ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತೆ: ಸರ್ಕಾರಿ ಬಸ್‌ಗೆ ಪ್ರಯಾಣಿಕರ ಆದ್ಯತೆ

4,699 ಹಳ್ಳಿಗಳಿಗೆ ಬೇಕು ಕೆಎಸ್‌ಆರ್‌ಟಿಸಿ ಬಸ್‌
Last Updated 2 ಡಿಸೆಂಬರ್ 2018, 17:30 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯದಕನಗನಮರಡಿಯಲ್ಲಿ ನಾಲೆಗೆ ಬಸ್‌ ಉರುಳಿದ ಬಳಿಕ ಖಾಸಗಿ ಬಸ್‌ಗಳ ಬಗ್ಗೆ ಜನರ ಆತಂಕ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಓಡಿಸಬೇಕು ಎಂಬ ಬೇಡಿಕೆಯೂ ಕೇಳಿಬರತೊಡಗಿದೆ. ಆದರೆ, ರಾಜ್ಯದ 20,792 ಹಳ್ಳಿಗಳ ಪೈಕಿ 4,699 ಹಳ್ಳಿಗಳಿಗೆ ಇನ್ನೂ ಕೆಎಸ್‌ಆರ್‌ಟಿಸಿ ಸಂಪರ್ಕ ಸಿಕ್ಕಿಲ್ಲ.

ಖಾಸಗಿ ಬಸ್‌ ಮಾಲೀಕರ ಲಾಬಿ, ಅವರಿಗೆ ಪರವಾನಗಿ ನೀಡಲಾದ ಕಡೆ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಸಮಯದ ಹೊಂದಾಣಿಕೆ ಆಗದಿರುವುದು, ನಷ್ಟವಾಗುವ ಆಗುವ ಆತಂಕದಿಂದಾಗಿ ಸಾರಿಗೆ ಸಂಸ್ಥೆ ಇಲ್ಲಿ ಸಂಪರ್ಕ ಕಲ್ಪಿಸುವ ಬಗ್ಗೆ ಹಿಂದೆ ಮುಂದೆ ನೋಡುತ್ತಿದೆ.

ಹಳ್ಳಿಗಳಿಗಿಲ್ಲ ಕೆಎಸ್‌ಆರ್‌ಟಿಸಿ: ಸಾರಿಗೆ ಸಂಸ್ಥೆ ಬಸ್‌ ಸಂಪರ್ಕ ತೀವ್ರ ಹಿನ್ನಡೆ ಕಂಡ ಜಿಲ್ಲೆಗಳ ಪೈಕಿ ಶಿವಮೊಗ್ಗ ಮೊದಲ ಸ್ಥಾನದಲ್ಲಿದೆ. ಇಲ್ಲಿ 1,538 ಹಳ್ಳಿಗಳಿವೆ. ರಾಷ್ಟ್ರೀಕೃತ ವಲಯದ ಮಾರ್ಗಗಳಲ್ಲಿ 12 ಹಳ್ಳಿಗಳು ಬರುತ್ತವೆ. ಈ ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಸಂಪರ್ಕ ಇದೆ. ರಾಷ್ಟ್ರೀಕೃತವಲ್ಲದ ವಲಯದಲ್ಲಿ 1,526 ಹಳ್ಳಿಗಳು ಇವೆ. ಇಲ್ಲಿ ಕೇವಲ 395 ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಸಂಪರ್ಕ ಇದೆ. 1,131 ಹಳ್ಳಿಗಳಿಗೆ ಇನ್ನೂ ಸಾರಿಗೆ ಬಸ್‌ ಸೌಲಭ್ಯ ಇಲ್ಲ.

ನಂತರದ ಸ್ಥಾನ ಚಿತ್ರದುರ್ಗದ್ದು. ಈ ಜಿಲ್ಲೆಯಲ್ಲಿ ಒಟ್ಟು 1,072 ಹಳ್ಳಿಗಳಿವೆ. ಇಲ್ಲಿನ ಎಲ್ಲ ರಾಷ್ಟ್ರೀಕೃತ ವಲಯದ ಮಾರ್ಗಗಳಲ್ಲಿ ಬರುವ ಎಲ್ಲ 60 ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಸಂಪರ್ಕ ಇದೆ. ರಾಷ್ಟ್ರೀಕೃತವಲ್ಲದ ವಲಯದಲ್ಲಿ 1,012 ಹಳ್ಳಿಗಳಿವೆ. ಈ ಪೈಕಿ 446 ಹಳ್ಳಿಗಳಿಗೆ ಮಾತ್ರ ಸಾರಿಗೆ ಬಸ್‌ ಸೌಕರ್ಯ ಇದೆ. 566 ಹಳ್ಳಿಗಳಿಗೆ ಇನ್ನೂ ಈ ಬಸ್‌ಗಳು ಸಂಚರಿಸುತ್ತಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 376 ಹಳ್ಳಿಗಳ ಪೈಕಿ 148 ರಾಷ್ಟ್ರೀಕೃತ ವಲಯದ ಮಾರ್ಗಗಳಿವೆ. ಈ ಮಾರ್ಗಗಳಲ್ಲಿ ಬಸ್‌ ಸಂಚಾರ ಇದೆ. ರಾಷ್ಟ್ರೀಕೃತವಲ್ಲದ ವಲಯಗಳಲ್ಲಿ 228 ಹಳ್ಳಿಗಳಿವೆ. ಇಲ್ಲಿ 117 ಹಳ್ಳಿಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ. 111 ಹಳ್ಳಿಗಳಿಗೆ ಈ ಬಸ್‌ಗಳ ಸಂಪರ್ಕ ಇಲ್ಲ. ಅತ್ಯಂತ ಕನಿಷ್ಠವೆಂದರೆ ಉಡುಪಿ ಜಿಲ್ಲೆಯ ರಾಷ್ಟ್ರೀಕೃತ ವಲಯದಲ್ಲಿ ಬರುವ ಹಳ್ಳಿಗಳು. ಇಲ್ಲಿ 267 ಹಳ್ಳಿಗಳ ಪೈಕಿ ಕೇವಲ 3 ಹಳ್ಳಿಗಳು ರಾಷ್ಟ್ರೀಕೃತ ವಲಯಗಳಲ್ಲಿ ಬರುತ್ತವೆ. ಈ ಮಾರ್ಗಗಳಲ್ಲಿ ಬಸ್‌ಗಳು ಓಡಾಡುತ್ತಿವೆ. ರಾಷ್ಟ್ರೀಕೃತವಲ್ಲದ ವಲಯದಲ್ಲಿ 264 ಹಳ್ಳಿಗಳಿವೆ. ಇಲ್ಲಿ 96 ಹಳ್ಳಿಗಳಿಗೆ ಮಾತ್ರ ಕೆಸ್‌ಆರ್‌ಟಿಸಿಸಿ ಸಾರಿಗೆ ಸಂಪರ್ಕ ಸಿಕ್ಕಿದೆ. 168 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಬೇಕಿದೆ.

ರಾಜ್ಯಕ್ಕೆ ಏರಿಯಾ ಸ್ಕೀಂ ಜಾರಿ?: ಕೆಎಸ್‌ಆರ್‌ಟಿಸಿ ಕಾನೂನು ವಿಭಾಗದ ಮೂಲಗಳ ಪ್ರಕಾರ, ‘ರಾಜ್ಯದಲ್ಲಿ ಉತ್ತರ ಕರ್ನಾಟಕವನ್ನು ಏಕಸ್ವಾಮ್ಯ ವಲಯ ಎಂದು ಘೋಷಿಸಲಾಗಿದೆ. ಉಳಿದ ಪ್ರದೇಶದಲ್ಲಿ ಏಕಸ್ವಾಮ್ಯ ಹಾಗೂ ಏಕಸ್ವಾಮ್ಯವಲ್ಲದ ಮಾರ್ಗಗಳಿವೆ. ಏಕಸ್ವಾಮ್ಯವಲ್ಲದ ಮಾರ್ಗಗಳಲ್ಲಿ ಸ್ಟೇಜ್‌ ಕ್ಯಾರಿಯೇಜ್‌ ಪರವಾನಗಿ ಪಡೆದು ಖಾಸಗಿಯವರು ಬಸ್‌ ಓಡಿಸುತ್ತಿದ್ದಾರೆ’ ಎಂದು ಹೇಳಿವೆ.

‘ಈ ದ್ವಂದ್ವಗಳ ಬದಲಿಗೆ ಇಡೀ ಕರ್ನಾಟಕವನ್ನೇ ಪ್ರದೇಶ ಯೋಜನೆ (ಏರಿಯಾ ಸ್ಕೀಂ) ಅಡಿ ತರಬೇಕು ಎಂದು ಹಿಂದಿನ ಸರ್ಕಾರ ನಿರ್ಧರಿಸಿತ್ತು. ಆಗ ಇಡೀ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸಂಸ್ಥೆಯ ಬಸ್‌ಗಳನ್ನು ಓಡಿಸಬಹುದು. ಏರಿಯಾ ಸ್ಕೀಂ ಜಾರಿಗೊಳಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ’ ಎಂದು ಸಂಸ್ಥೆಯ ಮೂಲಗಳು ಹೇಳಿವೆ.

**

ಪರವಾನಗಿ ಸಿಕ್ಕರೆ ಬಸ್‌ ಓಡಿಸುತ್ತೇವೆ
ರಾಷ್ಟ್ರೀಕೃತ ಮಾರ್ಗದಲ್ಲಿ ಮಾತ್ರ ಕೆಎಸ್‌ಆರ್‌ಟಿಸಿ ನೇರವಾಗಿ ಬಸ್‌ ಓಡಿಸಬಹುದು. ಇಂಥ ಎಲ್ಲ ಮಾರ್ಗಗಳಲ್ಲಿ ನಮ್ಮ ಬಸ್‌ಗಳು ಓಡುತ್ತಿವೆ. ರಾಷ್ಟ್ರೀಕೃತವಲ್ಲದ ಮಾರ್ಗದಲ್ಲಿ ಬಸ್‌ ಓಡಿಸಬೇಕಾದರೆ ಸಾರಿಗೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಯ (ಸಾರಿಗೆ ಪ್ರಾಧಿಕಾರದ ಅಧ್ಯಕ್ಷ) ಪರವಾನಗಿ ಬೇಕಾಗುತ್ತದೆ. ಕೆಲವು ಭಾಗಗಳಲ್ಲಿ ಸಾರಿಗೆ ಬಸ್‌ ಓಡಾಟಕ್ಕೆ ಪರವಾನಗಿ ಸಿಗುತ್ತಿಲ್ಲ.

ಕೆಲವೆಡೆ ಸಾರಿಗೆ ಬಸ್‌ ಮತ್ತು ಖಾಸಗಿ ಬಸ್‌ ಎರಡಕ್ಕೂ ಪರವಾನಗಿ ನೀಡಲಾಗುತ್ತದೆ. ಈ ಸಮಸ್ಯೆ ನಿವಾರಿಸಿ ಪರವಾನಗಿ ನೀಡಿದರೆ ಬಸ್‌ ಓಡಿಸಲು ಅಡ್ಡಿಯಿಲ್ಲ ಎಂದು ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌.ಉಮಾಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT