ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಸೇರಿ 6 ಆರೋಪಿಗಳು ಕಾರವಾರ ಜೈಲಿಗೆ

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಉಡುಪಿ: ದನದ ವ್ಯಾಪಾರಿ ಹುಸೇನಬ್ಬ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಬಂಧಿತ ಹಿರಿಯಡಕ ಠಾಣೆ ಪಿಎಸ್‌ಐ ಡಿ.ಎನ್‌.ಕುಮಾರ್, ಸಿಬ್ಬಂದಿ ಗೋಪಾಲ, ಮೋಹನ್‌ ಕೊತ್ವಾಲ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಕಾರವಾರ ಜೈಲಿಗೆ ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಮುಖ ಆರೋಪಿಗಳಾದ ಸುರೇಶ್‌ ಮೆಂಡನ್‌, ಪ್ರಸಾದ್ ಕೊಂಡಾಡಿ, ಉಮೇಶ್‌ ಶೆಟ್ಟಿ, ರತನ್‌ ಅವರನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಇದುವರೆಗೂ 10 ಮಂದಿಯನ್ನು ಬಂಧಿಸಲಾಗಿದ್ದು, ಶೀಘ್ರವೇ ಮತ್ತಷ್ಟು ಜನರನ್ನು ಬಂಧಿಸಲಾಗುತ್ತದೆ ಎಂದರು.

ಮೃತ ಹುಸೇನಬ್ಬ ಅವರ ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್‌ ವರದಿ ಇನ್ನೂ ಕೈಸೇರಿಲ್ಲ. ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿದು ಬರಲಿದೆ. ಪ್ರಕರಣದ ತನಿಖಾಧಿಕಾರಿಯನ್ನಾಗಿ ಕಾರ್ಕಳ ಎಎಸ್‌ಪಿ ಹೃಷಿಕೇಶ ಸೋನಾವಾನೆ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಮೃತ ಹುಸೇನಬ್ಬ ಹಾಗೂ ಅವರ ಜತೆಗಿದ್ದ ಇಬ್ಬರು, ದನಗಳನ್ನು ಸಾಗಣೆ ಮಾಡಲು ಪರವಾನಗಿ ಹೊಂದಿರಲಿಲ್ಲ. ಈ ಸಂಬಂಧ ಅಕ್ರಮ ಗೋವುಗಳ ಸಾಗಣೆಗೆ ಸಂಬಂಧಿಸಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

15ರವರೆಗೆ ನ್ಯಾಯಾಂಗ ಬಂಧನ: ಆರೋಪಿಗಳಾದ ಚೇತನ್‌, ಶೈಲೇಶ್ ಶೆಟ್ಟಿ, ಗಣೇಶ ನಾಯ್ಕ ಅವರನ್ನು ಸೋಮವಾರ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.  ಈ ಸಂದರ್ಭ ಆರೋಪಿಗಳಿಗೆ ಜೂನ್‌ 15ರವರೆಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಕಾರವಾರ ಜೈಲಿಗೆ ರವಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT