ಮಂಗಳವಾರ, ನವೆಂಬರ್ 19, 2019
25 °C
ಎಸಿಬಿ ತನಿಖೆಗೆ ಮಾಹಿತಿ ಆಯುಕ್ತ ಎನ್.ಪಿ. ರಮೇಶ್ ಆದೇಶ

ಆಸ್ತಿ ಕಬಳಿಸಲು ನೋಂದಣಿ ಪುಸ್ತಕ ತಿದ್ದಿದರು!

Published:
Updated:
Prajavani

ಬೆಂಗಳೂರು: ಬೊಮ್ಮನಹಳ್ಳಿ ಉಪನೋಂದಣಾಧಿಕಾರಿ ಕಚೇರಿಯಲ್ಲಿನ ನೋಂದಣಿ ಕಡತವನ್ನೇ ತಿದ್ದಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಲು ಪ್ರಯತ್ನಿಸಿರುವ ‌ಪ್ರಕರಣವನ್ನು ಪತ್ತೆಹಚ್ಚಿರುವ ಮಾಹಿತಿ ಆಯೋಗ, ಸಮಗ್ರ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಆದೇಶ ಮಾಡಿದೆ.

ನಲ್ಲೂರಹಳ್ಳಿ ಗ್ರಾಮದ ಸರ್ವೆ ನಂಬರ್ 70 ಮತ್ತು 73/2ರಲ್ಲಿ ರೈತರಾದ ಗುರುವಾರೆಡ್ಡಿ, ಸುಂದರ ರಾಮರೆಡ್ಡಿ, ಕೃಷ್ಣರಾಮರೆಡ್ಡಿ, ಚಿನ್ನಮ್ಮ, ರಾಮರೆಡ್ಡಿ, ವೆಂಕಟೇಶಪ್ಪ, ರತ್ನಮ್ಮ, ನಾರಾಯಣರೆಡ್ಡಿ ಮತ್ತು ಜಯರಾಮರೆಡ್ಡಿ ಎಂಬವರಿಂದ 1995ರಲ್ಲಿ ಎಚ್‌.ಜೆ. ಶಿವಾನಿ ಮತ್ತು ಎಂ.ಜೆ. ಶಿವಾನಿ ಹಾಗೂ ಇತರರು ಒಟ್ಟು 9 ಎಕರೆ ಖರೀದಿ ಮಾಡಿದ್ದರು.

ಆಸ್ತಿ ನೋಂದಣಿ ಮಾಡುವಾಗ ಎಲ್ಲರ ಹೆಬ್ಬೆರಳಿನ ಗುರುತುಗಳನ್ನು ನೋಂದಣಿ ಪುಸ್ತಕದಲ್ಲಿ ಪಡೆಯಲಾಗಿದೆ. ಬಳಿಕ ಈ ಜಾಗವನ್ನು ನಿವೇಶನವಾಗಿ ಪರಿವರ್ತಿಸಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನೂ ಕಟ್ಟಲಾಗಿದೆ.

2018ರ ಜುಲೈ 24ರಂದು ಇದೇ ಜಮೀನನ್ನು ಸಿ. ರಾಜಪ್ಪ ಹಾಗೂ ಇತರ ಐವರು ಸೇರಿ ಬಿ.ಕೆ.ಮೋಹನಕುಮಾರ್ ಮತ್ತು ರಾಮುಗೌಡ ಎಂಬುವವರಿಗೆ ಮಾರಾಟ ಮಾಡಲು ಕ್ರಯಪತ್ರ ನೋಂದಾಯಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಎ. ವಸೀಗರನ್ ಎಂಬುವರು ಜಮೀನಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಪಡೆದುಕೊಳ್ಳಲು ಮುಂದಾದರು.

ಹೆಬ್ಬೆರಳಿನ ಗುರುತಿರುವ ನೋಂದಣಿ ಪುಸ್ತಕ ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರು. ಉಪ ನೋಂದಣಾಧಿಕಾರಿ ಕಚೇರಿ ಅಧಿಕಾರಿಗಳು ಮಾಹಿತಿ ಒದಗಿಸದ ಕಾರಣ ರಾಜ್ಯ ಮಾಹಿತಿ ಆಯೋಗಕ್ಕೆ ಅವರು ಮೇಲ್ಮನವಿ ಸಲ್ಲಿಸಿದರು. ಉಪನೋಂದಣಾಧಿಕಾರಿಗೆ ಸಮನ್ಸ್‌ ಜಾರಿ ಮಾಡಿದ ಮಾಹಿತಿ ಆಯುಕ್ತ ಎನ್.ಪಿ. ರಮೇಶ್ ಅವರು, ಎಲ್ಲಾ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು.

ಈ ಸಂಬಂಧ 2019ರ ಆಗಸ್ಟ್ 13ರಂದು ಉಪನೋಂದಣಾಧಿಕಾರಿ ವಿವರಣೆ ನೀಡಿದ ಬಳಿಕ ಶಿವಾನಿ
ಕುಟುಂಬದವರು ಈ ಜಮೀನು ಖರೀದಿ ಮಾಡುವ ಮೊದಲೇ 1989ರಲ್ಲೇ ರಾಜಪ್ಪ ಹಾಗೂ ಇತರರು ಖರೀದಿ ಮಾಡಿದ್ದಾರೆ ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬಯಲಿಗೆ ಬಂದಿದೆ.

‘ಹೆಬ್ಬೆರಳಿನ ಗುರುತು ನಮೂದು ಮಾಡುವ ಪುಸ್ತಕದಲ್ಲಿ ರಾಜಪ್ಪ ಹಾಗೂ ಇತರರ ಹೆಸರು ಇಲ್ಲ. ನಿತ್ಯದ ವಹಿವಾಟಿನ ನೋಂದಣಿ ಪುಸ್ತಕದಲ್ಲಿ ಮಾತ್ರ ದಾಖಲಿಸಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಕ್ರಯಪತ್ರವನ್ನು ಅಧಿಕಾರಿಗಳು ಮಾಡಿಕೊಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಉಪನೋಂದಣಾಧಿಕಾರಿ ಅವರು ವರದಿ ನೀಡಿದ್ದಾರೆ.

‘ಉಪ‍ನೋಂದಣಾಧಿಕಾರಿ ಮತ್ತು ಕಚೇರಿಯ ಭ್ರಷ್ಟ ಸಿಬ್ಬಂದಿ ಸೇರಿ ನೋಂದಣಿ ಪುಸ್ತಕವನ್ನು ತಿದ್ದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಭೂಮಿಕಬಳಿಸಲು ಸಂಚು ನಡೆಸಿರುವ ಸಾಧ್ಯತೆ ಇದೆ. ನಿಜವಾದ ಭೂಮಿ ಮಾಲೀಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುವ ಪ್ರಯತ್ನವೂ ಇದ್ದಂತಿದೆ’ ಎಂದು ಮಾಹಿತಿ ಆಯೋಗ ಅನುಮಾನಿಸಿದೆ.

‘ಕ್ರಿಮಿನಲ್ ಪ್ರಕರಣ ದಾಖಲಿಸಿ’

‘ಸಾರ್ವಜನಿಕರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಂರಕ್ಷಣೆ ಮಾಡುವುದು ಉಪನೋಂದಣಾಧಿಕಾರಿಯ ಕರ್ತವ್ಯ. ಅದರಲ್ಲಿ ಅವರು ವಿಫಲರಾಗಿದ್ದಾರೆ’ ಎಂದು ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.

ಕಚೇರಿಯಲ್ಲಿರುವ ನೋಂದಣಿ ಪುಸ್ತಕವನ್ನು ತಿದ್ದಲು ಅವಕಾಶ ಮಾಡಿಕೊಟ್ಟಿರುವ ಕಾರಣ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮೇಲೆ ಜನರಿಗೆ ನಂಬಿಕೆ ಕಡಿಮೆಯಾಗಿದೆ. ಇದಕ್ಕೆ ಇಲ್ಲಿನ ಅಧಿಕಾರಿಗಳೇ ಕಾರಣ. ಅಕ್ರಮವಾಗಿ ಕ್ರಯಪತ್ರ ಮಾಡಿಕೊಟ್ಟಿರುವ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಮತ್ತು ಇಲಾಖಾ ತನಿಖೆ ನಡೆಸಬೇಕು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದೆ.

***

ನೋಂದಣಿ ಪುಸ್ತಕದಲ್ಲಿ ಇದ್ದ ಖಾಲಿ ಜಾಗದಲ್ಲಿ ಬೇರೆಯವರ ಹೆಸರು ಸೇರಿಸಿರುವುದು ಅಕ್ರಮ. ಭೂಮಿ ಕಬಳಿಸಲು ನಡೆಸಿರುವ ಸಂಚು ಇದಾಗಿದೆ.

– ಎನ್.ಪಿ. ರಮೇಶ್, ಮಾಹಿತಿ ಆಯುಕ್ತ

ಪ್ರತಿಕ್ರಿಯಿಸಿ (+)