ರೌಡಿ ಲೋಕಿಗೆ ಪೊಲೀಸ್ ಗುಂಡೇಟು: ಬಂಧನ

ಮಂಗಳವಾರ, ಮಾರ್ಚ್ 26, 2019
31 °C
ಪ್ರಶಾಂತ್ ಕೊಲೆ ಪ್ರಕರಣದ ಪ್ರಮುಖ ಆರೋಪಿ

ರೌಡಿ ಲೋಕಿಗೆ ಪೊಲೀಸ್ ಗುಂಡೇಟು: ಬಂಧನ

Published:
Updated:

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಲೋಕೇಶ್ ಅಲಿಯಾಸ್ ಲೋಕಿಯನ್ನು (24) ಮಾರತ್ತಹಳ್ಳಿ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಕಾಡುಬೀಸನಹಳ್ಳಿ ನಿವಾಸಿಯಾದ ಲೋಕೇಶ್ ವಿರುದ್ಧ ಎಚ್‌ಎಎಲ್, ವರ್ತೂರು ಹಾಗೂ ಮಾರತ್ತಹಳ್ಳಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಫೆ.27ರ ರಾತ್ರಿ ಹೆಣ್ಣೂರಿನ ಕಲ್ಯಾಣನಗರದಲ್ಲಿ ನಡೆದಿದ್ದ ರೌಡಿ ಪ್ರಶಾಂತ್ ಅಲಿಯಾಸ್ ರಾಜು ಕೊಲೆ ಪ್ರಕರಣದಲ್ಲೂ ಈತ ಪ್ರಮುಖ ಆರೋಪಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ಪ್ರಶಾಂತ್ ಕೊಲೆ ನಂತರ ಲೋಕೇಶ್ ತನ್ನ ಸಹಚರರೊಂದಿಗೆ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ಸೋಮವಾರ ರಾತ್ರಿ ಅವರನ್ನೆಲ್ಲ ಬಂಧಿಸಿ ನಗರಕ್ಕೆ ಕರೆತರಲಾಗಿತ್ತು. ‘ಪ್ರಮುಖ ಆರೋಪಿ ಶಿವರಾಜ್ ಬೆಳ್ಳಂದೂರಿನಲ್ಲಿ ಅಡಗಿದ್ದು, ಆತನಿರುವ ಸ್ಥಳ ತೋರಿಸುತ್ತೇನೆ’ ಎಂದು ಲೋಕೇಶ್ ವಿಚಾರಣೆ ವೇಳೆ ಹೇಳಿದ್ದ. ಹೀಗಾಗಿ, ಇನ್‌ಸ್ಪೆಕ್ಟರ್ ಗಿರೀಶ್ ನೇತೃತ್ವದ ತಂಡ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆತನನ್ನು ಬೆಳ್ಳಂದೂರಿನ ಕಡೆಗೆ ಕರೆದುಕೊಂಡು ಹೋಗಿತ್ತು’ ಎಂದು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿಕ್ಕಕನ್ನಹಳ್ಳಿ ಬಳಿ ಹೋಗುವಾಗ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ. ಈ ವೇಳೆ ತನ್ನನ್ನು ಬೆನ್ನಟ್ಟಿದ ಹೆಡ್‌ಕಾನ್‌ಸ್ಟೆಬಲ್ ರವಿ ಅವರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ. ಆಗ ಇನ್‌ಸ್ಪೆಕ್ಟರ್ ಆತನ ಕಾಲಿಗೆ ಗುಂಡು ಹೊಡೆದರು. ಶಿವರಾಜ್‌ಗಾಗಿ ಶೋಧ ಮುಂದುವರಿದಿದೆ’ ಎಂದು ಮಾಹಿತಿ ನೀಡಿದರು.

ವೃತ್ತಿ ವೈಷಮ್ಯ: ಶಿವರಾಜ್ ತಂದೆ ಕೃಷ್ಣಪ್ಪ ಅವರನ್ನು ಕೊಲ್ಲಲು ಯತ್ನಿಸಿ ಜೈಲು ಸೇರಿದ್ದ ರೌಡಿ ಪ್ರಶಾಂತ್, ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ತಂದೆ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪ್ರಶಾಂತ್‌ನನ್ನು ಮುಗಿಸಲು ಸಂಚು ರೂಪಿಸಿದ್ದ ಶಿವರಾಜ್, ಅದಕ್ಕೆ ಲೋಕೇಶ್‌ನ ನೆರವು ಕೇಳಿದ್ದ. ಮರಳು ಮಾಫಿಯಾ ಹಾಗೂ ನೀರಿನ ಕ್ಯಾನ್ ಸರಬರಾಜು ವಹಿವಾಟಿನಲ್ಲಿ ಪ್ರಶಾಂತ್ ತನಗೆ ಎದುರಾಳಿಯಾಗಿದ್ದರಿಂದ ಲೋಕೇಶ್ ಆತನನ್ನು ಮುಗಿಸಲು ಕೈಜೋಡಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಫೆ.27ರ ರಾತ್ರಿ ಪ್ರಶಾಂತ್ ಟ್ಯಾನರಿ ರಸ್ತೆಯಲ್ಲಿ ಗೆಳೆಯನನ್ನು ಭೇಟಿಯಾಗಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ. ಈ ವೇಳೆ ಕಾರು ಬೈಕ್‌ಗಳಲ್ಲಿ ಬಂದು ದಾಳಿ ನಡೆಸಿದ್ದ ದುಷ್ಕರ್ಮಿಗಳು, ಮಚ್ಚು–ಲಾಂಗುಗಳಿಂದ ಹೊಡೆದು ಕೊನೆಗೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದರು. ‘ಶಿವರಾಜ್, ಲೋಕೇಶ್ ಅಲಿಯಾಸ್ ಲೋಕಿ, ಸ್ಟಾಲಿನ್, ಪ್ರವೀಣ್, ಬಸವರಾಜ್, ಸುನೀಲ್, ಕಿಶೋರ್ ಹಾಗೂ ಮೈಲಾರಿ’ ಅವರೇ ನನ್ನ ಗಂಡನನ್ನು ಕೊಂದಿದ್ದಾರೆ ಎಂದು ಆರೋಪಿಸಿ ಪ್ರಶಾಂತ್ ಪತ್ನಿ ಅರ್ಚನಾ ದೂರು ಕೊಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !