ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ತಬ್ಬಿದ, ಪೊಲೀಸಪ್ಪನಿಗೂ ಗುದ್ದಿದ!

ಪ್ರಾರ್ಥನಾ ಮಂದಿರದಲ್ಲಿ ಇಸ್ರೇಲ್ ಮಹಿಳೆ ಮೇಲೆ ದೌರ್ಜನ್ಯ
Last Updated 13 ನವೆಂಬರ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾರ್ಥನಾ ಮಂದಿರಕ್ಕೆ ಬಂದಿದ್ದ ಮಹಿಳೆಯನ್ನು ತಬ್ಬಿಕೊಂಡಿದ್ದಲ್ಲದೆ, ವಶಕ್ಕೆ ಪಡೆಯಲು ಬಂದ ಹೆಡ್‌ಕಾನ್‌ಸ್ಟೆಬಲ್‌ ಮುಖಕ್ಕೂ ಗುದ್ದಿದ ಆರೋಪದಡಿ ಜೂಲಿಯನ್ ಹೆರಿಬರ್ಟೋ ಎಂಬಾತನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ಸಂಜೆ 5 ಗಂಟೆಗೆ ಈ ಪ್ರಸಂಗ ನಡೆದಿದ್ದು, ಆರೋಪಿ ವಿರುದ್ಧ ಯಹೂದಿ ಸಮುದಾಯದ ಮುಖಂಡರಾದ ನೋವಾ ಪಿವ್ಕಿನ್ ದೂರು ಕೊಟ್ಟಿದ್ದರು. ಜೂಲಿಯನ್ ಸಹ ಇಸ್ರೇಲ್‌ನವಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅಶೋಕನಗರ ಪೊಲೀಸರು ಹೇಳಿದ್ದಾರೆ.

ರಿಚ್ಮಂಡ್ ರಸ್ತೆಯಲ್ಲಿ ಯಹೂದಿ ಸಮುದಾಯದ ಪ್ರಾರ್ಥನಾ ಮಂದಿರ ಇದೆ. ಅಲ್ಲಿನವರ ಮನವಿ ಮೇರೆಗೆ ಹಲವು ದಿನಗಳಿಂದ ಸಿಎಆರ್ ಹೆಡ್‌ಕಾನ್‌ಸ್ಟೆಬಲ್ ಸಂಪತ್‌ ಕುಮಾರ್ ಅವರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಆರೋಪಿ ಆರು ತಿಂಗಳ ಹಿಂದೆ ಈ ಮಂದಿರದಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದ. ಭಾನುವಾರ ಮಹಿಳೆಯೊಬ್ಬರು ಪ್ರಾರ್ಥನೆಗೆ ಬಂದಿದ್ದಾಗ ಅವರನ್ನು ತಬ್ಬಿಕೊಂಡ ಆತ, ‘ಯಾರಾದರೂ ಹತ್ತಿರ ಬಂದರೆ ಈಕೆಯನ್ನು ಸಾಯಿಸುತ್ತೇನೆ’ ಎಂದು ಚಾಕು ತೋರಿಸಿ ಬೆದರಿಸಿದ್ದ. ಈ ಹಂತದಲ್ಲಿ ಮಹಿಳೆಯ ರಕ್ಷಣೆಗೆ ಧಾವಿಸಿದ ಸಂಪತ್ ಅವರ ಮುಖಕ್ಕೆ ಗುದ್ದಿದ ಜೂಲಿಯನ್, ‘ಈ ವಿಚಾರಕ್ಕೆ ತಲೆ ಹಾಕಬೇಡಿ’ ಎಂದು ಕೂಗಾಡಿದ್ದ. ಕೊನೆಗೆ ಸಂಪತ್ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಸಿಬ್ಬಂದಿ, ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

‘ಜೂಲಿಯನ್ ವಿರುದ್ಧ ಲೈಂಗಿಕ ದೌರ್ಜನ್ಯ (ಐಪಿಸಿ 354ಎ), ಸರ್ಕಾರಿ ನೌಕರನ ಮೇಲೆ ಹಲ್ಲೆ (353), ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು (504) ಹಾಗೂ ಜೀವ ಬೆದರಿಕೆ (506) ಆರೋಪಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ತಾನು ಮಾನಸಿಕ ಅಸ್ವಸ್ಥ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ, ಆರೋಗ್ಯ ಸ್ಥಿತಿ ಉತ್ತಮವಾಗಿಯೇ ಇದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT