ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಮಿಟ್ ಕೊಡುತ್ತಿದ್ದ ನಕಲಿ ಆರ್‌ಟಿಒ ಸೆರೆ

Last Updated 20 ಡಿಸೆಂಬರ್ 2018, 20:42 IST
ಅಕ್ಷರ ಗಾತ್ರ

ಬೆಂಗಳೂರು: ಶಾಂತಿನಗರ ಪ್ರಾದೇಶಿಕ ಸಾರಿಗೆ ಅಧಿಕಾರಿಯ (ಆರ್‌ಟಿಒ) ಸಹಿ ನಕಲು ಮಾಡಿ ಆಟೊ ಪರ್ಮಿಟ್ ಕೊಡಿಸುತ್ತಿದ್ದ ಆರೋಪಿಗಳಿಬ್ಬರು ಕೋರಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಪಾದರಾಯನಪುರದ ಇಲಿಯಾಸ್ ಪಾಷಾ (31) ಹಾಗೂ ಶಿವಾರೆಡ್ಡಿಲೇಔಟ್‌ನ ಕೆ.ಆನಂದ್ (28) ಬಂಧಿತರು. ಆರೋಪಿಗಳಿಂದ ನಕಲಿ ಸೀಲು ಹಾಗೂ ಪರ್ಮಿಟ್ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇಬ್ಬರೂ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದಾರೆ.

ಕೋಲಾರದ ಪಾಷಾಗೆ, ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿರುವ ಆನಂದ್‌ನ ಪರಿಚಯವಾಗಿತ್ತು. ಸುಲಭವಾಗಿ ಹಣ ಸಂಪಾದಿಸುವ ಸಲುವಾಗಿ ಇಬ್ಬರೂ ಈ ಅಕ್ರಮಕ್ಕೆ ಕೈ ಹಾಕಿದ್ದರು.

ಆರಂಭದಲ್ಲಿ ಕೋರಮಂಗಲ, ಜಯನಗರ, ರಾಜಾಜಿನಗರ, ಇಂದಿರಾನಗರ, ಯಶವಂತಪುರ, ಯಲಹಂಕ, ಕೆ.ಆರ್.ಪುರ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಜ್ಞಾನಭಾರತಿ ಆರ್‌ಟಿಒ ಕಚೇರಿಗಳಲ್ಲಿ ಆಟೊಗಳಿಗೆ ಪರವಾನಗಿ ನೀಡಲಾಗುತ್ತಿತ್ತು. ನಗರದಲ್ಲಿ ಆಟೊಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಶಾಂತಿನಗರದಲ್ಲಿ 2011ರ ಡಿಸೆಂಬರ್ 1ರಂದು ಪ್ರತ್ಯೇಕ ಆರ್‌ಟಿಒ ಕಚೇರಿ ತೆರೆಯಲಾಯಿತು. ಅಂದಿನಿಂದ ಆಟೊಗಳ ಪರವಾನಗಿ, ಅದರ ನವೀಕರಣ, ವರ್ಗಾವಣೆ ಮತ್ತು ವಾಹನ ಬದಲಾವಣೆಯ ನಡಾವಳಿಗಳನ್ನು ಇದೇ ಕಚೇರಿಯಲ್ಲೇ ನೀಡಲಾಗುತ್ತಿತ್ತು.

ಬದಲಾದ ಈ ವ್ಯವಸ್ಥೆಯನ್ನೇ ದುರುಪಯೋಗ ಮಾಡಿಕೊಂಡ ಇಲಿಯಾಸ್, ಹಳೆ ನಡಾವಳಿಗಳನ್ನು ಸಂಗ್ರಹಿಸಿ, ಆನಂದ್ ಬಳಿ ಕಲರ್ಸ್ ಜೆರಾಕ್ಸ್ ಮಾಡಿಸಿದ್ದ. ಆ ನಂತರ ಹೆಸರು, ವಾಹನ ಸಂಖ್ಯೆ ಟೈಪ್ ಮಾಡಿಸಿ ಹೊಸದಾಗಿ ನೋಂದಣಿಗೆ ಬರುತ್ತಿದ್ದ ಆಟೋ ಚಾಲಕರಿಗೆ ಕೊಟ್ಟು ₹ 20 ಸಾವಿರದಿಂದ ₹ 30 ಸಾವಿರದವರೆಗೆ ಪಡೆಯುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಶಾಂತಿನಗರ ಆರ್‌ಟಿಒ ಆಗಿದ್ದ (ಈಗ ನಿವೃತ್ತಿ) ಕೆ.ಪಿ.ಗಂಗಾಧರಾಚಾರ್ಯ ಅವರು ಆಟೊಗಳ ಪರವಾನಗಿ ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂದಿತ್ತು. ತಮ್ಮ ಸಹಿ ಹಾಗೂ ಮೊಹರನ್ನು ನಕಲು ಮಾಡಿದ್ದ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಇದೇ ಸೆಪ್ಟಂಬರ್‌ನಲ್ಲಿ ಕೋರಮಂಗಲ ಪೊಲೀಸರಿಗೆ ದೂರು ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT