ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಗೆ ಕರಾಳವಾದ ರಾತ್ರಿ ಬಸ್ ಪ್ರಯಾಣ

ಚಲಿಸುತ್ತಿದ್ದ ಬಸ್ಸಿನಲ್ಲಿ ಕ್ಲೀನರ್‌ನಿಂದ ಅಸಭ್ಯ ವರ್ತನೆ * ಸಹಾಯಕ್ಕೆ ಬಾರದ ಪ್ರಯಾಣಿಕರು
Last Updated 17 ಜನವರಿ 2019, 19:09 IST
ಅಕ್ಷರ ಗಾತ್ರ

ಬೆಂಗಳೂರು: ಚಲಿಸುತ್ತಿದ್ದ ಬಸ್ಸಿನಲ್ಲೇ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ, ಅದೇ ಬಸ್ಸಿನ ಕ್ಲೀನರ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆ ಸಂಬಂಧ ಆರ್‌.ಎಂ.ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಷಕರ ಜೊತೆ ಠಾಣೆಗೆ ಬಂದು ದೂರು ನೀಡಿರುವ ವಿದ್ಯಾರ್ಥಿನಿ, ಶಿವಮೊಗ್ಗದಿಂದ ಬೆಂಗಳೂರಿಗೆ ಜ. 13ರಂದು ರಾತ್ರಿ ಹೊರಟಿದ್ದ ಬಸ್ಸಿನಲ್ಲಾದ ಕರಾಳ ಘಟನೆಯನ್ನು ಪೊಲೀಸರ ಎದುರು ಬಿಚ್ಚಿಟ್ಟಿದ್ದಾರೆ.

ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಕ್ಲೀನರ್‌ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಆತನ ಹೆಸರು ಸದ್ಯಕ್ಕೆ ಗೊತ್ತಾಗಿಲ್ಲ.

‘ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ 19 ವರ್ಷದ ಯುವತಿ, ಅದೇ ಕಾಲೇಜಿನ ವಸತಿನಿಲಯದಲ್ಲಿ ಉಳಿದುಕೊಂಡಿದ್ದಾರೆ. ರಜೆ ಇದ್ದಾಗಲೆಲ್ಲ ತಮ್ಮೂರಿಗೆ ಖಾಸಗಿ ಬಸ್ಸಿನಲ್ಲಿ ಹೋಗಿ ಬರುತ್ತಿದ್ದರು. ಇತ್ತೀಚೆಗೆ ಊರಿಗೆ ಹೋಗಿ ವಾಪಸ್‌ ಬೆಂಗಳೂರಿಗೆ ಬರುವಾಗ ಅವರ ಮೇಲೆ ಬಸ್ಸಿನ ಕ್ಲೀನರ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ’ ಎಂದು ಆರ್‌.ಎಂ.ಸಿ ಯಾರ್ಡ್ ಪೊಲೀಸರು ಹೇಳಿದರು.

ಆ ರಾತ್ರಿ ಆಗಿದ್ದೇನು: ‘ಒಂದು ವಾರ ಕಾಲೇಜಿಗೆ ರಜೆ ಇದ್ದಿದ್ದರಿಂದ ನಮ್ಮೂರಿಗೆ ಹೋಗಿದ್ದೆ. ಕಾಲೇಜಿನಲ್ಲಿ ಜ. 14ರಂದು ಪರೀಕ್ಷೆ ಇದ್ದಿದ್ದರಿಂದ ಜ. 13ರ ರಾತ್ರಿಯೇ ಊರಿನಿಂದ ಬೆಂಗಳೂರಿಗೆ ಬರಲು ‘ವಿಜಯಲಕ್ಷ್ಮಿ ಟ್ರಾವೆಲ್ಸ್’ ಬಸ್‌ ಹತ್ತಿದ್ದೆ’ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.

‘ನಾನೂ ಸೇರಿದಂತೆ ಸುಮಾರು 25 ಪ್ರಯಾಣಿಕರು ಬಸ್ಸಿನಲ್ಲಿದ್ದೆವು. ಚಾಲಕ, ವಿದ್ಯುತ್ ದೀಪಗಳನ್ನು ಆಫ್‌ ಮಾಡಿದ್ದ. ಎಲ್ಲ ಪ್ರಯಾಣಿಕರು ನಿದ್ದೆಗೆ ಜಾರಿದ್ದರು. ಮಧ್ಯರಾತ್ರಿ 1.15 ಗಂಟೆ ಸುಮಾರಿಗೆ ಯಾರೋ ನನ್ನ ಕೈ ಸ್ಪರ್ಶಿಸಿದ ಅನುಭವವಾಯಿತು. ಗಾಬರಿಗೊಂಡು ಮುಖಕ್ಕೆ ಮುಚ್ಚಿಕೊಂಡಿದ್ದ ಬೆಡ್‌ಶಿಟ್‌ ತೆಗೆದು ನೋಡಿದಾಗ, ಬಸ್ ಕ್ಲೀನರ್‌ ನನ್ನ ಪಕ್ಕದಲ್ಲೇ ಇದ್ದ. ತನ್ನ ಮುಖವನ್ನು ನನ್ನ ಮುಖದ ಬಳಿ ತಂದು ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಲಾರಂಭಿಸಿದ್ದ’.

‘ಕ್ಲೀನರ್‌ ವರ್ತನೆಯಿಂದ ತುಂಬಾ ಭಯವಾಯಿತು. ಜೋರಾಗಿ ಕಿರುಚಿದೆ. ಪ್ರಯಾಣಿಕರೆಲ್ಲರೂ ನಿದ್ದೆಗೆ ಜಾರಿದ್ದರಿಂದ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಆಗ ಕಿಟಕಿ ತೆರೆದು ಕೂಗಾಡಿದೆ. ಅದೇ ವೇಳೆ ಬಸ್ ಗೊರಗುಂಟೆಪಾಳ್ಯದ ತಾಜ್ ಹೋಟೆಲ್ ಎದುರು ಹೊರಟಿತ್ತು. ಕೂಡಲೇ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದೆ. ಅಂದೇ ಪರೀಕ್ಷೆ ಇದ್ದಿದ್ದರಿಂದ ಠಾಣೆಗೆ ಬಂದು ದೂರು ನೀಡಲು ಆಗಲಿಲ್ಲ. ಪರೀಕ್ಷೆ ಮುಗಿಸಿಕೊಂಡು ಬಂದು ದೂರು ನೀಡುತ್ತಿದ್ದೇನೆ’ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.

ಚಾಲಕನ ಮೇಲೆ ಹಲ್ಲೆ

ಯುವತಿ ಮೇಲಾದ ಲೈಂಗಿಕ ದೌರ್ಜನ್ಯದ ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿಗೆ ಬಂದಿದ್ದ ಸಂತ್ರಸ್ತೆಯ ಸಂಬಂಧಿಕರು, ‘ವಿಜಯಲಕ್ಷ್ಮಿ ಟ್ರಾವೆಲ್ಸ್’ ಚಾಲಕ ಎಚ್‌.ಮಂಜುನಾಥ್‌ನನ್ನು ಥಳಿಸಿದ್ದಾರೆ.

ಗಾಯಗೊಂಡಿದ್ದ ಮಂಜುನಾಥ್, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದರು. ಅದರನ್ವಯ ಯುವತಿಯ ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದಾರೆ.

‘ಬಸ್ಸಿನ ಕ್ಲೀನರ್‌ನನ್ನು ಬಂಧಿಸಿ ಜೈಲಿಗಟ್ಟಬೇಕಾದ ಪೊಲೀಸರು, ಲೈಂಗಿಕ ದೌರ್ಜನ್ಯ ಪ್ರಶ್ನಿಸಿದ್ದ ಯುವತಿಯ ಸಂಬಂಧಿಕರನ್ನು ಬಂಧಿಸಿದ್ದು ಯಾವ ನ್ಯಾಯ’ ಎಂದು ಸಂಬಂಧಿಕರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT