ಮದುವೆ ಆಮಿಷ: 16 ವಿಧವೆಯರಿಗೆ ವಂಚನೆ

7
ಜಾಹೀರಾತು ನೀಡಿ ಮಹಿಳೆಯರ ಪರಿಚಯ l ಹಣ, ಚಿನ್ನಾಭರಣ ಪಡೆದು ಪರಾರಿ

ಮದುವೆ ಆಮಿಷ: 16 ವಿಧವೆಯರಿಗೆ ವಂಚನೆ

Published:
Updated:
Prajavani

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ಪಡೆದು ರಾಜ್ಯದಾದ್ಯಂತ 16 ವಿಧವೆಯರಿಗೆ ವಂಚಿಸಿದ್ದ ಆರೋಪಿ ಡಿ.ಎಂ.ರಾಮಕೃಷ್ಣ (46) ಎಂಬಾತನನ್ನು ಶೇಷಾದ್ರಿಪುರ ಪೊಲೀಸರು ಸೆರೆ ಹಿಡಿದಿದ್ದಾರೆ.

‘ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ದೊಡ್ಡಮುಳಗೋಡು ಗ್ರಾಮದ ರಾಮಕೃಷ್ಣ, ‘ವಿಧವೆ ಅಥವಾ ವಿಚ್ಛೇದಿತ ವಧು ಬೇಕಾಗಿದ್ದಾರೆ’ ಎಂದು ಮೊಬೈಲ್ ನಂಬರ್ ಸಮೇತ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದ. ತನ್ನನ್ನು ಸಂಪರ್ಕಿಸುತ್ತಿದ್ದ ವಿಧವೆ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಮೋಸ ಮಾಡಿ ಪರಾರಿಯಾಗುತ್ತಿದ್ದ’ ಎಂದು ಶೇಷಾದ್ರಿಪುರ ಪೊಲೀಸರು ತಿಳಿಸಿದರು.

‘ಬೆಂಗಳೂರಿನ ಅಕ್ಷಯನಗರದ ಮಹಿಳೆಯೊಬ್ಬರು ಆರೋಪಿ ವಿರುದ್ಧ ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಸೆರೆಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನ ವಿರುದ್ಧ ಬೆಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ–ಧಾರವಾಡ ಜಿಲ್ಲೆಗಳ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅಲ್ಲಿಯ ಪೊಲೀಸರಿಗೆ ಆರೋಪಿ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದು ಹೇಳಿದರು.

₹25.90 ಲಕ್ಷ ಪಡೆದು ವಂಚನೆ: ‘ದೂರುದಾರ ಮಹಿಳೆ, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 2018ರ ಸೆಪ್ಟೆಂಬರ್ 2ರಂದು ಪತ್ರಿಕೆಯೊಂದರಲ್ಲಿ ಜಾಹೀರಾತು ನೋಡಿದ್ದ ಅವರು ಆರೋಪಿಯ ಮೊಬೈಲ್‌ಗೆ ಕರೆ ಮಾಡಿದ್ದರು. ಪರಸ್ಪರ ಮದುವೆ ಬಗ್ಗೆ ಮಾತನಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಸೆ. 30ರಂದು ಕೋರಮಂಗಲದ ಫೋರಂ ಮಾಲ್‌ಗೆ ಮಹಿಳೆಯನ್ನು ಕರೆಸಿಕೊಂಡಿದ್ದ ರಾಮಕೃಷ್ಣ, ‘ನಾನು ಆರೋಗ್ಯ ಇಲಾಖೆಯ ನೇಮಕಾತಿ ವಿಭಾಗದಲ್ಲಿ ಅಧಿಕಾರಿ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ತಂದೆ– ತಾಯಿಯನ್ನು ನಿಮ್ಮ ಮನೆಗೆ ಕಳುಹಿಸಿ ಮದುವೆ ಮಾತುಕತೆ ಮಾಡಿಸುತ್ತೇನೆ’ ಎಂದಿದ್ದ.

‘ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಎಫ್‌ಡಿಎ, ಎಸ್‌ಡಿಎ ಹಾಗೂ ಇತರೆ ಹುದ್ದೆಗಳನ್ನು ನಾನೇ ಭರ್ತಿ ಮಾಡಿಕೊಳ್ಳುತ್ತೇನೆ. ಪರಿಚಯಸ್ಥರು ಯಾರಾದರೂ ಹಣ ಕೊಟ್ಟರೆ ಹೇಳಿ, ಅವರನ್ನೇ ನೇಮಕ ಮಾಡಿಕೊಳ್ಳುತ್ತೇನೆ’ ಎಂದು ಸಹ ಆರೋಪಿ ತಿಳಿಸಿದ್ದ. ಅದನ್ನು ನಂಬಿದ್ದ ಮಹಿಳೆ, ಹುದ್ದೆ ಆಕಾಂಕ್ಷಿಗಳಾಗಿದ್ದ ಸಂಬಂಧಿಕರು ಹಾಗೂ ಸ್ನೇಹಿತರಿಂದ ₹22 ಲಕ್ಷ ಕೊಡಿಸಿದ್ದರು. ತಾವೂ ₹3.90 ಲಕ್ಷ ಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

ಹೋಟೆಲ್‌ಗೆ ಕರೆಸಿ ಅತ್ಯಾಚಾರ: ‘ಅಕ್ಟೋಬರ್ 28ರಂದು ಶೇಷಾದ್ರಿಪುರದ ನಟರಾಜ್ ಚಿತ್ರಮಂದಿರ ಬಳಿಯ ಹೋಟೆಲ್‌ಗೆ ಮಹಿಳೆಯನ್ನು ಕರೆಸಿದ್ದ ಆರೋಪಿ, ಅವರ ಮೇಲೆ ಅತ್ಯಾಚಾರ ಎಸಗಿದ್ದ. ಮದುವೆ ನೋಂದಣಿ ಮಾಡಿಸಬೇಕೆಂದು ಹೇಳಿ ಮಹಿಳೆಯ ಆಧಾರ್ ಕಾರ್ಡ್ ಹಾಗೂ ಅಂಕಪಟ್ಟಿಗಳನ್ನು ತೆಗೆದುಕೊಂಡು ಹೋಗಿದ್ದ’ ಎಂದು ವಿವರಿಸಿದರು.

‘ಅದಾದ ನಂತರವೂ ಮಹಿಳೆಯನ್ನು ಎರಡು ಬಾರಿ ಹೋಟೆಲ್‌ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದ. ಬಳಿಕ ಪರಾರಿಯಾಗಿದ್ದ. ಆತನ ಮೊಬೈಲ್ ಸಹ ಸ್ವಿಚ್ಡ್ ಆಫ್‌ ಆಗಿತ್ತು. ನೊಂದ ಮಹಿಳೆ ಜ. 9ರಂದು ಠಾಣೆಗೆ ದೂರು ನೀಡಿದ್ದರು’ ಎಂದು ಹೇಳಿದರು.

2006ರಿಂದಲೇ ಕೃತ್ಯ: ‘ಆರೋಪಿ ರಾಮಕೃಷ್ಣ, ಕೆಲವು ವರ್ಷ ಮುಂಬೈನಲ್ಲಿ ಕೆಲಸ ಮಾಡಿದ್ದ. ಅಲ್ಲಿಯ ಕೆಲಸ ಬಿಟ್ಟು 2006ರಲ್ಲಿ ತನ್ನೂರಾದ ದೊಡ್ಡಮುಳಗೋಡು ಗ್ರಾಮಕ್ಕೆ ಬಂದು ಪತ್ನಿ ಹಾಗೂ ಮಕ್ಕಳ ಜೊತೆ ನೆಲೆಸಿದ್ದ. ಅಲ್ಲಿಂದಲೇ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ’ ಎಂದರು.

‘ನಾನು ಶ್ರೀಮಂತ. ಬೆಂಗಳೂರು, ಮೈಸೂರಿನಲ್ಲಿ ಸ್ವಂತ ಮನೆ ಹಾಗೂ ಜಮೀನು ಇದೆ. ಪತ್ನಿ ಮೃತಪಟ್ಟಿದ್ದು, ಎರಡನೇ ಮದುವೆ ಆಗಲು ಇಚ್ಛಿಸಿದ್ದೇನೆ. ಆಸಕ್ತ ವಿಧವೆ ಹಾಗೂ ವಿಚ್ಛೇದಿತ ಮಹಿಳೆಯರು ಸಂಪರ್ಕಿಸಬಹುದು’ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸುತ್ತಿದ್ದ. ತನ್ನನ್ನು ಸಂಪರ್ಕಿಸುತ್ತಿದ್ದ ಮಹಿಳೆಯರಿಗೆ, ‘ನಾನು ಸರ್ಕಾರಿ ಅಧಿಕಾರಿ, ಉದ್ಯಮಿ’ ಎಂದು ಹೇಳುತ್ತಿದ್ದ’ ಎಂದರು. 

‘ವಂಚನೆಯಿಂದ ಬಂದ ಹಣವನ್ನು ಆರೋಪಿ, ಐಷಾರಾಮಿ ಜೀವನ ಹಾಗೂ ದುಶ್ಚಟಗಳಿಗೆ ಖರ್ಚು ಮಾಡುತ್ತಿದ್ದ. ಆತನ ವರ್ತನೆಯಿಂದ ಪತ್ನಿ ಹಾಗೂ ಮಕ್ಕಳು ಸಹ ಬೇಸತ್ತಿದ್ದರು. ಈ ಬಗ್ಗೆ ಅವರ ಹೇಳಿಕೆಯನ್ನೂ ಪಡೆಯಲಾಗಿದೆ’ ಎಂದು ಪೊಲೀಸರು ವಿವರಿಸಿದರು.

ಆರೋಪಿ ವಿರುದ್ಧದ ಪ್ರಕರಣಗಳು

* ಚಿಕ್ಕಮಗಳೂರಿನ ಕಲ್ಯಾಣನಗರದ ಮಹಿಳೆಯನ್ನು ಕಡೂರು ಪಟ್ಟಣಕ್ಕೆ ಕರೆಸಿಕೊಂಡಿದ್ದ ಆರೋಪಿ, ಅಲ್ಲಿಂದ ಅವರನ್ನು ಮೈಸೂರಿಗೆ ಕರೆದೊಯ್ದಿದ್ದ. ನಿದ್ರೆ ಮಾತ್ರೆ ಬೆರೆಸಿದ್ದ ಪಾನೀಯ ಕುಡಿಸಿ ಮಹಿಳೆಯ ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗಿದ್ದ. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

* ಬೆಂಗಳೂರಿನ ಬನಶಂಕರಿ ನಿವಾಸಿಯಾದ ಮಹಿಳೆಯನ್ನು ಸ್ಥಳೀಯ ಬಿಡಿಎ ಕಾಂಪ್ಲೆಕ್ಸ್ ಬಳಿ ಕರೆಸಿಕೊಂಡಿದ್ದ ಆರೋಪಿ, ಪೆಪ್ಸಿಯಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ ಕುಡಿಸಿದ್ದ. ಮಹಿಳೆ ಪ್ರಜ್ಞೆ ತಪ್ಪುತ್ತಿದ್ದಂತೆ 142 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.

ಮಹಿಳೆ ಹೆಸರಿನಲ್ಲಿ ಸಿಮ್‌ ಖರೀದಿ

‘ಮದುವೆ ನೋಂದಣಿ ಮಾಡಿಸಬೇಕೆಂದು ಹೇಳುತ್ತಿದ್ದ ಆರೋಪಿ, ಮಹಿಳೆಯಿಂದ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ಫೋಟೊಗಳನ್ನು ಪಡೆಯುತ್ತಿದ್ದ. ಅದೇ ದಾಖಲೆಗಳನ್ನು ಪಡೆದುಕೊಂಡು ಸಿಮ್‌ ಕಾರ್ಡ್‌ ಖರೀದಿಸುತ್ತಿದ್ದ. ಆ ಮೊಬೈಲ್ ಸಂಖ್ಯೆಯನ್ನೇ ಜಾಹೀರಾತಿನಲ್ಲಿ ಉಲ್ಲೇಖಿಸುತ್ತಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಆರಂಭದಲ್ಲಿ ಮೊಬೈಲ್ ಸಂಖ್ಯೆ ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು. ಸಿಮ್ ಕಾರ್ಡ್‌ ಖರೀದಿಸಲು ನೀಡಿದ್ದ ಗುರುತಿನ ಚೀಟಿಯಲ್ಲಿದ್ದ ವಿಳಾಸ ಪತ್ತೆ ಹಚ್ಚಿ ಮಹಿಳೆಯೊಬ್ಬರ ಮನೆಗೆ ಹೋಗಿದ್ದೆವು. ಆ ಮಹಿಳೆಯು ಸಹ ಆರೋಪಿಯಿಂದ ವಂಚನೆಗೆ ಒಳಗಾಗಿದ್ದು ಗೊತ್ತಾಗಿತ್ತು. ನಂತರ, ಅವರು ನೀಡಿದ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ವಿವರಿಸಿದರು.
**
ಮುಖ್ಯಾಂಶಗಳು
2006ರಿಂದಲೇ ಕೃತ್ಯ ಎಸಗುತ್ತಿದ್ದ

ಸರ್ಕಾರಿ ಅಧಿಕಾರಿ, ಉದ್ಯಮಿಯೆಂದು ಪರಿಚಯಿಸಿಕೊಳ್ಳುತ್ತಿದ್ದ

ಹೋಟೆಲ್‌ಗೆ ಕರೆಸಿ ಅತ್ಯಾಚಾರ ನಡೆಸಿದ್ದ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !