ಬಿಬಿಎಂಪಿ ಆ್ಯಪ್‌ನಿಂದ ಜನರಿಗಿಲ್ಲ ‘ಸಹಾಯ’

ಭಾನುವಾರ, ಮೇ 26, 2019
33 °C
ಸಾರ್ವಜನಿಕರ ದೂರುಗಳನ್ನು ಕಾರಣವಿಲ್ಲದೇ ತಿರಸ್ಕರಿಸುತ್ತಿರುವ ಅಧಿಕಾರಿಗಳು

ಬಿಬಿಎಂಪಿ ಆ್ಯಪ್‌ನಿಂದ ಜನರಿಗಿಲ್ಲ ‘ಸಹಾಯ’

Published:
Updated:
Prajavani

ಬೆಂಗಳೂರು: ಬೆಂಗಳೂರಿನ ನಾಗರಿಕರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸ್ಪಂದಿಸಲು ಬಿಬಿಎಂಪಿ ಬಿಡುಗಡೆ ಮಾಡಿದ್ದ ‘ಸಹಾಯ’ ಆ್ಯಪ್‌ನಿಂದ ಜನರಿಗೆ ಸಹಾಯವಾಗುತ್ತಿಲ್ಲ. ಈ ಆ್ಯಪ್‌ ಮೂಲಕ ಜನ ಸಮಸ್ಯೆ ಹೇಳಿಕೊಂಡರೂ, ಕಾರಣವಿಲ್ಲದೆಯೇ ದೂರಗಳನ್ನು ತಿರಸ್ಕರಿಸಲಾಗುತ್ತಿದೆ.

ಸಮಸ್ಯೆ ಹೇಳಿಕೊಳ್ಳಲು ಜನ ಪಾಲಿಕೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 2016ರ ಜನವರಿಯಲ್ಲಿ ಬಿಬಿಎಂಪಿ ‘ಸಹಾಯ’ ಆ್ಯಪ್‌ ಅನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 20ಕ್ಕೂ ಹೆಚ್ಚು ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಈ ಆ್ಯಪ್‌ ಮೂಲಕವೇ ದೂರು ನೀಡಲು ಅವಕಾಶ ಕಲ್ಪಿಸಿತ್ತು. ‘ನಾಗರಿಕರು ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೂ ತಂತ್ರಾಂಶದ ವೇದಿಕೆ ಕಲ್ಪಿಸಿದ ದೇಶದ ಮೊದಲ ನಗರಾಡಳಿತ ಸಂಸ್ಥೆ’ ಎಂಬ ಹೆಗ್ಗಳಿಕೆಗೂ ಪಾಲಿಕೆ ಪಾತ್ರವಾಗಿತ್ತು.

ಆ್ಯಪ್‌ ಬಿಡುಗಡೆಯಾದ ಪ್ರಾರಂಭದಲ್ಲಿ ನಗರದ ಬೇರೆ ಬೇರೆ ಭಾಗಗಳಿಂದ ನಿತ್ಯ 600ಕ್ಕೂ ಹೆಚ್ಚು ದೂರುಗಳು ಬರುತ್ತಿದ್ದವು. ಬಹುತೇಕ ದೂರುಗಳು ವಿಲೇವಾರಿಯಾಗಿದ್ದವು. ಆದರೆ ಇತ್ತೀಚೆಗೆ ದೂರುಗಳ ಸಂಖ್ಯೆ 300 ದಾಟುತ್ತಿಲ್ಲ. ಹಾಗಂತ ನಗರದಲ್ಲಿ ಸಮಸ್ಯೆಗಳು ಕಡಿಮೆಯಾಗಿವೆ ಎಂದರ್ಥವಲ್ಲ. ಆ್ಯಪ್‌ ಮೂಲಕ ಸಮಸ್ಯೆ ಹೇಳಿಕೊಂಡರೂ ಅವುಗಳನ್ನು ಬಗೆಹರಿಸಲು ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ ಎನ್ನುವ ಕಾರಣಕ್ಕೆ ಸಾರ್ವಜನಿಕರೇ ದೂರು ನೀಡಲು ಹಿಂಜರಿಯುತ್ತಿದ್ದಾರೆ.

‘ಆ್ಯಪ್‌ಗೆ ಬರುವ ದೂರುಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ದೂರು ನೀಡಿದ ಸ್ವಲ್ಪ ದಿನದ ಬಳಿಕ ಆ್ಯಪ್‌ನಲ್ಲಿ ನೋಡಿದಾಗ ಇತ್ಯರ್ಥಗೊಳಿಸಲಾಗಿದೆ ಎಂದು ತೋರಿಸುತ್ತದೆ. ಆದರೆ ಸಮಸ್ಯೆ ಮಾತ್ರ ಹಾಗೆಯೇ ಇರುತ್ತದೆ’ ಎಂದು ಬಳಕೆದಾರರು ದೂರುತ್ತಾರೆ.

‘ವಾರ್ಡ್‌ನಲ್ಲಿ ಬೀದಿದೀಪ ಹಾಳಾಗಿರುವ ಕುರಿತು 2016ರಲ್ಲಿ ದೂರು ನೀಡಿದ್ದೆ. ಮೂರು ವರ್ಷವಾದರೂ ಸಮಸ್ಯೆ ಬಗೆಹರಿದಿಲ್ಲ. ಸಂಬಂಧಿಸಿದ ಅಧಿಕಾರಿಗೆ ಕರೆ ಮಾಡಿದರೂ ಸರಿಯಾಗಿ ಸ್ಪಂದಿಸುವುದಿಲ್ಲ. ಕಚೇರಿಗೆ ಭೇಟಿ ನೀಡಿ ಲಿಖಿತ ದೂರು ನೀಡುವಂತೆ ತಿಳಿಸುತ್ತಾರೆ’ ಎಂದು ಅರಕೆರೆಯ ರಾಹುಲ್‌ ಅಳಲು ತೋಡಿಕೊಂಡರು.

‘ಒಮ್ಮೊಮ್ಮೆ ದೂರಿನ ಮಾಹಿತಿ ಸಂಬಂಧಿಸಿದ ಅಧಿಕಾರಿಗಳನ್ನು ತಲುಪುವುದೇ ಇಲ್ಲ. ಅಧಿಕಾರಿಗಳು ಸಹ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿರುತ್ತಾರೆ. ಹೀಗಿರುವಾಗ ಆ್ಯಪ್‌ನ ಅಗತ್ಯ ಏನಿದೆ’ ಎಂದು ಪ್ರಶ್ನಿಸುತ್ತಾರೆ ಜೆ.ಪಿ.ನಗರ ವಾರ್ಡ್‌ನ ನಿವಾಸಿ ಮುರುಳಿ.

‘ಆ್ಯಪ್‌ ಏನೋ ಚೆನ್ನಾಗಿದೆ. ಆದರೆ ದೂರು ಇತ್ಯರ್ಥಗೊಳಿಸಬೇಕಾದ ಪಾಲಿಕೆಯ ಅಧಿಕಾರಿಗಳಿಗೆ ಈ ಬಗ್ಗೆ ಆಸಕ್ತಿ ಇಲ್ಲ. ಈ ಕಾರಣಕ್ಕೆ ಸರ್ಕಾರಿ ಅಧಿಕಾರಿಗಳ ಕುರಿತು ಜನರಲ್ಲಿ ಅಸಹನೆ ಹೆಚ್ಚುತ್ತಿದೆ’ ಎಂದು ಶಾಕಾಂಬರಿನಗರ ವಾರ್ಡ್‌ನ ನಿವಾಸಿ ಧರ್ಮರಾಯ ತಿಳಿಸಿದರು.

‘15 ದಿನಗಳ ಅಂತರದಲ್ಲಿ ಒಂದೇ ಸಮಸ್ಯೆಯ ಕುರಿತು ಎರಡು ಪ್ರತ್ಯೇಕ ದೂರುಗಳನ್ನು ಪೋಸ್ಟ್‌ ಮಾಡಿದ್ದೇನೆ. ಸಂದೇಶವನ್ನು ಮಾತ್ರ ಕಳುಹಿಸಿದ್ದಾರೆ. ಅಧಿಕಾರಿಗಳು ಈ ದೂರಿನ ಕುರಿತು ಸೌಜನ್ಯಕ್ಕೂ ಗಮನಹರಿಸಿಲ್ಲ. ಸಂಬಂಧಿಸಿದ ಅಧಿಕಾರಿಗೆ ಫೋನ್‌ ಮಾಡಿದರೆ, ರಾಂಗ್‌ ನಂಬರ್‌ ಎಂದು ಉತ್ತರಿಸುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದೊಂದು ದೊಡ್ಡ ಜೋಕ್‌!
‘ಸಹಾಯ’ ಆ್ಯಪ್‌ನಿಂದ ತಮಗಾದ ಅನುಭವವನ್ನು ಭೌಮಿಕ್‌ ಚೋಕ್ಸಿ ಅವರು ಇತ್ತೀಚೆಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

'ಮುಖ್ಯ ರಸ್ತೆ ಕಾಮಗಾರಿವೊಂದರ ಕುರಿತು ‘ಸಹಾಯ’ ಆ್ಯಪ್‌ ಮೂಲಕ ದೂರು ನೀಡಿದ್ದೆ ( ದೂರಿನ ಸಂಖ್ಯೆ 10854330). ಕೆಲವು ದಿನ ಬಿಟ್ಟು ಅದರ ಸ್ಥಿತಿ ಪರೀಕ್ಷಿಸಿದಾಗ ಅಧಿಕಾರಿಗಳು ಕಾರಣವಿಲ್ಲದೇ ಅದನ್ನು ತಿರಸ್ಕರಿಸಿದ್ದರು. ಇದು ದೊಡ್ಡ ಜೋಕ್‌’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ತಾಂತ್ರಿಕ ಕಾರಣದಿಂದ ತಿರಸ್ಕೃತ’
‘ಆ್ಯಪ್‌ ಮೂಲಕ ಬಂದ ಪ್ರತಿಯೊಂದು ದೂರನ್ನು ಸಂಬಂಧಿಸಿದ ಅಧಿಕಾರಿಗೆ ವರ್ಗಾಯಿಸುತ್ತೇವೆ. ಅವರು ಸಮಸ್ಯೆಯನ್ನು ಪರಿಹರಿಸುತ್ತಾರೆ. ಕೆಲವೊಮ್ಮೆ ತಾಂತ್ರಿಕ ತೊಂದರೆ ಕಾರಣಕ್ಕೆ ದೂರು ಅಂತ್ಯಗೊಂಡಿರಬಹುದು. ಲೋಪಗಳಿದ್ದರೆ ಪರಿಶೀಲಿಸಿ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದೂರುಗಳ ಮಾಹಿತಿ (2019)
ತಿಂಗಳು: ದೂರುಗಳ ಸಂಖ್ಯೆ
ಜನವರಿ:
4,800
ಫೆಬ್ರುವರಿ: 5,320
ಮಾರ್ಚ್‌: 6,540
ಏಪ್ರಿಲ್: 7,150

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !