ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊಟೊಮ್ಯಾಕ್ ಹಗರಣ: ಕೊಠಾರಿ ಬಂಧನ ಸಾಧ್ಯತೆ

ಕಾನ್ಪುರದಿಂದ ದೆಹಲಿಗೆ ತಂದೆ, ಮಗನನ್ನು ಕರೆದೊಯ್ದ ಅಧಿಕಾರಿಗಳು
Last Updated 21 ಫೆಬ್ರುವರಿ 2018, 19:36 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಳು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡದೆ ವಂಚಿಸಿದ ಆರೋಪ ಎದುರಿಸುತ್ತಿರುವ ರೊಟೊಮ್ಯಾಕ್ ಪೆನ್‌ ತಯಾರಿಕಾ ಕಂಪನಿಯ ನಿರ್ದೇಶಕ ವಿಕ್ರಮ್ ಕೊಠಾರಿ ಮತ್ತು ಅವರ ಪುತ್ರ ರಾಹುಲ್‌ ಕೊಠಾರಿಯನ್ನು ಸಿಬಿಐ ಯಾವುದೇ ಸಂದರ್ಭದಲ್ಲಿ ಬಂಧಿಸುವ ಸಾಧ್ಯತೆ ಇದೆ.

ಕಾನ್ಪುರದಿಂದ ತಂದೆ, ಮಗನನ್ನು ಬುಧವಾರ ದೆಹಲಿಯ ಸಿಬಿಐ ಪ್ರಧಾನ ಕಚೇರಿಗೆ ಕರೆ ತಂದಿರುವ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿಗಳನ್ನು ದೆಹಲಿಗೆ ಕರೆತಂದ ಕಾರಣವನ್ನು ಸಿಬಿಐ ಬಹಿರಂಗಪಡಿಸಿಲ್ಲ. ಆದರೆ, ಬಂಧಿಸುವ ಉದ್ದೇಶದಿಂದಲೇ ಇಬ್ಬರನ್ನೂ ದೆಹಲಿ ಕರೆತರಲಾಗಿದೆ ಎಂದು ಹೇಳಲಾಗಿದೆ.

ಇದಕ್ಕೂ ಮೊದಲು ಕೊಠಾರಿ ಮನೆ ಮತ್ತು ಕಚೇರಿಗಳಿರುವ ಕಾನ್ಪುರದಲ್ಲೇ ಸಿಬಿಐ ಅಧಿಕಾರಿಗಳುವಿಚಾರಣೆ ನಡೆಸಿದ್ದರು.

ರೊಟೊಮ್ಯಾಕ್ ಕಂಪನಿ ತನ್ನಿಂದ ಪಡೆದ ₹ 800 ಕೋಟಿ ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ಆಫ್ ಬರೋಡಾ ಸಿಬಿಐಗೆ ದೂರು ನೀಡಿತ್ತು.

ದೂರನ್ನು ಆಧರಿಸಿ ತನಿಖೆ ಆರಂಭಿಸಿದ ಸಿಬಿಐ, ರೊಟೊಮ್ಯಾಕ್ ಕಂಪನಿ ಒಟ್ಟು ಏಳು ಕಂಪೆನಿಗಳಿಂದ ₹ 2,919 ಕೋಟಿ ಸಾಲ ಪಡೆದಿರುವುದನ್ನು ಪತ್ತೆ ಮಾಡಿತ್ತು. ಸಾಲ ಮತ್ತು ಬಡ್ಡಿ ಸೇರಿ ಕಂಪನಿಯು ಒಟ್ಟು ₹ 3,695 ಕೋಟಿ ಬಾಕಿ ಉಳಿಸಿಕೊಂಡಿದೆ.

ಕೊಠಾರಿ, ಅವರ ಪತ್ನಿ ಸಾಧನಾ, ಮಗ ರಾಹುಲ್ ಮತ್ತು ರೊಟೊಮ್ಯಾಕ್‌ನ ಎಲ್ಲಾ ನಿರ್ದೇಶಕರು ಕಂಪನಿಗೆಂದು ಪಡೆದ ಸಾಲವನ್ನು ಬೇರೆ ಉದ್ದೇಶಕ್ಕೆ ಬಳಸಿದ ಆರೋಪ ಎದುರಿಸುತ್ತಿದ್ದಾರೆ.

ಇವರ ವಿರುದ್ಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದೆ. ಕೊಠಾರಿ ಮತ್ತು ಕುಟುಂಬದವರು ದೇಶ ಬಿಟ್ಟು ಹೋಗದಂತೆ ಜಾರಿ ನಿರ್ದೇಶನಾಲಯ ಎಚ್ಚರವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT