ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಚಪ್ಪಲಿಯಲ್ಲಿ ನಾವೇ ಹೊಡ್ಕೊಬೇಕು: ಶಂಕರ ಬಿದರಿ ಆಕ್ರೋಶ

ಪ್ರವಾಹ ಸಂತ್ರಸ್ತರಿಗೆ ನೆರವಾಗದ ಸಂಸದರ ವಿರುದ್ಧ
Last Updated 3 ಅಕ್ಟೋಬರ್ 2019, 19:24 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡದ ಸಂಸದರನ್ನು ಆಯ್ಕೆ ಮಾಡಿದ್ದಕ್ಕಾಗಿ ನಮ್ಮ ಚಪ್ಪಲಿಯಲ್ಲಿ ನಾವೇ ಹೊಡೆದುಕೊಳ್ಳಬೇಕು’ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಆಕ್ರೋಶ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಕಳೆದ 70 ವರ್ಷಗಳಲ್ಲಿ ಈ ರೀತಿಯ ಪ್ರವಾಹ ಯಾವಾಗಲೂ ಬಂದಿರಲಿಲ್ಲ. 60 ದಿನಗಳಿಂದ ಜನ ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಪರಿಹಾರ ನೀಡದೆ ಕೇಂದ್ರ ಸರ್ಕಾರ ಏನು ಮಾಡುತ್ತಿದೆ, ನಮ್ಮ ಸಂಸದರು ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಉತ್ತರ ಕರ್ನಾಟಕದ ಜನ ಮುಗ್ಧರು. ಕಳೆದ 20 ವರ್ಷಗಳಿಂದ ಒಂದೇ ಪಕ್ಷಕ್ಕೆ ನಿಷ್ಠೆ ತೋರಿಸುತ್ತಾ ಬಂದಿದ್ದಾರೆ. ಅವರು ಆಪತ್ತಿನಲ್ಲಿರುವ ಸಮಯದಲ್ಲಿ ಸಂಸದರು ಸಹಾಯ ಮಾಡುತ್ತಿಲ್ಲ. ಇಂಥವರನ್ನು ಆಯ್ಕೆ ಮಾಡಿದ್ದು ನಮ್ಮದೇ ತಪ್ಪು. ನಮ್ಮ ತಪ್ಪಿಗಾಗಿ ನಾವೇ ಚಪ್ಪಲಿ ಬಿಚ್ಚಿಕೊಂಡು ಹೊಡೆದುಕೊಳ್ಳುವಂತಾಗಿದೆ’ ಎಂದರು.

‘ಬಿಹಾರದಲ್ಲಿ ಉಂಟಾದ ಪ್ರವಾಹಕ್ಕೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿದೆ. ನೆರವು ನೀಡುವ ಭರವಸೆಯನ್ನೂ ನೀಡಿದೆ. ಪ್ರಧಾನಿ ಟ್ವೀಟ್ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ. ಅದೇ ರೀತಿಯ ಸಂಕಷ್ಟದಲ್ಲಿರುವ ಕರ್ನಾಟಕದ ಜನರನ್ನು ಮರೆತಿದ್ದಾರೆ’ ಎಂದು ಕಿಡಿಕಾರಿದರು.

ರಾಜಾಜಿನಗರ ಮೈದಾನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಸದಸ್ಯರು ಮೆರವಣಿಗೆ ನಡೆಸಿದರು.

ನೆರೆ ಪರಿಹಾರ ವಿಳಂಬ: ಶ್ರೀರಾಮುಲು ಕ್ಷಮೆ

‘ನೆರೆ ಪರಿಹಾರ ಕಾರ್ಯಕ್ಕಾಗಿ ಕೇಂದ್ರದಿಂದ ಪರಿಹಾರ ಸಿಗುವುದು ವಿಳಂಬವಾಗಿರುವುದಕ್ಕೆ ನಾನು ಜನರ ಕ್ಷಮೆ ಯಾಚಿಸುತ್ತೇನೆ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

‘ಕೇಂದ್ರಕ್ಕೆ ನೆರೆ ಪರಿಸ್ಥಿತಿಯ ಬಗ್ಗೆ ಅರಿವು ಇದೆ. ಆದರೆ, ಹಲವು ರಾಜ್ಯಗಳಿಗೆ ಪರಿಹಾರ ನೀಡಬೇಕಿರುವುದರಿಂದ ರಾಜ್ಯಕ್ಕೆ ಪರಿಹಾರ ನೀಡುವುದು ವಿಳಂಬವಾಗಿರಬಹುದು. ಪರಿಹಾರ ಬಂದೇ ಬರುತ್ತದೆ. ಸದ್ಯ ತೀರಾ ಅಗತ್ಯ ಇರುವಾಗ ಪರಿಹಾರ ಬಾರದೆ ವಿಳಂಬವಾಗಿರುವುದರಿಂದ ನನಗೂ ಬೇಸರವಾಗಿದೆ’ ಎಂದು ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT