ಭಾನುವಾರ, ನವೆಂಬರ್ 17, 2019
24 °C

ನಗರಾಭಿವೃದ್ಧಿ ಇಲಾಖೆ ಎಸಿಎಸ್‌ಗೆ ಹೈಕೋರ್ಟ್‌ ತರಾಟೆ

Published:
Updated:

ಬೆಂಗಳೂರು: ‘ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕಾರಣವಾಗುವ ಅಧಿಕಾರಿಗಳಿಗೆ ವಿಧಿಸಲಾಗುವ ಶಿಕ್ಷೆ ಹೇಗಿರಬೇಕು, ಯಾವ ಪ್ರಮಾಣದಲ್ಲಿರಬೇಕು ಎಂಬ ಬಗ್ಗೆ ಸರ್ಕಾರ, ಈವರೆಗೂ ಯಾವುದೇ ಮಾರ್ಗಸೂಚಿ ಅಥವಾ ಅಧಿಸೂಚನೆ ಹೊರಡಿಸಿಲ್ಲ’ ಎಂದು ಆಕ್ಷೇಪಿಸಲಾದ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್‌, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ಇ.ವಿ. ರಮಣ ರೆಡ್ಡಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ವಕೀಲ ಎಸ್.ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ನ್ಯಾಯಾಲಯದ ಆದೇಶ ಉಲ್ಲಂಘಿಸಿರುವ ಕಾರಣ ನಿಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಕಾಯ್ದೆ–1971ರ ಅಡಿಯಲ್ಲಿ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ವಿವರಣೆ ನೀಡಿ’ ಎಂದು ನ್ಯಾಯಪೀಠ, ರೆಡ್ಡಿ ಅವರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

‘ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಾರಣವಾಗುವ ಅಧಿಕಾರಿಗಳಿಗೆ ಕೆಎಂಸಿ ಕಾಯ್ದೆಯ ಕಲಂ 321 ಬಿ ಅಡಿಯಲ್ಲಿ ದಂಡ ಹಾಗೂ ಶಿಕ್ಷೆ ನಿಗದಿಪಡಿಸಿ ಎಂದು ಕೋರ್ಟ್‌ ಇದೇ 3ರಂದು ಆದೇಶಿಸಿತ್ತು. ಆದರೆ, ಎಸಿಎಸ್ ಬೇರೆ ಏನನ್ನೋ ಹೇಳುತ್ತಿದ್ದಾರೆ’ ಎಂದು ನ್ಯಾಯಪೀಠ ಕಿಡಿ ಕಾರಿತು. ‘ಅಕ್ಟೋಬರ್‌ 10ರೊಳಗೆ ಸೂಕ್ತ ಅಧಿಸೂಚನೆ ಹೊರಡಿಸಬೇಕು, ಇಲ್ಲವಾದರೆ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಕೋರಿಕೆ ಏನು?: ‘ಖಾಸಗಿ ಸ್ವತ್ತುಗಳಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಅಧಿಕಾರಿಗಳನ್ನು, ಕರ್ನಾಟಕ ಪೌರಾಡಳಿತ ಕಾಯ್ದೆ–1976ರ ಕಲಂ 321 ಬಿ ಅನ್ವಯ ದಂಡನೀಯ ಶಿಕ್ಷೆಗೆ ಗುರಿಪಡಿಸಲು ಇರುವ ವಿವರಗಳನ್ನು ವಿಶದಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಪ್ರತಿಕ್ರಿಯಿಸಿ (+)