಬನ ಮೂಲಕ ಆಶ್ರಫ್‌ನನ್ನು ಪರಿಚಯ ಮಾಡಿಕೊಂಡಿದ್ದ. ತಂತ್ರಜ್ಞಾನ ಬಳಕೆಯಲ್ಲಿ ಪರಿಣಿತನಾಗಿದ್ದ ಅಶ್ರಫ್, ಮೊಬೈಲ್‌ ಕರೆಗಳನ್ನು ಸರಾಗವಾಗಿ ಪರಿವರ್ತಿಸುತ್ತಿದ್ದ. ಆತನಿಗೆ ಸೈಯದ್ ಸಹಾಯಕನಾಗಿದ್ದ. ಅವರಿಬ್ಬರ ಸಹಾಯದಿಂದಲೇ ಆರೋಪಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ. ಅದರಲ್ಲಿ ಸಹಚರರಿಗೂ ಪಾಲು ನೀಡುತ್ತಿದ್ದ’ ಎಂದರು.

ಪರಿವರ್ತನೆ ಹೇಗೆ? ‘ಸಿಮ್‌ಕಾರ್ಡ್‌ ಬಳಸಿಕೊಂಡು ಎಫ್‌ಸಿಟಿ ಬಾಕ್ಸ್, ಮೋಡಮ್‌, ರೂಟರ್‌ ಆನ್‌ ಮಾಡಿಕೊಳ್ಳುತ್ತಿದ್ದ ಆರೋಪಿಗಳು, ಅಂತರ್ಜಾಲದ ಮೂಲಕ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಕೆಲವು ವಿದೇಶಿ ಕಂಪನಿಗಳೊಂದಿಗೆ ಆರೋಪಿಗಳು, ಒಪ್ಪಂದ ಮಾಡಿಕೊಂಡಿದ್ದರು. ಸೌದಿ ಅರೇಬಿಯಾ, ದುಬೈ, ಯುಎಇ, ಓಮನ್ ದೇಶಗಳಿಂದ ಬರುವ ಅಂತರರಾಷ್ಟ್ರೀಯ ಕರೆಗಳನ್ನು ಅವರು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ಕರೆಯೊಂದಕ್ಕೆ 8–9 ಪೈಸೆ ಕಮಿಷನ್ ಪಡೆಯುತ್ತಿದ್ದರು’ ಎಂದರು.

‘ಅಶ್ರಫ್ ಹಾಗೂ ಸೈಯದ್, ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ದಿನದ 24 ಗಂಟೆಯಲ್ಲಿ ಸಾವಿರಾರು ಕರೆಗಳನ್ನು  ಪರಿವರ್ತಿಸುತ್ತಿದ್ದರು. ಆ ಸಂಬಂಧ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಪೊಲೀಸ್‌ ಕಸ್ಟಡಿಗೆ: ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ನ. 14ರವರೆಗೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

‘ಜಪ್ತಿ ಮಾಡಲಾದ ಸಲಕರಣೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ಆರೋಪಿಗಳ ಕೃತ್ಯದಲ್ಲಿ ಹಲವರು ಶಾಮೀಲಾಗಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ತಿಳಿಸಿದರು. 

ಏನಿದು ಎಫ್‌ಸಿಟಿ ಬಾಕ್ಸ್?
ಸಿಮ್‌ಕಾರ್ಡ್‌ಗಳನ್ನು ಅಳವಡಿಸಿ, ಏಕಕಾಲದಲ್ಲೇ ಆ ಎಲ್ಲಾ ಸಿಮ್‌ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗುವ ಉಪಕರಣ ಎಫ್‌ಸಿಟಿ (ಫಿಕ್ಸೆಡ್ ಸೆಲ್ಯುಲರ್ ಟರ್ಮಿನಲ್) ಬಾಕ್ಸ್.

ಖಾಸಗಿ ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಮತ್ತು ದೂರಸಂಪರ್ಕ ಕಂಪನಿಗಳಲ್ಲಿ ಈ ಎಫ್‌ಸಿಟಿ ಬಾಕ್ಸ್‌ಗಳನ್ನು ಬಳಸಲಾಗುತ್ತದೆ. ಪರವಾನಗಿ ಇಲ್ಲದೇ ಈ ಬಾಕ್ಸ್‌ಗಳನ್ನು ಬಳಸುವುದು ಅಪರಾಧ. ಬಂಧಿತ ಆರೋಪಿಗಳು, ಇದೇ ಎಫ್‌ಸಿಟಿ ಬಾಕ್ಸ್‌ಗಳನ್ನು ಬಳಸಿ ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು