ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತ ವಲಯದಲ್ಲಿ ಅಭದ್ರತೆ: ಮೇಧಾ ಪಾಟ್ಕರ್

‘ಪವಿತ್ರ ಆರ್ಥಿಕತೆಗಾಗಿ ಹೋರಾಡೋಣ–ಗೆಲ್ಲೋಣ’
Last Updated 1 ಡಿಸೆಂಬರ್ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಇಂದು ಸಂಘಟಿತ ವಲಯವೂ ತೀವ್ರ ಸಂಕಟ ಎದುರಿಸುತ್ತಿದೆ. ಉದ್ಯೋಗಿಗಳೂ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಸಂಘಟಿತ ವಲಯವು ತನ್ನ ರಕ್ಷಣೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಪರ್ಯಾಯ ಆರ್ಥಿಕತೆ ರೂಪಿಸುವ ಅವಶ್ಯಕತೆ ಇದೆ’ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಹೇಳಿದರು.

ಗ್ರಾಮ‌ ಸೇವಾ ಸಂಘವು ‘ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ದುಡಿಯುವ ವರ್ಗದಲ್ಲಿ ಶೇ 90ರಷ್ಟಿರುವ ಅಸಂಘಟಿತ ಕಾರ್ಮಿಕರ ಶಕ್ತಿಯನ್ನು ಬದಿಗೆ ತಳ್ಳಲಾಗುತ್ತಿದೆ. ರಾಜಕೀಯ ಅಧಿಕಾರವೇ ಪ್ರಮುಖವಾಗಿದೆ. ಸುಸ್ಥಿರ ಆರ್ಥಿಕ ನೀತಿ ರೂಪಿಸಲು ಕಾರ್ಮಿಕ ಸಂಘಟನೆಗಳು, ರೈತ ಸಂಘಗಳು ಒಟ್ಟಿಗೆ ಹೋರಾಡಬೇಕಾದ ಸಮಯ ಬಂದಿದೆ.ಪವಿತ್ರ ಆರ್ಥಿಕತೆಗಾಗಿ ಎಲ್ಲರೂ ಹೋರಾಡಿ, ಗೆಲ್ಲಬೇಕಾಗಿದೆ’ ಎಂದರು.

ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ, ‘ಪವಿತ್ರ ಆರ್ಥಿಕತೆಯ ಹೋರಾಟ ಎನ್ನುವುದಕ್ಕಿಂತ ಇದನ್ನು ಸಮಗ್ರ ಆರ್ಥಿಕತೆಗಾಗಿನ ಹೋರಾಟ ಎನ್ನಬಹುದು. ಅಹಿಂಸೆ ಮತ್ತು ಸಾತ್ವಿಕ ಶಕ್ತಿಯ ಹೋರಾಟದ ಮೂಲಕ ಈ ಪರ್ಯಾಯ ಆರ್ಥಿಕ ವ್ಯವಸ್ಥೆ ರೂಪಿಸಬೇಕಾಗಿದೆ’ ಎಂದು ಹೇಳಿದರು.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ‘ಪವಿತ್ರ ಆರ್ಥಿಕತೆಯು ಸಮಾಜದ ದುಡಿಯುವ ವರ್ಗಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಒತ್ತಾಯಿಸುತ್ತದೆ. ಈ ವರ್ಗಕ್ಕೆ ಶೂನ್ಯ ತೆರಿಗೆ ಬೆಂಬಲಕ್ಕಾಗಿ ನಡೆಯುತ್ತಿರುವ ಈ ಹೋರಾಟ ಯಶಸ್ವಿಯಾಗಬೇಕು’ ಎಂದು ಹೇಳಿದರು.

ದೇಸಿ ಸಂಸ್ಥೆಯ ಸಂಸ್ಥಾಪಕ ಪ್ರಸನ್ನ, ‘ನಮ್ಮ ಸತ್ಯಾಗ್ರಹ ಈವರೆಗೆ ಯಶಸ್ವಿಯಾಗಿದೆ. ಕೇಂದ್ರ ಸರ್ಕಾರವು ಗ್ರಾಮ ಸೇವಾ ಸಂಘವನ್ನು ಮಾತುಕತೆಗೆ ಆಹ್ವಾನಿಸಿದೆ. ನಮ್ಮ ಈ ಹೋರಾಟ ಯಶಸ್ವಿಯಾದರೆ ದುಡಿಯುವ ವರ್ಗದ ಘನತೆ ಹೆಚ್ಚಲಿದೆ. ಜತೆಗೆ, ಪರಿಸರದ ಘನತೆಯೂ ಹೆಚ್ಚಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT