ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಹಾರ ಅಭಿವೃದ್ಧಿಗೆ ₹50 ಕೋಟಿ

ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿಕೆ
Last Updated 17 ಜೂನ್ 2019, 13:19 IST
ಅಕ್ಷರ ಗಾತ್ರ

ವಿಜಯಪುರ: ‘ಕೊಲ್ಹಾರಪಟ್ಟಣದ ಅಭಿವೃದ್ಧಿಗೆ ಇಲ್ಲಿಯವರೆಗೆ ₹80 ಕೋಟಿ ಅನುದಾನ ಬಂದಿದ್ದು, ಎರಡು ದಿನಗಳ ಹಿಂದೆ ₹50 ಕೋಟಿ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ’ ಎಂದು ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ ಹೇಳಿದರು.

ಪಟ್ಟಣದಲ್ಲಿ ಕೊಲ್ಹಾರಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಭಾನುವಾರ ಆಯೋಜಿಸಿದ್ದ ಅಂಜುಮನ್ ಕಾಂಪ್ಲೆಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೊಲ್ಹಾರ ತಾಲ್ಲೂಕು ಕೇಂದ್ರ ಎಂದು ಘೋಷಣೆಯಾಗಿದ್ದು, ತಾಲ್ಲೂಕು ಕಚೇರಿಗಳು ಹಂತ ಹಂತವಾಗಿ ಸ್ಥಾಪನೆಯಾಗಲಿವೆ. ಬಸವನ ಬಾಗೇವಾಡಿಯ ನಂತರ ಕೊಲ್ಹಾರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಾಲ್ಲೂಕು ಆಗಬೇಕು ಎಂಬುದು ನನ್ನ ಆಸೆಯಾಗಿದೆ. ಕೊಲ್ಹಾರ ಪುನರ್‌ ರ್ನಿರ್ಮಾಣ ಮಾಡಿರುವ ಊರು. ಇದರ ಅಭಿವೃದ್ಧಿ ನನ್ನೊಬ್ಬನಿಂದ ಮಾತ್ರ ಸಾಧ್ಯವಿಲ್ಲ, ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.

‘ಕೊಲ್ಹಾರ ಅಂಜುಮನ್ ಸಂಸ್ಥೆಯು ಕಡುಬಡವರಿಗೆ ಆಶ್ರಯ ತಾಣವಾಗಿದ್ದು, ₹ 2 ಸಾವಿರಕ್ಕೆ ಮಳಿಗೆ ನೀಡುತ್ತಿರುವುದು ಸಂತಸದ ವಿಷಯ. ಉಸ್ಮಾನ್ ಪಟೇಲರು ಯಾವುದೇ ಕಪ್ಪು ಚುಕ್ಕೆ ಇಲ್ಲದೇ 21 ವರ್ಷಗಳಿಂದ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ತಮ್ಮ ತನು, ಮನ ಹಾಗೂ ಧನ ಎಲ್ಲವನ್ನೂ ಸಮರ್ಪಣೆ ಮಾಡಿದ್ದಾರೆ’ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಹಾಸಿಂಪೀರ್ ವಾಲಿಕಾರ ಮಾತನಾಡಿ, ‘ಕೊಲ್ಹಾರದ ಅಂಜುಮನ್ ಸಂಸ್ಥೆ ಅರ್ಥಪೂರ್ಣ ಕೆಲಸ ಮಾಡುತ್ತಿದೆ. ಬಸವಾದಿ ಶರಣರು, ಪ್ರವಾದಿಗಳ ಸಂದೇಶಗಳು ಹಾಗೂ ಅವರ ಆದರ್ಶಗಳು ನಮಗೆ ದಾರಿ ದೀಪವಾಗಿವೆ. ಸಚಿವ ಶಿವಾನಂದ ಪಾಟೀಲ ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಅಲ್ಪಸಂಖ್ಯಾತರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

ಕಮಿಟಿ ಅಧ್ಯಕ್ಷ ಉಸ್ಮಾನ ಎಂ.ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಾನಕಾ ಗಫಾರಿಯಾ ಪೀಠಾಧ್ಯಕ್ಷ ಡಾ.ಭಕ್ತಿಯಾರಖಾನ್ ಪಠಾಣ ಸಾನ್ನಿಧ್ಯ ವಹಿಸಿದ್ದರು. ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ದೇವರು ಮಾತನಾಡಿದರು.

ಮುಖಂಡರಾದ ರಫೀಕ್ ಟಪಾಲ, ಜಮ್ಮೀರ ಅಹ್ಮದ್ ಬಾಗಲಕೋಟ, ರಜಾಕ್ ಹೊರ್ತಿ, ಇಕ್ಬಾಲ್ ದಫೇದಾರ, ಮೈನುದ್ದೀನ ನಬಿವಾಲೆ, ಖಾಜಾ ಬಂದೇನವಾಜ್ ಸಾಂಗಲಿಕರ, ಆರ್.ಬಿ.ಪಕಾಲಿ, ಎನ್.ಎಲ್.ಹೊನ್ಯಾಳ, ಆರ್.ಡಿ.ಸೌದಾಗರ, ಎಂ.ಬಿ.ಬಿಜಾಪುರ, ಬಿ.ಯು.ಗಿಡ್ಡಪ್ಪಗೋಳ, ಎಸ್.ಬಿ.ಪತಂಗಿ, ಸಿ.ಎಂ.ಗಣಕುಮಾರ, ಪಿ.ಕೆ.ಗಿರಗಾಂವಿ, ಗೈಬುಸಾಬ್ ಕಂಕರಪೀರ, ಅಯ್.ಎನ್.ತಹಶಿಲ್ದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT