ಶುಕ್ರವಾರ, ಜುಲೈ 30, 2021
28 °C
ಲಾಕ್‌ಡೌನ್‌ನಲ್ಲಿನ ನಷ್ಟ ಸರಿದೂಗಿಸಲು ಹೆಣಗುತ್ತಿರುವ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟಗಾರರು

ಆರಕ್ಕೇರದ, ಮೂರಕ್ಕಿಳಿಯದ ಸೆಕೆಂಡ್ ಹ್ಯಾಂಡ್‌ ಕಾರುಗಳ ವ್ಯಾಪಾರ

ಗಣೇಶ ವೈದ್ಯ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೊರೊನಾ ಲಾಕ್‌ಡೌನ್ ಬಹುತೇಕ ಉದ್ದಿಮೆಗಳಿಗೆ ಪೆಟ್ಟು ಕೊಟ್ಟಿದೆ. ಸೆಕೆಂಡ್ ಹ್ಯಾಂಡ್ (ಬಳಸಿದ ವಾಹನ) ಕಾರುಗಳ ವ್ಯಾಪಾರವೂ ಇದರಿಂದ ಹೊರತಾಗಿರಲಿಲ್ಲ. ಈಗಷ್ಟೇ ಚೇತರಿಕೆ ಕಂಡುಕೊಂಡಿದೆ.

ಲಾಕ್‌ಡೌನ್‌ಗೂ ಮೊದಲು ತಿಂಗಳಿಗೆ ಕನಿಷ್ಠ 25 ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುತ್ತಿದ್ದವರು, ಇದೀಗ 10–15 ಕಾರುಗಳು ಮಾರಾಟ ಮಾಡುವ ಹಂತಕ್ಕೆ ಬಂದಿದ್ದಾರೆ.

ಹೊಸೂರಿನಿಂದ ಅಮರಗೋಳ ದವರೆಗೆ 10–15 ಕಡೆಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಲಾಕ್‌ಡೌನ್ ಅವಧಿಯ ನಷ್ಟ ತಗ್ಗಿಸಿಕೊಳ್ಳಲು ಇವರು ಇದೀಗ ಗ್ರಾಹಕರಿಗಾಗಿ ಎದುರು ನೋಡುತ್ತಿದ್ದಾರೆ. ‘ಲಾಕ್‌ಡೌನ್‌ಗಿಂತ ಮೊದಲು ವ್ಯಾಪಾರ ಚೆನ್ನಾಗಿತ್ತು. ಲಾಕ್‌ಡೌನ್ ಅವಧಿಯ ಎರಡು ತಿಂಗಳು ವ್ಯಾಪಾರ ಶೂನ್ಯವಾಗಿದ್ದ ಪರಿಣಾಮ ಅಂಗಡಿ ಬಾಡಿಗೆ, ಕೆಲಸದ ಹುಡುಗರ ಸಂಬಳವನ್ನು ಕೈಯಿಂದ ಹಾಕಿದ್ದೇವೆ. ಕನಿಷ್ಠ
₹ 3 ಲಕ್ಷ ನಷ್ಟ ಆಗಿದೆ. ಈಗ ಸ್ವಲ್ಪ ಚೇತರಿಕೆ ಕಾಣುತ್ತಿದ್ದೇವೆ’ ಎಂದು ಉಣಕಲ್ ಕ್ರಾಸ್ ಬಳಿಯ ವಿನಾಯಕ ಮೋಟರ್ಸ್‌ನ ಮಾಲೀಕ ವಿನಾಯಕ ಪರಿಸ್ಥಿತಿ ವಿವರಿಸುತ್ತಾರೆ. ಇನ್ನು ಕೆಲವರು ಬಾಡಿಗೆ ಮತ್ತು ಕೆಲಸದವರ ಅರ್ಧದಷ್ಟು ವೇತನ ಮಾತ್ರ ‍ಪಾವತಿ
ಸಿದ್ದಾರೆ. ಅಮರಗೋಳ ಬಳಿಯ ಶ್ರೀ ಬಾಲಾಜಿ ಮೋಟರ್ಸ್‌ನ ಹನುಮಂತ ಅವರು, ‘ಎರಡು ತಿಂಗಳು ಬಹಳವೇ ಕಷ್ಟವಾಗಿದೆ. ಈಗ ವ್ಯಾಪಾರ ಆದರೂ ಲಾಭ ಇಲ್ಲ. ಈಗ ಬರುವ ಹಣ ಎರಡು ತಿಂಗಳ ನಷ್ಟ ಸರಿದೂಗಿಸುವುದರಲ್ಲೇ ಖರ್ಚಾಗುತ್ತಿದೆ’ ಎನ್ನುತ್ತಾರೆ. ‘ನಮ್ಮ ಬಳಿ ಹಳ್ಳಿ ಜನರೇ ಹೆಚ್ಚಾಗಿ ಬರುತ್ತಿದ್ದರು. ಆದರೀಗ ಅವರಿಗೆ ಪಟ್ಟಣಕ್ಕೆ ಬರಲು ಸೂಕ್ತ ಸೌಕರ್ಯವಿಲ್ಲ. ಹೀಗಾಗಿ ಗ್ರಾಹಕರು ಬರುವುದು ಕಡಿಮೆ ಆಗಿದೆ. ಅದೂ ಅಲ್ಲದೆ ಈಗ ಕಾರು ಮಾರಾಟ ಮಾಡುವವರ ಸಂಖ್ಯೆಯೇ ಕಡಿಮೆ ಆಗಿದೆ’ ಎಂದು ಮಾರುಕಟ್ಟೆಯ ಪರಿಸ್ಥಿತಿಯನ್ನು ವಿವರಿಸುತ್ತಾರೆ ಉಣಕಲ್‌ನ ಗಣೇಶ ಮೋಟರ್ಸ್‌ನ ವ್ಯವಸ್ಥಾಪಕ ಅಶ್ಫಾಕ್. ಸಾರ್ವಜನಿಕ ಸಾರಿಗೆಗಳಲ್ಲಿ ಓಡಾಡುವುದಕ್ಕಿಂತ ಸ್ವಂತದ್ದೊಂದು ಕಾರ್ ಇದ್ದರೆ ಒಳ್ಳೆಯದು ಎಂಬ ಅಭಿಪ್ರಾಯ ಈಗ ಸಾಮಾನ್ಯ ಜನರಿಗೂ ಬಂದಿದೆ. ಅವರೀಗ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬೆಲೆಯ ಕಾರು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಇದೇ ವೇಳೆ ಜನರಲ್ಲಿ, ಇರುವ ಕಾರು ಮಾರಾಟ ಮಾಡುವ ಪ್ರವೃತ್ತಿಯೂ ಕಡಿಮೆ ಆಗಿದೆ. ಹೀಗಾಗಿ ಈಗಗಾಲೇ ಸಂಗ್ರಹವಿದ್ದ ಕಾರುಗಳನ್ನಷ್ಟೇ ಮಾರಾಟ ಮಾಡುತ್ತಿದ್ದಾರೆ ಕಮಿಷನ್ ಏಜೆಂಟರು.

‘ಸ್ವಂತ ಕಾರು ಇಟ್ಟುಕೊಳ್ಳುವ ರೂಢಿಯೂ ಹೆಚ್ಚುಕಾಲ ಇರುವುದಿಲ್ಲ. ಕೊರೊನಾ ಹೆದರಿಕೆ ಇರುವವರೆಗೆ ಮಾತ್ರ ಹೀಗೆ ನಡೆಯಬಹುದು. ಏನೇ ಆದರೂ ಈ ವರ್ಷ ಮತ್ತೆ ಮೊದಲಿನಂತೆ ವ್ಯಾಪಾರ ಚೇತರಿಸಿಕೊಳ್ಳುವುದು ಕಷ್ಟ’ ಎಂಬುದೇ ಕಾರು ಉದ್ದಿಮೆಯಲ್ಲಿ ಇರುವವರು ವ್ಯಕ್ತಪಡಿಸುವ ಅಭಿಪ್ರಾಯ.

***

ಈಗ ವ್ಯಾಪಾರ ಶೇ 10ರಷ್ಟು ಚೇತರಿಕೆ ಕಂಡಿದೆ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಅನುಭವಿಸಿದ ನಷ್ಟಕ್ಕೆ ಹೋಲಿಸಿದರೆ ಇದು ಏನಕ್ಕೂ ಸಾಲದು

–ವಿನಾಯಕ, ವಿನಾಯಕ ಮೋಟರ್ಸ್ ಮಾಲೀಕ

***

ಜನ ಕಡಿಮೆ ಬೆಲೆಯ ವಾಹನ ಕೇಳುತ್ತಿದ್ದಾರೆ. ಹೀಗಾಗಿ ಕಾರು ಮಾರಾಟವಾದರೂ ಮೌಲ್ಯ ಕಡಿಮೆ ಇರುವ ಕಾರಣ ನಮ್ಮ ಕಮಿಷನ್ ಪ್ರಮಾಣ ಕಡಿಮೆ ಇದೆ.
– ಹನುಮಂತ, ಶ್ರೀ ಬಾಲಾಜಿ ಮೋಟರ್ಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು