ಶಾಲೆ ಎದುರೇ ಮಲಗಿದ ಪೋಷಕರು!

7
ಎಲ್‌ಕೆಜಿ, ಯುಕೆಜಿ ಪ್ರವೇಶಕ್ಕೆ ಅರ್ಜಿ ಪಡೆಯಲು ಸರದಿ

ಶಾಲೆ ಎದುರೇ ಮಲಗಿದ ಪೋಷಕರು!

Published:
Updated:

ಬೆಂಗಳೂರು: ರಾಮಮೂರ್ತಿನಗರದಲ್ಲಿರುವ ‘ಜೈ ಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಲಯ’ಕ್ಕೆ ತಮ್ಮ ಮಕ್ಕಳನ್ನು ಸೇರಿಸಲು ಪ್ರವೇಶ ಅರ್ಜಿಗಳನ್ನು ಪಡೆಯುವುದಕ್ಕಾಗಿ ಶುಕ್ರವಾರ ಇಡೀ ದಿನ ಸರದಿಯಲ್ಲಿ ನಿಂತಿದ್ದ ಪೋಷಕರು, ರಾತ್ರಿಯೂ ಶಾಲೆ ಎದುರೇ ಮಲಗಿದ್ದರು.

ಎಲ್‌.ಕೆ.ಜಿ, ಯು.ಕೆ.ಜಿ ಹಾಗೂ ಒಂದನೇ ತರಗತಿ ಪ್ರವೇಶಕ್ಕಾಗಿ ಶಾಲಾ ಆಡಳಿತ ಮಂಡಳಿಯು ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಅರ್ಜಿ ವಿತರಣೆ ಮಾಡಲಿದೆ. ಆ ಬಗ್ಗೆ ಮಾಹಿತಿ ಪಡೆದ ಪೋಷಕರು, ಶುಕ್ರವಾರ ಬೆಳಿಗ್ಗೆಯೇ ಶಾಲೆಗೆ ಬಂದು ಸರದಿಯಲ್ಲಿ ನಿಂತಿದ್ದರು.

ಕತ್ತಲಾದರೂ ಯಾರೊಬ್ಬರೂ ಮನೆಗೆ ಹೋಗಲಿಲ್ಲ. ಚಾಪೆ ಹಾಗೂ ಬೆಡ್‌ಶಿಟ್‌ ತಂದು ಕೊರೆಯುವ ಚಳಿಯಲ್ಲೇ ಶಾಲೆ ಎದುರು ಮಲಗಿದ್ದು ಕಂಡುಬಂತು. ಮಧ್ಯರಾತ್ರಿಯಲ್ಲಿ ಕೆಲವು ಪೋಷಕರನ್ನು ಶಾಲಾ ಆಡಳಿತ ಮಂಡಳಿಯವರೇ ಮನೆಗೆ ಕಳುಹಿಸಿದರು ಎಂದು ಗೊತ್ತಾಗಿದೆ.

‘ಮೂರು ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಪ್ರವೇಶ ನೀಡಲಾಗುತ್ತಿದೆ. 40ರಿಂದ 50 ಮಕ್ಕಳಿಗಷ್ಟೇ ಪ್ರವೇಶವಿದೆ. ನಮ್ಮ ಮಕ್ಕಳನ್ನೂ ಇದೇ ಶಾಲೆಗೆ ಸೇರಿಸಬೇಕೆಂಬ ಆಸೆ ಇದೆ. ಅರ್ಜಿಗಾಗಿ ಈ ಸರದಿಯಲ್ಲಿ ನಿಂತು ಕಾಯುತ್ತಿದ್ದೇವೆ’ ಎಂದು ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮತ್ತೊಬ್ಬ ಪೋಷಕ, ‘ಅರ್ಜಿಯೊಂದಕ್ಕೆ ₹700 ನಿಗದಿಪಡಿಸಿದ್ದಾರೆ. ಬೆಳಿಗ್ಗೆ ಬೇಗನೇ ಬಂದು ದುಡ್ಡು ಕೊಟ್ಟರೂ ಅರ್ಜಿಗಳು ಸಿಗುವುದಿಲ್ಲ. ಹೀಗಾಗಿ, ಒಂದು ದಿನ ಮುಂಚಿತವಾಗಿ ಬಂದಿದ್ದೇನೆ. ಮಕ್ಕಳಿಗಾಗಿ ಚಳಿಯಲ್ಲಿ ಮಲಗಿದರೂ ಪರವಾಗಿಲ್ಲ’ ಎಂದರು.

ರಾಮಮೂರ್ತಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಬಿ.ಶಾಮರಾವ್, ‘ಇಂದು ಶಿಕ್ಷಣದ ಹೆಸರಿನಲ್ಲಿ ದಂಧೆ ನಡೆಯುತ್ತಿದೆ. ಅದರ ಪರಿಣಾಮವಾಗಿ ಪೋಷಕರಿಗೆ ಈ ಸ್ಥಿತಿ ಬಂದಿದೆ. ಇದಕ್ಕೆ ಸರ್ಕಾರವೇ ಪರಿಹಾರ ಸೂಚಿಸಬೇಕು’ ಎಂದರು. 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !