ಪತ್ನಿ ಕೊಂದು ತಾನೂ ಕಟ್ಟಡದಿಂದ ಹಾರಿದ

ಮಂಗಳವಾರ, ಏಪ್ರಿಲ್ 23, 2019
31 °C
ಅಣ್ಣನ ಮಗ ಕಾಲೇಜಿಗೆ ಹೋಗುತ್ತಿದ್ದಂತೆ ದಂಪತಿ ಜಗಳ l ಸಾಕು ನಾಯಿ ಜೊತೆಗೇ ಪ್ರಾಣಬಿಟ್ಟ ಉದ್ಯಮಿ

ಪತ್ನಿ ಕೊಂದು ತಾನೂ ಕಟ್ಟಡದಿಂದ ಹಾರಿದ

Published:
Updated:
Prajavani

ಬೆಂಗಳೂರು: ಪತ್ನಿ ಮಮತಾ (53) ಅವರನ್ನು ಡಂಬಲ್ಸ್‌ನಿಂದ ಹೊಡೆದು ಕೊಂದ ಅತುಲ್ ಉಪಾಧ್ಯೆ (55) ಎಂಬ ಉದ್ಯಮಿ, ನಂತರ ಸಾಕು ನಾಯಿಯನ್ನು ಅಪಾರ್ಟ್‌ಮೆಂಟ್‌ ಸಮುಚ್ಚಯದ 6ನೇ ಮಹಡಿಯಿಂದ ಎಸೆದು ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸದಾಶಿವನಗರದ 8ನೇ ಮುಖ್ಯರಸ್ತೆಯಲ್ಲಿರುವ ‘ದಿ ಅನೆಕ್ಸ್ ಸೈಕಾನ್ ಪೊಲಾರೀಸ್’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

ಮಹಾರಾಷ್ಟ್ರದ ದಂಪತಿ, 25 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಅತುಲ್ ಹಲಸೂರಿನಲ್ಲಿ ಸ್ವಂತ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರು. ಮಮತಾ ಗೃಹಿಣಿ.

‘ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಫ್ಲ್ಯಾಟ್‌ನಲ್ಲಿ ದಂಪತಿ ವಾಸವಿದ್ದರು. ಮಂಗಳವಾರ ಬೆಳಿಗ್ಗೆ ಅವರಿಬ್ಬರ ನಡುವೆ ಜಗಳ ಶುರುವಾಗಿತ್ತು.

ಪರಿಸ್ಥಿತಿ ವಿಕೋಪಕ್ಕೆ ಹೋಗು ತ್ತಿದ್ದಂತೆ ಅತುಲ್, ಡಂಬಲ್ಸ್‌ನಿಂದ ಮಮತಾ ಅವರ ತಲೆಗೆ ಹೊಡೆದಿದ್ದರು. ತೀವ್ರ ರಕ್ತಸ್ರಾವದಿಂದ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಸದಾಶಿವನಗರ ಠಾಣೆ ಪೊಲೀಸರು ಹೇಳಿದರು.

‘ಪತ್ನಿ ಮೃತಪಡುತ್ತಿದ್ದಂತೆ ಅತುಲ್‌, ಸಾಕು ನಾಯಿಯನ್ನು ತನ್ನ ಜೊತೆಗೆ ಕರೆದುಕೊಂಡು ಕಟ್ಟಡದ ಆರನೇ ಮಹಡಿಗೆ ಹೋಗಿದ್ದರು. ಮೊದಲು ನಾಯಿಯನ್ನು ತಳ್ಳಿ, ಅದರ ಹಿಂದೆಯೇ ತಾವೂ ಹಾರಿ ಪ್ರಾಣ ಬಿಟ್ಟರು. ನಾಯಿಯೂ ಸ್ಥಳದಲ್ಲೇ ಮೃತಪಟ್ಟಿತು’ ಎಂದು ವಿವರಿಸಿದರು.

ಅಣ್ಣನ ಮಗ ಕಾಲೇಜಿಗೆ ಹೋಗುತ್ತಿದ್ದಂತೆ ಜಗಳ: ‘ಅತುಲ್ ಅವರ ಅಣ್ಣನ ಮಗ, ನಗರದ ಕಾಲೇಜೊಂದರಲ್ಲಿ ಎಲ್‌ಎಲ್‌ಬಿ ಓದುತ್ತಿದ್ದಾನೆ. ದಂಪತಿಯ ಜೊತೆಗೇ ಆತ ವಾಸವಿದ್ದ. ಮಂಗಳವಾರ ಬೆಳಿಗ್ಗೆ ಆತ ಕಾಲೇಜಿಗೆ ಹೋಗುತ್ತಿದ್ದಂತೆ ದಂಪತಿ ನಡುವೆ ಜಗಳ ಶುರುವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಘಟನೆ ಬಗ್ಗೆ ಅಣ್ಣನ ಮಗನಿಂದ ಮಾಹಿತಿ ಪಡೆಯಲಾಗಿದೆ. ಕೌಟುಂಬಿಕ ಕಲಹದಿಂದ ದಂಪತಿ ಪದೇ ಪದೇ ಜಗಳ ಮಾಡುತ್ತಿದ್ದರು ಎಂದು ಆತ ಹೇಳಿದ್ದಾನೆ. ಅದನ್ನು ಪರಿಶೀಲಿಸುತ್ತಿದ್ದೇನೆ’ ಎಂದು ತಿಳಿಸಿದರು. 

ಸಂಬಂಧಿಕರಿಗೆ ಮಾಹಿತಿ: ‘ಅತುಲ್‌, ಮಮತಾ ಹಾಗೂ ಅಣ್ಣನ ಮಗ ಮಾತ್ರ ಮನೆಯಲ್ಲಿದ್ದರು. ಅವರಿಗೆ ನಗರದಲ್ಲಿ ಸಂಬಂಧಿಕರು ಯಾರೂ ಇಲ್ಲ. ಮಮತಾ ಅವರ ಸಹೋದರಿ ಅಮೆರಿಕದಲ್ಲಿದ್ದು, ಘಟನೆ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇವೆ’ ಎಂದು ಅಧಿಕಾರಿ ಹೇಳಿದರು.‘ಇಬ್ಬರ ಶವಗಳನ್ನು ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸಹೋದರಿ ನಗರಕ್ಕೆ ಬಂದ ಬಳಿಕವೇ ಅವರ ಅನುಮತಿ ಪಡೆದು ಮರಣೋತ್ತರ ಪರೀಕ್ಷೆ ನಡೆ
ಸಲಿದ್ದೇವೆ’ ಎಂದು ವಿವರಿಸಿದರು.

ಕ್ಯಾನ್ಸರ್‌ನಿಂದ ಬೇಸತ್ತಿದ್ದಾಗಿ ‍ಪತ್ರ ಬರೆದಿಟ್ಟ 

‘ಅತುಲ್ ಅವರ ಫ್ಲ್ಯಾಟ್‌ನಲ್ಲಿ ಮರಣ ಪತ್ರ ಸಿಕ್ಕಿದೆ.‘ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅದರ ನೋವು ತಾಳಲಾಗುತ್ತಿಲ್ಲ. ಹೀಗಾಗಿ, ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಪತ್ರದಲ್ಲಿ ಬರೆಯಲಾಗಿದೆ’ ಎಂದು ಪೊಲೀಸ್‌ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮರಣಪತ್ರದಲ್ಲಿ ಬರೆಯಲಾಗಿದೆ.

ಆದರೆ, ಅತುಲ್ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಸಾಕು ನಾಯಿಯನ್ನು ಕೊಂದಿದ್ದಾರೆ. ಅದರ ಹಿಂದಿನ ಉದ್ದೇಶವೇನು ಎಂಬುದು ತಿಳಿಯುತ್ತಿಲ್ಲ.

ಈ ಪ್ರಕರಣದಲ್ಲಿ ಸಾಕಷ್ಟು ಗೊಂದಲಗಳಿದ್ದು, ತನಿಖೆಯಿಂದ ನಿಖರ ಮಾಹಿತಿ ಗೊತ್ತಾಗಬೇಕಿದೆ’ ಎಂದರು.

ನಾಯಿ ಜೊತೆಗೆ ಹೆಚ್ಚು ಒಡನಾಟ 

‘ಅತುಲ್ ಅವರು ನಾಯಿ ಜೊತೆಗೇ ಹೆಚ್ಚು ಒಡನಾಟವಿಟ್ಟುಕೊಂಡಿದ್ದರು. ವಾಯುವಿಹಾರ ಹಾಗೂ ಕಚೇರಿಗೆ ಹೋಗುವಾಗಲೂ ಜೊತೆಗೇ ಕರೆದೊಯ್ಯುತ್ತಿದ್ದರು. ಈ ಬಗ್ಗೆ ಅಪಾರ್ಟ್‌ಮೆಂಟ್‌ ಸಮುಚ್ಚಯದ ಮನೆಗೆಲಸದವರು ಹೇಳಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಪತ್ನಿಯನ್ನೇ ಕೊಂದಿದ್ದ ಅತುಲ್, ‘ನಾಯಿಯನ್ನು ಒಂಟಿಯಾಗಿ ಬಿಟ್ಟು ಹೋದರೆ ಅದನ್ನು ನೋಡಿಕೊಳ್ಳುವವರು ಯಾರೂ ಇರುವುದಿಲ್ಲ’ ಎಂಬ ಕಾರಣಕ್ಕೆ ಅದನ್ನೂ ಸಾಯಿಸಿ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 11

  Sad
 • 0

  Frustrated
 • 6

  Angry

Comments:

0 comments

Write the first review for this !