ಪೌರ ಕಾರ್ಮಿಕರಿಗೆ ಪ್ರೀತಿಯ ಸಂಕ್ರಮಣ

7

ಪೌರ ಕಾರ್ಮಿಕರಿಗೆ ಪ್ರೀತಿಯ ಸಂಕ್ರಮಣ

Published:
Updated:
Prajavani

ಬೆಂಗಳೂರು: ‘ಕೆಲಸಕ್ಕೆ ಸೇರಿದ 30 ವರ್ಷಗಳ ಬಳಿಕ ಈ ರೀತಿ ನಮ್ಮನ್ನು ಪ್ರೀತಿಯಿಂದ ಕರೆದು ಮಾತನಾಡಿಸಿದ್ದಾರೆ. ನಾವು ನಿರೀಕ್ಷಿಸಿದ್ದೂ ಇದನ್ನೇ ...’

ಹೀಗೆಂದು 160ನೇ ವಾರ್ಡ್‌ನ ಪೌರಕಾರ್ಮಿಕರಾದ ಭವಾನಿ ಖುಷಿಯಿಂದ ಹೇಳಿದರು.

ಮಕರ ಸಂಕ್ರಾಂತಿ ಅಂಗವಾಗಿ ಸೋಮವಾರ ಜೆ.ಪಿ. ನಗರದ ದುರ್ಗಾಪರಮೇಶ್ವರಿ ಮೈದಾನದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ಸೀರೆ, ಕಸ ಸಾಗಿಸುವ ಆಟೋ ಟಿಪ್ಪರ್‌, ಲಾರಿ ಚಾಲಕರಿಗೆ ಪ್ಯಾಂಟ್‌, ಷರ್ಟ್‌ ಉಡುಗೊರೆ ನೀಡಿದ ಕ್ಷಣವು ಅವರು ಭಾವುಕರಾಗುವಂತೆ ಮಾಡಿತ್ತು.

ಮೈದಾನದಲ್ಲೇ ಒಲೆ ನಿರ್ಮಿಸಿ ಅದರಲ್ಲಿ ಮಣ್ಣಿನ ಮಡಕೆಯಲ್ಲಿ ಮಹಿಳೆಯರು ಪೊಂಗಲ್‌ ತಯಾರಿಸಿದರು. ‘ಪೊಂಗಲ್‌ ಪಾಕ ಉಕ್ಕುತ್ತಿದ್ದಂತೆಯೇ ಮಹಿಳೆಯರು ಪೊಂಗಲೋ ಪೊಂಗಲ್‌...’ ಎಂದು ಕೂಗಿ ಸಂಕ್ರಾಂತಿಯನ್ನು ಸ್ವಾಗತಿಸಿದರು. ಪಾಲಿಕೆ ಸದಸ್ಯರೊಂದಿಗೆ ಶಾಸಕಿ ಸೌಮ್ಯಾ ರೆಡ್ಡಿ ಅವರೂ ಕೈಜೋಡಿಸಿದರು. ಪೊಂಗಲ್‌ ವಿತರಿಸಲಾಯಿತು.

ಶಾಸಕ ರಾಮಲಿಂಗಾರೆಡ್ಡಿ ಹಾಗೂ ಸೌಮ್ಯಾರೆಡ್ಡಿ ಅವರು ಸುಮಾರು 650 ಮಹಿಳಾ ಕಾರ್ಮಿಕರಿಗೆ ಸೀರೆ, 400ರಷ್ಟು ಚಾಲಕರು, ಸಹಾಯಕರಿಗೆ ಪ್ಯಾಂಟ್‌ ಷರ್ಟ್‌ ವಿತರಿಸಿದರು. ಜತೆಗೆ ಕಬ್ಬಿನ ಕಟ್ಟು, ಎಳ್ಳು ಬೆಲ್ಲ ನೀಡಿ  ಶುಭ ಕೋರಿದರು.  ಬೈರಸಂದ್ರ ವಾರ್ಡ್‌ ಸದಸ್ಯ ಎನ್‌.ನಾಗರಾಜ್‌ ಸೇರಿದಂತೆ ವಿವಿಧ ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

‘ವರ್ಷಪೂರ್ತಿ ದುಡಿಯುವ ಕಾರ್ಮಿಕರಿಗೆ ಒಂದು ದಿನವಾದರೂ ಹಬ್ಬದ ಸಂಭ್ರಮ ಸಿಗಬೇಕು. ಬೆಂಗಳೂರನ್ನು ಸುಂದರವಾಗಿಡುವವರೂ ಇವರೇ’ ಎಂದು ಸೌಮ್ಯಾರೆಡ್ಡಿ ಹೇಳಿದರು.

ಕಾರ್ಮಿಕರ ಸರದಿ ಸಾಲು ನಿಯಂತ್ರಿಸಲು ಬೆಂಬಲಿಗರು ಹರಸಾಹಸಪಡಬೇಕಾಯಿತು. ಕಾರ್ಯಕ್ರಮಕ್ಕೂ ಮುನ್ನ ಮೈದಾನದಲ್ಲಿರುವ ದುರ್ಗಾಪರಮೇಶ್ವರಿ ಗುಡಿಯಲ್ಲಿ ಪೂಜೆ ನಡೆಯಿತು. 

**

ಹಬ್ಬ ಸಮೀಪಿಸುತ್ತಿದ್ದಂತೆಯೇ ಸರ್ಕಾರ ಉರುಳುತ್ತದೆ ಎಂದು ಮಾಧ್ಯಮಗಳ ಮೂಲಕ ಸುದ್ದಿಯಾಗುವುದು ಸಾಮಾನ್ಯ. ಅಂಥದ್ದೇನೂ ಆಗುವುದಿಲ್ಲ.
- ಸೌಮ್ಯಾರೆಡ್ಡಿ, ಶಾಸಕಿ

**

ಕಾರ್ಯಕ್ರಮದಿಂದ ತುಂಬಾ ಖುಷಿ ಆಗಿದೆ. ನಮ್ಮನ್ನೂ ಗುರುತಿಸುವವರಿದ್ದಾರೆ ಎಂಬ ಭಾವ ಮೂಡಿದೆ.
- ಸುಮತಿ, ಬನಶಂಕರಿ 8ನೇ ಬ್ಲಾಕ್‌

**

ಇಂದು ಬೆಳಗಿನ ಜಾವ 4.30ಕ್ಕೆ ಕೆಲಸ ಆರಂಭಿಸಿದ್ದೇವೆ. ನಮ್ಮನ್ನೇ ಕೇಂದ್ರವಾಗಿಸಿದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಸಂತಸ
- ಮುನಿರತ್ನಾ, 8ನೇ ಬ್ಲಾಕ್‌, ಜಯನಗರ

**

35 ವರ್ಷಗಳಿಂದ ಪೌರ ಕಾರ್ಮಿಕಳಾಗಿದ್ದೇನೆ. ಇವತ್ತು ಈ ಕೆಲಸಕ್ಕೂ ಗೌರವ ಸಿಕ್ಕಿದೆ. ತವರಿನ ಗೌರವ ಸಿಕ್ಕಂತೆ ಅನಿಸಿದೆ.
- ವಿ. ಲಕ್ಷ್ಮೀ, 5ನೇ ಬ್ಲಾಕ್‌, ಜೆ.ಪಿ.ನಗರ

**

ಹಬ್ಬದ ಸಂಭ್ರಮವನ್ನೂ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ನಾನೂ ಸೇರಿದಂತೆ ನನ್ನ ಬಳಗದವರಿಗೆ ತುಂಬಾ ಖುಷಿಯಾಗಿದೆ
- ಮಂಜುಳಾ, 8ನೇ ಬ್ಲಾಕ್‌ ಜಯನಗರ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !