ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಬೋರಿಗೆ ಮೊರೆಹೋದ ರೈತರು

ನದಿ ಮರಳಿನಲ್ಲಿ ಸಾಂದ್ರಗೊಂಡ ನೀರೆತ್ತಲು ಹೊಸ ತಂತ್ರಜ್ಞಾನ
Last Updated 30 ಮೇ 2019, 19:45 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಬಿಸಿಲ ಝಳ ದಿನ ಕಳೆದಂತೆ ಹೆಚ್ಚುತ್ತಿದೆ. ನದಿ ತೊರೆಗಳಲ್ಲಿ ಒಸರುತ್ತಿದ್ದ ಒರತೆ ನೀರು ಸದ್ದಿಲ್ಲದೇ ಒಣಗುತ್ತಿದೆ. ಪ್ರಾಣಿ ಪಕ್ಷಿಗಳು, ಜಾನುವಾರುಗಳು ಬಾಯಾರಿಕೆ ತಣಿಸಿಕೊಳ್ಳಲು ನೀರನ್ನು ಅರೆಸುವ, ಅಲೆದಾಟ ನಡೆಸುವಂಥ ಸ್ಥಿತಿ ಮಲೆನಾಡಿನಲ್ಲಿ ಎದುರಾಗಿರುವುದು ಆತಂಕ ಮೂಡಿಸಿದೆ.

ಜೀವನದಿಗಳಾದ ತುಂಗಾ, ಮಾಲತಿ, ಕುಶಾವತಿ ಹೊಳೆ, ಕುಂಟೇಹಳ್ಳ, ಗೋಪಿನಾಥ ಹಳ್ಳ ಸಂಪೂರ್ಣ ಬತ್ತಿವೆ. ನದಿ, ತೊರೆ, ಹಳ್ಳದ ಒಡಲ ಮರಳ ರಾಶಿಯಲ್ಲಿ ಅಂತರ್ಗಾಮಿಯಾಗಿರುವ ನೀರನ್ನು ಮರಳು (ಕೊಳವೆ ಬಾವಿ) ಬೋರು ಕೊರೆವ ಮೂಲಕ ಮೇಲಕ್ಕೆತ್ತಲಾಗುತ್ತಿದೆ. ಅಳಿದುಳಿದ ನೀರನ್ನೂ ಬಳಕೆ ಮಾಡಿಕೊಳ್ಳುವ ಕೆಲಸಕ್ಕೆ ರೈತರು ಅನಿವಾರ್ಯವಾಗಿ ಕೈಹಾಕುವಂತಾಗಿದೆ. ತಾಲ್ಲೂಕಿನಾದ್ಯಂತ ಸಾವಿರಕ್ಕೂ ಹೆಚ್ಚು ಮರಳು ಬೋರುಗಳು ಸಕ್ರಿಯವಾಗಿವೆ.

ಸುಮಾರು 12 ವರ್ಷಗಳ ಹಿಂದೆ ತಾಲ್ಲೂಕಿನ ಆರಗ ಗೇಟಿನ ಶಾಂತಕುಮಾರ್ ಅವರು ಮರಳಿನಲ್ಲಿ ಸಂಗ್ರಹಗೊಂಡ ನೀರನ್ನು ಮೇಲಕ್ಕೆತ್ತುವ ಹೊಸ ತಂತ್ರಜ್ಞಾನವನ್ನು ಪ್ರಥಮ ಬಾರಿಗೆ ಕಂಡು ಹಿಡಿದಿದ್ದರು. ಮರಳು ರಾಶಿಯಲ್ಲಿ ಸುಮಾರು 8-10 ಅಡಿ ಆಳಕ್ಕೆ 4 ಇಂಚಿನ ಪಿವಿಸಿ ಪೈಪ್‌ ಅನ್ನು ತೂರಿಸಿ, ಪೈಪಿನ ತಳ ಭಾಗದಲ್ಲಿ ಗಾಜಿನ ಗೋಲಿಗಳನ್ನು ಅಳವಡಿಸಿ, ಪೈಪಿನ ಸುತ್ತಲೂ ರಂಧ್ರ ನಿರ್ಮಿಸಲಾಗುತ್ತದೆ. ನೀರಿನ ಲಭ್ಯತೆ ನೋಡಿಕೊಂಡು ವಿದ್ಯುತ್ ಪಂಪ್ ಜೋಡಿಸಲಾಗುತ್ತದೆ. ಮರಳು ರಾಶಿಯ ತಳಭಾಗದಲ್ಲಿ ಗಟ್ಟಿ ಮಣ್ಣು ಸಿಗುವವರೆಗೆ ಪೈಪು ತೂರಿಸಿ ಮರಳು ರಾಶಿಯ ಸುತ್ತಲೂ ಸಂಗ್ರಹಗೊಂಡ ನೀರನ್ನು ಮೇಲಕ್ಕೆತ್ತಿ ಜಮೀನಿಗೆ ಹಾಯಿಸಲಾಗುತ್ತದೆ.

ಮಲೆನಾಡಿನಲ್ಲಿ ಮರಳು ಬೋರು ಕೊರೆಸುವ ಪದ್ಧತಿ ಈಚಿನ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ಭೀಕರ ಬರಗಾಲ ಎದುರಾದಾಗ ಎಲ್ಲಿಯೂ ನೀರು ಸಿಗದೇ ಇದ್ದಾಗ ಅನಿವಾರ್ಯವಾಗಿ ರೈತರು ಮರಳು ಬೋರಿನ ಮೊರೆ ಹೋಗುತ್ತಾರೆ. 10-12 ಸಾವಿರ ಖರ್ಚು ಮಾಡಿ ಬೆಳೆ ಒಣಗುವುದನ್ನು ತಡೆಯುವ ಯತ್ನ ನಡೆಸುತ್ತಾರೆ. ಯಾವ ಭಾಗದಲ್ಲಿ ಎಷ್ಟು ನೀರು ಸಿಗಬಹುದು ಎಂಬುದನ್ನು ಜಲ ತಜ್ಞರು ಅಂದಾಜಿಸುತ್ತಾರೆ.

ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಿಕೆ ಗುಡ್ಡಗಳ ತಪ್ಪಲಿನ ತಂಪಿರುವಲ್ಲಿ (ಸರಕಲು) ಬೆಳೆಯುವ ಪದ್ಧತಿ ಈಗ ಉಳಿದಿಲ್ಲ. ಖುಷ್ಕಿ ಭೂಮಿಗೆ ನೀರು ಲಭ್ಯವಿದ್ದರೆ ಸಾಕು ಎಷ್ಟು ಬೇಕಾದರೂ ಅಡಿಕೆ ಬೆಳೆಯಬಹುದು ಎಂಬುದನ್ನು ಮನದಟ್ಟು ಮಾಡಿಕೊಂಡ ಬಹುತೇಕ ರೈತರು ಮಲೆನಾಡಿನ ಬೆಟ್ಟಗುಡ್ಡಗಳಲ್ಲಿ ಅಡಿಕೆ ಬೆಳೆಯಲು ಮುಂದಾಗಿರುವುದು ನೀರಿನ ತೀವ್ರ ಕೊರತೆ ಉಂಟಾಗಲು ಕಾರಣವಾಗುತ್ತಿದೆ ಎಂಬ ಆರೋಪ ಎದುರಾಗಿದೆ.

ಕೃಷಿ ಭೂಮಿಗೆ ನೀರುಣಿಸಲು ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಅಧಿಯಲ್ಲಿ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವ ಯೋಜನೆ ತಂದಿರುವುದು ರೈತರಿಗೆ ವರವಾಗಿದ್ದರೂ ನದಿಯಲ್ಲಿನ ನೀರು ಬರಿದು ಮಾಡಲು ಪ್ರಮುಖ ಕಾರಣವಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಜಮೀನಿಗೆ ಹಾಯಿಸುತ್ತಿರುವುದರಿಂದ ದಿನದಿಂದ ದಿನಕ್ಕೆ ನೀರು ಕಡಿಮೆಯಾಗಲು ಕಾರಣವಾಗುತ್ತಿದೆ. ವಿದ್ಯುತ್ ಪೂರೈಕೆ ಇರುವಾಗೆಲ್ಲಾ ಪಂಪುಗಳು ಚಾಲನೆಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಆಟೊ ಸ್ಟಾರ್ಟರ್ ಅಳವಡಿಕೆ ಮಾಡಿರುವುದರಿಂದ ಜಮೀನಿಗೆ ಸದಾ ನೀರು ಹರಿಯುತ್ತಲೇ ಇರುತ್ತದೆ. ಇದರಿಂದಾಗಿ ನೀರಿನ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚುತ್ತಿದೆ. ಈ ಕುರಿತು ಬಹುತೇಕ ರೈತರು ಯೋಚಿಸುತ್ತಿಲ್ಲ. ರೈತರು ಎಚ್ಚರಿಕೆಯಿಂದ ನೀರನ್ನು ಬಳಕೆ ಮಾಡಿಕೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

‘ತುಂಗಾ ನದಿಯೊಂದರಲ್ಲಿಯೇ ಲಕ್ಕಕ್ಕೂ ಹೆಚ್ಚು ಪಂಪುಗಳನ್ನು ನೀರೆತ್ತಲು ಅಳವಡಿಸಲಾಗಿದೆ. ನದಿಯಿಂದ ಹತ್ತಾರು ಕಿಲೋಮೀಟರ್ ದೂರದವರೆಗೆ ಪೈಪ್ ಲೈನ್ ಅಳವಡಿಸಿ ನೀರನ್ನು ಸಾಗಿಸಲಾಗುತ್ತಿದೆ. ಕೆಲ ಶ್ರೀಮಂತ ರೈತರು 20ಕ್ಕೂ ಹೆಚ್ಚು ಅಶ್ವಶಕ್ತಿಯ ಹತ್ತಾರು ಪಂಪುಗಳನ್ನು ಅಳವಡಿಸಿಕೊಂಡಿದ್ದಾರೆ. ನದಿಯಿಂದ ಅಸಾಂಪ್ರದಾಯಕವಾಗಿ ನೀರೆತ್ತುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಕೆಲ ರೈತರು ವಿದ್ಯುತ್ ಬದಲಿಗೆ ಜನರೇಟರ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಿತಿ ಮೀರಿದ ಅಡಿಕೆ ತೋಟಗಳ ನಿರ್ಮಾಣ ಜೀವ ನದಿಗೆ ಕುತ್ತು ತರಲು ಕಾರಣವಾಗಿದೆ’ ಎನ್ನುತ್ತಾರೆ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಕೀಗಡಿ ಕೃಷ್ಣಮೂರ್ತಿ.

‘ಮರಳು ಬೋರು ಅಪಾಯಕಾರಿಯಲ್ಲ. ಸಣ್ಣ ಸಣ್ಣ ನೀರಿನ ಸಂಗ್ರಹವನ್ನು ಬಳಸಿಕೊಳ್ಳುವ ಹೊಸ ತಂತ್ರಜ್ಞಾನ. ಇದರಿಂದ ಸಣ್ಣ ರೈತರಿಗೆ ತುಂಬಾ ಉಪಯೋಗವಾಗುತ್ತಿದೆ. ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ’ ಎಂಬ ಅಭಿಪ್ರಾಯವನ್ನು ಪ್ರಗತಿಪರ ಚಿಂತಕ, ಪರಿಸರ ಪ್ರೇಮಿ ನೆಂಪೆ ದೇವರಾಜ್ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT