ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಿಗೇಹಳ್ಳಿಯ ‘ಗಂಧದ ಕೋಟೆ’ ಕೆಡವಿದ ಪೊಲೀಸರು!

ಬಂದೂಕು ಹಿಡಿದು ಗ್ರಾಮಕ್ಕೆ ನುಗ್ಗಿದ 150 ಪೊಲೀಸರು
Last Updated 5 ಜನವರಿ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಕೋಟೆಯ ಕಟ್ಟಿಗೇಹಳ್ಳಿಯಲ್ಲಿ ತಮ್ಮದೇ ಕೋಟೆ ಕಟ್ಟಿಕೊಂಡು ‘ರಕ್ತಚಂದನ ಮಾಫಿಯಾ’ ನಡೆಸುತ್ತಿದ್ದ ಈ ತಂದೆ–ಮಗ, ತಮ್ಮನ್ನು ಬಂಧಿಸಲು ಬರುವ ಖಾಕಿಧಾರಿಗಳನ್ನು ಗ್ರಾಮಸ್ಥರ ಮೂಲಕ ಬೆದರಿಸಿ ಓಡಿಸುತ್ತಿದ್ದರು. ಆದರೆ, ಶನಿವಾರ ನಸುಕಿನಲ್ಲಿ ಶಸ್ತ್ರಸಜ್ಜಿತರಾಗಿ ನುಗ್ಗಿದ 150ಕ್ಕೂ ಹೆಚ್ಚು ಪೊಲೀಸರ ಬೃಹತ್ ಪಡೆ, ಕೊನೆಗೂ ಆ ಕೋಟೆಯನ್ನು ಛಿದ್ರಗೊಳಿಸಿದೆ.

ಕೆಲ ದಿನಗಳ ಹಿಂದೆ ವಿಧಾನಸೌಧ, ರಾಜಭವನ, ಹೈಕೋರ್ಟ್ ಸುತ್ತಮುತ್ತಲ ಸೂಕ್ಷ್ಮ ಪ್ರದೇಶಗಳಲ್ಲೇ ರಕ್ತಚಂದನದ ಮರಗಳು ಕಳವಾಗಿದ್ದವು. ಈ ಪ್ರಕರಣದ ಬೆನ್ನುಹತ್ತಿದ ಕೇಂದ್ರ ವಿಭಾಗದ ಪೊಲೀಸರ ತಂಡ, ಕಬ್ಬನ್‌ಪಾರ್ಕ್‌ನಲ್ಲಿ ಕಾಲಿಗೆ ಗುಂಡು ಹೊಡೆದು ಕೆಲ ಆರೋಪಿಗಳನ್ನು ಬಂಧಿಸಿತ್ತು. ವಿಚಾರಣೆ ನಡೆಸಿದಾಗ ಅವರು ಸೈಯದ್ ರಿಯಾಜ್ (58) ಹಾಗೂ ಆತನ ಮಗ ಸೈಯದ್ ಷೇರ್ ಅಲಿಯ (33) ಹೆಸರು ಬಾಯ್ಬಿಟ್ಟಿದ್ದರು.

ರಿಯಾಜ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಕುಟುಂಬ ಎರಡು ದಶಕಗಳಿಂದಲೂ ಗಂಧದ ಮರ ಕಳವು ದಂಧೆಯಲ್ಲಿ ತೊಡಗಿದೆ. ಕಟ್ಟಿಗೇಹಳ್ಳಿ ಗ್ರಾಮದ ಬಹುತೇಕರು, ಮಾಫಿಯಾದ ಜತೆ ಕೈ ಜೋಡಿಸಿದ್ದಾರೆ. ಇದರಿಂದಾಗಿ ತಂದೆ–ಮಗನನ್ನು ಬಂಧಿಸಲು ಪೊಲೀಸರು ಹಳ್ಳಿಯೊಳಗೆ ಕಾಲಿಟ್ಟರೆ, ಸ್ಥಳೀಯರೇ ಗೆರಿಲ್ಲಾ ಮಾದರಿ ದಾಳಿ ನಡೆಸಿ ಓಡಿಸುತ್ತಿದ್ದರು. ವಾರದ ಹಿಂದೆ ವಾಹನ ಗುದ್ದಿಸಿ ನಾಲ್ವರು ಪಿಎಸ್‌ಐಗಳನ್ನೂ ಕೊಲ್ಲಲು ಯತ್ನಿಸಿದ್ದರು.

ಅವರ ದಾಳಿಯ ಬಗ್ಗೆ ಅರಿತ ಕೇಂದ್ರ ವಿಭಾಗದ ಪೊಲೀಸರು, ಶುಕ್ರವಾರ ರಾತ್ರಿ ಶಸ್ತ್ರಾಸ್ತ್ರಗಳ ಸಮೇತ ಗ್ರಾಮಕ್ಕೆ ನುಗ್ಗಿದ್ದಾರೆ. ಮನೆ ಶೋಧ ನಡೆಸಿ 9 ಕೆ.ಜಿ ಗಂಧದ ಮರದ ಚಕ್ಕೆಗಳು, ₹ 35 ಲಕ್ಷ ನಗದು ಹಾಗೂ 350 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿ, ತಂದೆ–ಮಗನನ್ನೂ ಬಂಧಿಸಿ ಕರೆತಂದಿದ್ದಾರೆ.

ವ್ಯವಸ್ಥಿತ ಜಾಲ: ಸಹಚರರ ಮೂಲಕ ಆಂಧ್ರಪ್ರದೇಶ, ತಮಿಳುನಾಡು, ರಾಜ್ಯದ ಬೆಂಗಳೂರು ಹಾಗೂ ತುಮಕೂರಿನಲ್ಲಿ ರಕ್ತಚಂದನದ ಮರಗಳನ್ನು ಕಳವು ಮಾಡಿಸುತ್ತಿದ್ದ ತಂದೆ–ಮಗ, ಅವುಗಳನ್ನು ಗಂಧದ ಎಣ್ಣೆ ಹಾಗೂ ಸೌಂದರ್ಯ ವರ್ಧಕ ತಯಾರಿಕಾ ಘಟಕಗಳಿಗೆ ಸಾಗಿಸಿ ಹಣ ಸಂಪಾದಿಸುತ್ತಿದ್ದರು.

ಎಲ್ಲೆಲ್ಲಿ ಮರಗಳಿವೆ ಎಂಬುವುದನ್ನು ಗುರುತಿಸುವ ಕೆಲಸಕ್ಕೇ ಕೆಲವರನ್ನು ನೇಮಿಸಿಕೊಂಡಿದ್ದ ಇವರು, ಬಿಬಿಎಂಪಿ ಮರ ಕತ್ತರಿಸುವ ಗುತ್ತಿಗೆ ತಂಡದಲ್ಲಿದ್ದ ಲಕ್ಷ್ಮಣ್ ಹಾಗೂ ರಂಗನಾಥ್ ಎಂಬುವರನ್ನೂ ತಮ್ಮ ಸಂಪರ್ಕಕ್ಕೆ ತೆಗೆದುಕೊಂಡಿದ್ದರು. ಅವರು ಹಳೇ ಮರಗಳನ್ನು ಕತ್ತರಿಸಲು ಹೋದಾಗ, ಗಂಧದ ಮರಗಳು ಕಂಡುಬಂದರೆ ತಂದೆ–ಮಗನಿಗೆ ಮಾಹಿತಿ ಕೊಡುತ್ತಿದ್ದರು. ಒಂದು ಮರ ತೋರಿಸಿದರೆ ಅವರಿಗೆ ತಂದೆ–ಮಗನಿಂದ ₹ 10 ಸಾವಿರ ಸಿಗುತ್ತಿತ್ತು.

ಆ ನಂತರ ತಮಿಳುನಾಡಿನ ಇಳಯರಾಜ, ಮಾದ, ರಾಜೇಂದ್ರ, ಸತ್ಯರಾಜ, ಗೋವಿಂದಸ್ವಾಮಿ, ಶಿವಲಿಂಗ ಎಂಬುವರನ್ನು ನಗರಕ್ಕೆ ಕರೆಸಿಕೊಳ್ಳುತ್ತಿದ್ದ ರಿಯಾಜ್ ಹಾಗೂ ಸೈಯದ್, ಮರ ಕತ್ತರಿಸಿಕೊಂಡು ಬರುವ ಜವಾಬ್ದಾರಿಯನ್ನು ಅವರಿಗೆ ವಹಿಸುತ್ತಿದ್ದರು. ಕೆಲಸ ಮುಗಿಸುವವರೆಗೂ ಈ ತಂಡಕ್ಕೆ ಹೊರವಲಯದಲ್ಲಿ ಆಶ್ರಯದ ವ್ಯವಸ್ಥೆ ಮಾಡುತ್ತಿದ್ದ ಆರೋಪಿಗಳು, ಮರ ಕತ್ತರಿಸುವ ಸಲಕರಣೆಗಳು ಹಾಗೂ ಅವುಗಳನ್ನು ಸಾಗಿಸಲು ತಾವೇ ವಾಹನವನ್ನೂ ಒದಗಿಸುತ್ತಿದ್ದರು.

ಸಿಐಡಿ ಕಚೇರಿ ಪಕ್ಕದಲ್ಲೇ ಇರುವ ಹೈಕೋರ್ಟ್ ನ್ಯಾಯಮೂರ್ತಿಗಳ ನಿವಾಸ, ಸೆವೆನ್ ಮಿನಿಸ್ಟರ್ಸ್‌ ಕ್ವಾರ್ಟರ್ಸ್‌ ಆವರಣ ಸೇರಿದಂತೆ ವರ್ಷದಲ್ಲಿ 19 ಕಡೆಗಳಲ್ಲಿ ಗಂಧದ ಮರಗಳನ್ನು ದೋಚಿದ್ದ ಈ ಗ್ಯಾಂಗ್, ಪೊಲೀಸರ ಪಾಲಿಗೆ ದುಃಸ್ವಪ್ನವಾಗಿ ಕಾಡತೊಡಗಿತ್ತು. ಪೊಲೀಸ್ ಕಮಿಷನರ್ ಕಚೇರಿ ಪಕ್ಕದ ಮರವನ್ನೂ ಕತ್ತರಿಸಿದ್ದ ಈ ಗ್ಯಾಂಗ್‌ನ ಪತ್ತೆಗೆ ಡಿಸಿಪಿ ಡಿ.ದೇವರಾಜ್ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಯಿತು. ಸಿ.ಸಿ ಟಿ.ವಿ ಕ್ಯಾಮೆರಾಗಳ ಸುಳಿವು ಹಾಗೂ ಹಳೇ ಆರೋಪಿಗಳು ನೀಡಿದ ಕುರುಹು ಆಧರಿಸಿ ರಿಯಾಜ್ ಸಹಚರ ಮುಜಾದ್ದೀನ್ ವುಲ್ಲಾ ಸೇರಿದಂತೆ ಆರು ಮಂದಿಯನ್ನು 2018ರ ಡಿ.10ರಂದು ಬಂಧಿಸಿತ್ತು.

ಮುಸ್ಲಿಮರಂತೆ ವೇಷ:ಎಸ್‌ಐಗಳಾದ ರಾಘವೇಂದ್ರ, ಸುರೇಶ್, ರಹೀಂ ಹಾಗೂ ಬಾಲರಾಜ್ ಅವರು ಮುಸ್ಲಿಮರಂತೆ ವೇಷ ಬದಲಿಸಿಕೊಂಡು ಮಾಫಿಯಾದ ಸೂತ್ರಧಾರರಾದ ತಂದೆ–ಮಗನನ್ನು ಹಿಡಿಯಲು ಹೊರಟರು. ಬಿಳಿ ಟೋಪಿ, ಹಣೆಗೆ ಕಾಡಿಗೆ ಹಚ್ಚಿಕೊಂಡು ಗ್ರಾಮದ ಸುತ್ತ ಓಡಾಡುತ್ತ ಅವರ ಚಲನವಲನಗಳ ಮಾಹಿತಿ ಕಲೆ ಹಾಕುತ್ತಿದ್ದರು. ಡಿ.20ರಂದು ತಂದೆ–ಮಗ ಮಾಲೂರಿಗೆ ತೆರಳುತ್ತಿರುವ ಮಾಹಿತಿ ಸಿಕ್ಕಿತ್ತು.

ಇದೇ ಸಮಯಕ್ಕಾಗಿ ಕಾಯುತ್ತಿದ್ದ ಪಿಎಸ್‌ಐಗಳ ತಂಡ, ಆ ದಿನ ಆರೋಪಿಗಳ ಪ್ರಯಾಣಿಸುತ್ತಿದ್ದ ಕಾರನ್ನು ಜೀಪಿನಲ್ಲಿ ಹಿಂಬಾಲಿಸಿತ್ತು. ಪೊಲೀಸರು ತಮ್ಮನ್ನು ಬೆನ್ನು ಬಿದ್ದಿರುವ ಬಗ್ಗೆ ಅನುಮಾನಗೊಂಡ ರಿಯಾಜ್, ಕೂಡಲೇ ಸ್ಥಳೀಯ ಸಹಚರರಿಗೆ ಕರೆ ಮಾಡಿ ಆ ವಿಷಯ ತಿಳಿಸಿದ್ದ.

ಕನಿಷ್ಠ 100 ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಸೈಯದ್, ಪಕ್ಕಕ್ಕೆ ಬಂದ ಪೊಲೀಸರ ಜೀಪಿಗೆ ಡಿಕ್ಕಿ ಮಾಡಿದ್ದ. ಇದರಿಂದ ವಾಹನ ಹಳ್ಳಕ್ಕೆ ಇಳಿದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಅಷ್ಟರಲ್ಲೇ ಸಹಚರರು ಬೈಕ್‌ಗಳಲ್ಲಿ ಸ್ಥಳಕ್ಕೆ ಬಂದು ಪೊಲೀಸರ ಮೇಲೆ ಕಲ್ಲು ತೂರಲು ಆರಂಭಿಸಿದ್ದರು. ಇದರಿಂದ ತಲೆ ಹಾಗೂ ಬೆನ್ನಿಗೆ ಗಾಯಗಳಾದವು. ನಂತರ ಸ್ಥಳೀಯ ಪೊಲೀಸರ ನೆರವಿನಿಂದ ಅಲ್ಲಿಂದ ತಪ್ಪಿಸಿಕೊಂಡು ನಗರಕ್ಕೆ ಮರಳಿದ್ದರು ಎನ್ನಲಾಗಿದೆ.

ಎಕೆ–47, ಎಸ್‌ಎಲ್‌ಆರ್ ದಾಳಿ: ‘ನಮ್ಮ ಮೇಲೇ ಹಲ್ಲೆ ನಡೆಸಿದ ತಂದೆ–ಮಗನನ್ನು ಬಂಧಿಸಿಯೇ ತೀರಬೇಕು’ ಎಂಬ ಪಣ ತೊಟ್ಟ ಪೊಲೀಸರು, ಹೊಸ ವರ್ಷದ ಸಂಭ್ರಮಾಚರಣೆಯ ಬಂದೋಬಸ್ತ್ ಕಾರ್ಯ ಮುಗಿಯುತ್ತಿದ್ದಂತೆಯೇ ಪುನಃ ಕಾರ್ಯಾಚರಣೆಗೆ ಯೋಜನೆ ಹಾಕಿಕೊಂಡರು. ಅದರಂತೆ ಪೊಲೀಸರ ಬೃಹತ್ ಪಡೆಯೇ ರಚನೆಯಾಯಿತು.

ಡಿಸಿಪಿಗಳಾದ ಡಿ.ದೇವರಾಜ್, ಅಬ್ದುಲ್ ಅಹದ್, 8 ಎಸಿಪಿಗಳು, 23 ಇನ್‌ಸ್ಪೆಕ್ಟರ್‌ಗಳು, 40 ಪಿಎಸ್‌ಐಗಳು, 25 ಮಹಿಳಾ ಸಿಬ್ಬಂದಿ ಸೇರಿದಂತೆ 150ಕ್ಕೂ ಹೆಚ್ಚು ಪೊಲೀಸರು ಶನಿವಾರ ನಸುಕಿನಲ್ಲಿ (2.30ರ ಸುಮಾರಿಗೆ) ಆ ಗ್ರಾಮಕ್ಕೆ ನುಗ್ಗಿದರು.

‘ಪ್ರತಿಯೊಬ್ಬರೂ ಸುರಕ್ಷತಾ ಕವಚ ಧರಿಸಿದ್ದೆವು. ಎಸ್‌ಎಲ್‌ಆರ್‌, ಎಕೆ–47 ಸೇರಿದಂತೆ ಎಲ್ಲ ಪುರುಷ ಸಿಬ್ಬಂದಿಗೂ ಶಸ್ತ್ರಾಸ್ತ್ರಗಳನ್ನು ನೀಡಲಾಗಿತ್ತು. ಗ್ರಾಮಸ್ಥರು ಆಚೆ ಬಂದರೆ ತಕ್ಷಣವೇ ಗೊತ್ತಾಗಲೆಂದು ಡ್ರೋನ್ ಕ್ಯಾಮೆರಾಗಳನ್ನೂ ಬಿಟ್ಟಿದ್ದೆವು. ಪೊಲೀಸರ ಮೇಲೆ ದಾಳಿ ನಡೆಸಿದರೆ ಆತ್ಮರಕ್ಷಣೆಗಾಗಿ ಪಿಸ್ತೂಲ್ ಬಳಸವಂತೆ ಆದೇಶವನ್ನೂ ನೀಡಲಾಗಿತ್ತು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಬ್ಬಂದಿ ಬಂದೂಕು ಹಿಡಿದು ಮನೆ ಆವರಣ ಪ್ರವೇಶಿಸಿದ್ದನ್ನು ನೋಡಿ ಬೆಚ್ಚಿ ಬಿದ್ದ ರಿಯಾಜ್, ಮರು ಮಾತಾಡದೆ ಶರಣಾದ. ಮಗನ ಬಗ್ಗೆ ಕೇಳಿದಾಗ, ‘ಆತ ಊರಿನಲ್ಲಿಲ್ಲ’ ಎಂದು ಹೇಳಿದ. ಬಳಿಕ ಮನೆ ತಪಾಸಣೆ ನಡೆಸಿದಾಗ, ಮಂಚದ ಕೆಳಗೆ ಸೈಯದ್‌ ಪತ್ತೆಯಾದ’ ಎಂದು ಮಾಹಿತಿ ನೀಡಿದರು.

ಅಡಗಿದ ಅಬ್ಬರ: ‘ತಂದೆ–ಮಗನನ್ನು ಜೀಪಿನಲ್ಲಿ ಕೂರಿಸಿಕೊಂಡಾಗ ಸ್ಥಳೀಯ ಮಹಿಳೆಯರು ಅಬ್ಬರಿಸುತ್ತ ದಾಳಿಗೆ ಮುಂದಾದರು. ಈ ವೇಳೆ ನಮ್ಮ ಮಹಿಳಾ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ, ‘ನೀವು ತೊಂದರೆ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ನಮ್ಮನ್ನು ಏನೆಂದು ತಿಳಿದುಕೊಂಡಿದ್ದೀರಾ’ ಎಂದು ಡಿಸಿಪಿಗಳೂ ಅಬ್ಬರಿಸಿದರು. ಆ ನಂತರ ಮಹಿಳೆಯರ ಗ್ಯಾಂಗ್ ಹಿಂದೆ ಸರಿಯಿತು’ ಎಂದು ಪೊಲೀಸರು ಹೇಳಿದರು.

ಗೋಪ್ಯ ಮದುವೆ: ಡಿ.23ರಂದು ಮಗನ ಮದುವೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ರಿಯಾಜ್, ಸಂಬಂಧಿಕರಿಗೆ ಲಗ್ನಪತ್ರಿಕೆಗಳನ್ನೂ ಹಂಚಿದ್ದ. ಆದರೆ, ಅದಕ್ಕೂ ಕೆಲ ದಿನಗಳ ಹಿಂದೆಯಷ್ಟೇ ಸಹಚರರು ಪೊಲೀಸ್ ಬಲೆಗೆ ಬಿದ್ದಿದ್ದರಿಂದ ಯೋಜನೆ ಬದಲಿಸಿ, ಕೆಲವೇ ಸಂಬಂಧಿಕರನ್ನು ಕರೆಸಿ ಮನೆಯಲ್ಲೇ ಮದುವೆ ಶಾಸ್ತ್ರ ಮುಗಿಸಿದ್ದ. ಪೊಲೀಸರು ಮದುವೆ ದಿನ ಕಲ್ಯಾಣಮಂಟಪದಿಂದಲೇ ಆರೋಪಿಗಳನ್ನು ಬಂಧಿಸಿ ಹಲ್ಲೆಗೆ ಪ್ರತೀಕಾರ ತೀರಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಎಲ್ಲೆಲ್ಲಿ ಮರ ಕತ್ತರಿಸಿದ್ದರು

*2017, ಜ.21: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆವರಣಕ್ಕೆ ನುಗ್ಗಿದ್ದ ಆರೋಪಿಗಳು, ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳನ್ನು ಕಟ್ಟಿ ಹಾಕಿ ಗಂಧದ ಮರ ಕತ್ತರಿಸಿಕೊಂಡು ಹೋಗಿದ್ದರು.

*2017, ಜುಲೈ 14: ಶೇಷಾದ್ರಿರಸ್ತೆಯ ಎಸ್‌ಜೆಪಿ ಕಾಲೇಜಿನ ಕಾವಲುಗಾರರಿಗೆ ಮಚ್ಚಿನಿಂದ ಬೆದರಿಸಿ, ಆವರಣದಲ್ಲಿದ್ದ ಗಂಧದ ಮರ ಕದ್ದೊಯ್ದಿದ್ದರು.

*2017, ನ.11: ಮಲ್ಲೇಶ್ವರ 15ನೇ ಅಡ್ಡರಸ್ತೆಯಲ್ಲಿನ ಸಿ.ವಿ.ರಾಮನ್‌ ಟ್ರಸ್ಟ್‌ಗೆ ಸೇರಿದ ಕಟ್ಟಡದ ಆವರಣದಲ್ಲಿರುವ ಎರಡು ಮರಗಳನ್ನು ಕತ್ತರಿಸಿದ್ದರು.

*2018, ಜೂನ್ 29: ಸೇಂಟ್ ಮಾರ್ಕ್ಸ್‌ ರಸ್ತೆಯ ಬಿಷಪ್ ಕಾಟನ್ ಶಾಲೆ ಆವರಣದಲ್ಲಿದ್ದ ಎರಡು ಮರ
ಗಳನ್ನು ಕತ್ತರಿಸಿದ್ದರು.

*2018, ಸೆ.3: ಅರಮನೆ ರಸ್ತೆಯ ‘ಸೆವೆನ್ ಮಿನಿಸ್ಟರ್ಸ್‌ ಕ್ವಾರ್ಟರ್ಸ್‌’ನಲ್ಲಿದ್ದ ಸುಮಾರು 30 ವರ್ಷದ ಹಳೆ ಮರವನ್ನು ಕದ್ದೊಯ್ದಿದ್ದರು.

*2018, ಅ.29: ರಾಜಭವನ ರಸ್ತೆಯಲ್ಲಿರುವ ಪ್ರಸಾರ ಭಾರತಿ ಆವರಣಕ್ಕೆ ನುಗ್ಗಿ ಮರ ಕತ್ತರಿಸಿದ್ದರು.

*2018, ನ.17: ಸಿಐಡಿ ಕಚೇರಿ ಪಕ್ಕದಲ್ಲೇ ಇರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ
ನಿವಾಸದ ಆವರಣದಲ್ಲಿ ಮರ ಕತ್ತರಿಸಿದ್ದರು.

*2018, ನ.21: ಕಮಿಷನರ್ ಕಚೇರಿಗೆ ಕೂಗಳತೆ ದೂರದಲ್ಲಿರುವ ‘ಎಂಬೆಸಿ’ ಕಟ್ಟಡದ ಆವರಣದಲ್ಲಿದ್ದ ಮರ ಹೊತ್ತೊಯ್ದಿದ್ದರು.

ಮನೆಯೂ ‘ಭದ್ರ’ ಕೋಟೆ

‘ಎರಡು ದಶಕಗಳಿಂದ ದಂಧೆ ನಡೆಸುತ್ತಿದ್ದರೂ ರಿಯಾಜ್ ಪೊಲೀಸರಿಗೆ ಸಿಕ್ಕಿಬಿದ್ದಿರುವುದು ಇದು ಎರಡನೇ ಸಲ. ಈ ಹಿಂದೆ ಗಂಧದ ಮರ ಸಾಗಿಸುವಾಗ ಶಿರಾ ಟೋಲ್ ಗೇಟ್ ಬಳಿ ಸ್ಥಳೀಯ ಪೊಲೀಸರು ಈತನನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ಆತ, ನಂತರ ಮನೆಯಲ್ಲೇ ಕುಳಿತು ದಂಧೆ ನಿಯಂತ್ರಿಸುತ್ತಿದ್ದ. ಎತ್ತರದ ಕಾಂಪೌಂಡ್, ಪ್ರವೇಶದ ದ್ವಾರದಲ್ಲಿ ಮೂರು ಹಂತದಲ್ಲಿ ಕಬ್ಬಿಣದ ಗ್ರಿಲ್‌, ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಹಾಕಿಸಿಕೊಂಡಿದ್ದ ರಿಯಾಜ್‌ಗೆ, ಯಾರೇ ಮನೆ ಹತ್ತಿರ ಬಂದರೂ ತಕ್ಷಣಕ್ಕೇ ಗೊತ್ತಾಗುತ್ತಿತ್ತು’ ಎಂದು ಪೊಲೀಸರು ಹೇಳಿದರು.

‘ರಿಯಾಜ್ ಮನೆಯಲ್ಲಿ ಮೂರು ಡೈರಿಗಳು ಪತ್ತೆಯಾಗಿದ್ದು, ಯಾವ್ಯಾವ ಕಾರ್ಖಾನೆಗೆ ಎಷ್ಟು ಮರ ಸಾಗಣೆ ಮಾಡಲಾಗಿದೆ ಎಂಬುದನ್ನು ಅದರಲ್ಲಿ ಸವಿಸ್ತಾರವಾಗಿ ಬರೆದಿದ್ದಾನೆ. ತುಮಕೂರು, ಮಂಗಳೂರು ಹಾಗೂ ಶಿರಾದಲ್ಲಿರುವ ಕಾರ್ಖಾನೆಗಳ ಮಾಲೀಕರ ಜತೆ ನಂಟು ಹೊಂದಿರುವುದು ಡೈರಿಯಿಂದ ಗೊತ್ತಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿಗಳ ಮನೆಯಲ್ಲಿ 50ಕ್ಕೂ ಹೆಚ್ಚು ನಕಲಿ ನೋಂದಣಿ ಫಲಕಗಳು ಪತ್ತೆಯಾಗಿವೆ. ರಕ್ತಚಂದನ ಸಾಗಿಸುವ ವಾಹನದ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದರೂ, ನಕಲಿ ನಂಬರ್ ಪ್ಲೇಟ್‌ಗಳಿಂದ ತನಿಖೆಯ ದಿಕ್ಕು ತಪ್ಪಿಸಬಹುದೆಂದು ಈ ರೀತಿ ಮಾಡುತ್ತಿದ್ದರು’ ಎಂದು ಮಾಹಿತಿ ನೀಡಿದರು.

*ರಿಯಾಜ್ ಗ್ಯಾಂಗ್ ವಿರುದ್ಧ ‘ಕೋಕಾ’ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಆತನಿಂದ ಗಂಧದ ಮರ ಖರೀದಿಸಿರುವ ಎಲ್ಲ ಕಾರ್ಖಾನೆಗಳ ಮಾಲೀಕರನ್ನೂ ವಿಚಾರಣೆ ನಡೆಸಲಾಗುವುದು

-ಡಿ.ದೇವರಾಜ್, ಡಿಸಿಪಿ, ಕೇಂದ್ರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT