ಬುಧವಾರ, ಡಿಸೆಂಬರ್ 11, 2019
27 °C

ಸಾರಿಗೆ ವಾಹನಗಳ ಮೇಲೆ ಜಾಹೀರಾತು ನಿರ್ಬಂಧ: ಸಂಚಾರ ನಿಯಮ ತಿದ್ದುಪಡಿಗೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಪಾರ್ಕಿಂಗ್‌ ನಿಷೇಧಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ, ವಾಹನಗಳನ್ನು ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡಿದರೆ ₹ 1,000 ದಂಡದಿಂದ ಹಿಡಿದು ಡ್ರೈವಿಂಗ್ ಲೈಸೆನ್ಸ್‌ ಅಮಾನತಿಗೆ ಅವಕಾಶವಾಗುವಂತೆ ಸಂಚಾರ ನಿಯಮಗಳಿಗೆ ತಿದ್ದುಪಡಿ ತರಲು ಸಾರಿಗೆ ಇಲಾಖೆ ಉದ್ದೇಶಿಸಿದೆ.

ವಾಹನಗಳ ಅರ್ಹತಾ ಪ್ರಮಾಣ ಪತ್ರ ಇಲ್ಲದಿದ್ದರೆ ₹ 2,000 (ಸದ್ಯ ಇದುವುದು ₹ 500), ಪದೇ ಪದೇ ತಪ್ಪು ಮಾಡುವವರು ₹ 5,000, ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ ₹ 1,000, ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದೆ ವಾಹನ ಚಲಾಯಿಸಿದರೆ ₹ 500 ದಂಡ ಹಾಕಲು ನಿಯಮದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಂಚಾರ ನಿಯಮಗಳಲ್ಲಿ ಮಾರ್ಪಾಡು ಮಾಡಲಾಗುತ್ತಿದೆ ಎಂದು ಸಾರಿಗೆ ಆಯುಕ್ತ ವಿ.ಪಿ. ಇಕ್ಕೇರಿ ತಿಳಿಸಿದರು. 

ನಿಷೇಧಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ತೆಲಂಗಾಣದಲ್ಲಿ ಇರುವಂತೆ ವಾಹನ ಚಾಲನಾ ಪರವಾನಗಿ ಸಂಖ್ಯೆಗೆ ಪ್ರತಿ ಬಾರಿ ದಂಡ ಹಾಕಿದ ವಿವರಗಳನ್ನು ಸೇರ್ಪಡೆ ಮಾಡುವ ಉದ್ದೇಶವಿದೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೇ ಎಂಬ ಪ್ರಶ್ನೆಗೆ, ಪ್ರಸ್ತಾವ ಅಂತಿಮಗೊಂಡ ಬಳಿಕ ನಿಮಗೆ ಎಲ್ಲವೂ ಗೊತ್ತಾಗಲಿದೆ ಎಂದು ಇಕ್ಕೇರಿ ಹೇಳಿದರು. ಈಗಾಗಲೇ ಪ್ರಸ್ತಾವ ಗೃಹ ಇಲಾಖೆ ಹಾಗೂ ಮುಖ್ಯಮಂತ್ರಿ ಕಚೇರಿಗೆ ಹೋಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಹೊಣೆ ಪೊಲೀಸರ ಮೇಲಿರುವುದರಿಂದ ಗೃಹ ಇಲಾಖೆಯ ಸಹಮತ ಅಗತ್ಯವಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ವಾಹನ ಚಾಲನೆ ಮಾಡುವವರು ಎಸಗುವ ಪ್ರಮಾದಗಳಿಗೆ ವಿಧಿಸಲಾಗುತ್ತಿರುವ ದಂಡವನ್ನು 2007ರಲ್ಲಿ ನಿಗದಿಪಡಿಸಲಾಗಿದೆ. ದಂಡದ ಪ್ರಮಾಣ ಕಡಿಮೆ ಇರುವುದರಿಂದ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ದಂಡದ ಪ್ರಮಾಣ ಹೆಚ್ಚಿಸುವ ಮೂಲಕ ಬಿಸಿ ಮುಟ್ಟಿಸುವ ಅಗತ್ಯವಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸಾರಿಗೆ ವಾಹನಗಳ ಮೇಲೆ ಜಾಹೀರಾತು ನಿರ್ಬಂಧ

ಸಾರಿಗೆ ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸುವುದನ್ನು ನಿರ್ಬಂಧಿಸಿರುವ ಸಾರಿಗೆ ಇಲಾಖೆ, ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದೆ.

‘ಕರ್ನಾಟಕ ಮೋಟರು ವಾಹನಗಳ ನಿಯಮ’ದ ಪ್ರಕಾರ ಆಟೊ, ಸರಕು ಸಾಗಣೆ ವಾಹನ, ಬಸ್, ಟ್ಯಾಕ್ಸಿ ಹಾಗೂ ಇತರ ಸಾರಿಗೆ ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸುವಂತಿಲ್ಲ. ಯಾರಾದರೂ ಅಳವಡಿಸಿದ್ದರೆ ಅವುಗಳನ್ನು ತೆರವು ಮಾಡಬೇಕು’ ಎಂದು ಸಾರಿಗೆ ಇಲಾಖೆಯ ಆಯುಕ್ತ ವಿ.ಪಿ. ಇಕ್ಕೇರಿ ತಿಳಿಸಿದ್ದಾರೆ.

‘ಜಾಹೀರಾತು ಪ್ರದರ್ಶಿಸಬೇಕಾದಲ್ಲಿ, ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಪಡೆಯದೆ ಸಾರಿಗೆ ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸಿದ್ದಲ್ಲಿ, ಅಂಥ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಜಾಹೀರಾತು ತೆರವು: ಆಯುಕ್ತರು ಸೂಚನೆ ನೀಡುತ್ತಿದ್ದಂತೆ ಶುಕ್ರವಾರ ಸಂಜೆ ಕಾರ್ಯಾಚರಣೆ ನಡೆಸಿದ ಸಾರಿಗೆ ಅಧಿಕಾರಿಗಳು, ಆಟೊಗಳ ಮೇಲೆ ಅಳವಡಿಸಿದ್ದ ಜಾಹೀರಾತುಗಳನ್ನು ತೆರವುಗೊಳಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು