ಗುರುವಾರ , ಡಿಸೆಂಬರ್ 12, 2019
25 °C
ತಮಿಳುನಾಡು, ಬೆಂಗಳೂರಿನ ಆರೋಪಿಗಳ ಸೆರೆ l ತಪ್ಪಿಸಿಕೊಳ್ಳಲು ಯತ್ನಿಸಿದವನ ಕಾಲಿಗೆ ಗುಂಡೇಟು

ಹೈ–ಸೆಕ್ಯುರಿಟಿಯಲ್ಲೇ ಗಂಧದ ಮರ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಪೊಲೀಸ್ ಕಮಿಷನರ್ ಕಚೇರಿ, ಸಿಐಡಿ ಕಚೇರಿ, ರಾಜಭವನ, ವಿಧಾನಸೌಧ ಸುತ್ತಮುತ್ತಲ ಅತಿ ಭದ್ರತೆಯ ಪ್ರದೇಶಗಳಲ್ಲೇ ಗಂಧದ ಮರಗಳನ್ನು ಕತ್ತರಿಸಿಕೊಂಡು ಹೋಗಿದ್ದ ಆರೋಪಿಗಳ ಹೆಡೆಮುರಿ ಕಟ್ಟಿರುವ ಕಬ್ಬನ್‌ಪಾರ್ಕ್ ಪೊಲೀಸರು, ತಮ್ಮ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಮುಜಾದ್ದೀನ್ ವುಲ್ಲಾ ಎಂಬಾತನ ಕಾಲಿಗೆ ಗುಂಡು ಹೊಡೆದಿದ್ದಾರೆ.

ಸಾರಾಯಿಪಾಳ್ಯದ ಮುಜಾದ್ದೀನ್ ವುಲ್ಲಾ (36), ಆತನ ತಮ್ಮ ಇಮ್ದಾದ್ ವುಲ್ಲಾ (34), ತಮಿಳುನಾಡಿನ ರಂಗನಾಥನ್ ಶೇಖರ್ (35), ಲಕ್ಷ್ಮಣ ಅಲಿಯಾಸ್ ಕುಳ್ಳಿಯಾ (32) ಹಾಗೂ ರಾಮಸ್ವಾಮಿ (40) ಎಂಬುವರನ್ನು ಬಂಧಿಸಲಾಗಿದೆ. ಮುಜಾದ್ದೀನ್ ತಂದೆ ಅಮ್ಜಾದ್ ವುಲ್ಲಾ ಹಾಗೂ ತಮಿಳುನಾಡಿನ ಇನ್ನೂ ಆರು ಮಂದಿಯ ಬಂಧನಕ್ಕೆ ಶೋಧ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಚೈನ್ ಲಿಂಕ್: ಈ ಗ್ಯಾಂಗ್‌ ಮೂರು ಉಪತಂಡಗಳಾಗಿ ಕಾರ್ಯಾಚರಣೆ ನಡೆಸುತ್ತದೆ. ಒಂದು ಗುಂಪು ಗಂಧದ ಮರ ಇರುವ ಜಾಗವನ್ನು ಗುರುತಿಸಿದರೆ, ಇನ್ನೊಂದು ತಂಡ ಮರ ಕತ್ತರಿಸಿ ಸಾಗಿಸುವ ಕೆಲಸ ಮಾಡುತ್ತದೆ. ಕದ್ದು ತರುವ ಗಂಧದ ತುಂಡುಗಳನ್ನು ಮುಜಾದ್ದೀನ್ ಸೋದರರು ಹೊರ ರಾಜ್ಯಗಳ ದಂಧೆಕೋರರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ ಎಂದು ಪೊಲೀಸರು ಹೇಳಿದರು.

ಬಿಬಿಎಂಪಿ ಅರಣ್ಯ ಘಟಕದ ಗುತ್ತಿಗೆದಾರ ಸಂಪಂಗಿ ಅವರು, ನಗರದಲ್ಲಿ ಹಳೇ ಮರಗಳನ್ನು ಕತ್ತರಿಸುವ ಸಲುವಾಗಿ ತಮಿಳುನಾಡಿನ 15 ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಅವರಲ್ಲಿ ಲಕ್ಷ್ಮಣ ಹಾಗೂ ರಾಮಸ್ವಾಮಿ ಸಹ ಇದ್ದರು. ಇವರಿಬ್ಬರು ಹಲವು ವರ್ಷಗಳಿಂದ ಮುಜಾದ್ದೀನ್ ಸೋದರರ ಜತೆ ಸಂಪರ್ಕದಲ್ಲಿದ್ದರು.

ತಾವು ಹಳೇ ಮರಗಳನ್ನು ಕತ್ತರಿಸಲು ಹೋದಾಗ, ಸುತ್ತಮುತ್ತ ಗಂಧದ ಮರ ಪತ್ತೆಯಾದರೆ ಆ ವಿಷಯವನ್ನು ಸೋದರರಿಗೆ ತಿಳಿಸುತ್ತಿದ್ದರು. ಒಂದು ಮರ ತೋರಿಸಿದರೆ ಲಕ್ಷ್ಮಣ ಹಾಗೂ ರಾಮಸ್ವಾಮಿಗೆ ₹ 10 ಸಾವಿರ ಸಿಗುತ್ತಿತ್ತು.

ಈ ಸೋದರರು ತಮಿಳುನಾಡಿನ ಇಳಯರಾಜ, ಮಾದ, ರಾಜೇಂದ್ರ, ಸತ್ಯರಾಜ, ಗೋವಿಂದಸ್ವಾಮಿ, ಶಿವಲಿಂಗ ಎಂಬುವರನ್ನು ನಗರಕ್ಕೆ ಕರೆಸಿಕೊಂಡು, ಮರ ಕತ್ತರಿಸಿಕೊಂಡು ಬರುವ ಜವಾಬ್ದಾರಿಯನ್ನು ಅವರಿಗೆ ವಹಿಸುತ್ತಿದ್ದರು.

ಪೊಲೀಸ್ ಬೇಟೆ ಶುರು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ನಿವಾಸದ ಆವರಣದಲ್ಲೇ ಗಂಧದ ಮರ ಕಳವಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್, ಆರೋಪಿಗಳ ಪತ್ತೆಗೆ ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.

ಮುಜಾದ್ದೀನ್ ಸೋದರರು ಮೂರು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿರುವ ವಿಷಯ ಗೊತ್ತಾಗಿದೆ. ಅವರಿಬ್ಬರ ಮೊಬೈಲ್ ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ ಲಕ್ಷ್ಮಣ, ರಂಗನಾಥನ್ ಹಾಗೂ ರಾಮಸ್ವಾಮಿ ನಿರಂತರವಾಗಿ ಆ ಸೋದರರ ಜತೆ ಸಂಪರ್ಕದಲ್ಲಿರುವುದು ತಿಳಿದಿದೆ. ಕೂಡಲೇ ಪೊಲೀಸರು ಆ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಕಬ್ಬನ್‌ಪಾರ್ಕ್‌ನಲ್ಲೇ ಗುಂಡೇಟು: ಮುಜಾದ್ದೀನ್ ಸೋದರರನ್ನು ಸೋಮವಾರ ಚಿಕ್ಕಬಳ್ಳಾಪುರದಲ್ಲಿ ಸೆರೆ ಹಿಡಿದ ಪೊಲೀಸರು, ಅವರನ್ನು ರಾತ್ರಿ ನಗರಕ್ಕೆ ಕರೆತರುತ್ತಿದ್ದರು.

1.30ರ ಸುಮಾರಿಗೆ ಕಬ್ಬನ್‌ ಉದ್ಯಾನದ ಒಳಗಿನಿಂದ ಠಾಣೆ ಕಡೆ ಹೋಗುತ್ತಿದ್ದಾಗ ಮುಜಾದ್ದೀನ್, ಹೆಡ್‌ಕಾನ್‌ಸ್ಟೆಬಲ್‌ ಕೃಷ್ಣಮೂರ್ತಿ ಅವರನ್ನು ಚಲಿಸುತ್ತಿದ್ದ ವಾಹನದಿಂದಲೇ ಕೆಳಗೆ ತಳ್ಳಿದ್ದ. ಬಳಿಕ, ತಾನೂ ಹೊರಗೆ ಜಿಗಿದು ಓಡಲಾರಂಭಿಸಿದ್ದ ಎನ್ನಲಾಗಿದೆ.

ಇನ್‌ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ, ಪಿಎಸ್‌ಐಗಳಾದ ರಹೀಂ, ರಾಘವೇಂದ್ರ ಹಾಗೂ ಸುರೇಶ್ ಆತನನ್ನು ಬೆನ್ನಟ್ಟಿದ್ದರು. ಬಿದಿರಿನ ಮೆಳೆಯ ಮರೆಯಲ್ಲಿ ಅಡಗಿದ್ದ ಆರೋಪಿ, ತನ್ನನ್ನು ಹಿಡಿಯಲು ಹತ್ತಿರ ಬಂದ ರಹೀಂ ಅವರಿಗೆ ದೊಣ್ಣೆಯಿಂದ ಹೊಡೆದಿದ್ದ.

ಈ ಹಂತದಲ್ಲಿ ಇನ್‌ಸ್ಪೆಕ್ಟರ್ ಆತನ ಕಾಲಿಗೆ ಗುಂಡು ಹೊಡೆದಿದ್ದರು.

ಪ್ರತಿಕ್ರಿಯಿಸಿ (+)